ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡದಲ್ಲಿಯೇ ಓದಿ ಸಾಧಿಸಿ

KannadaprabhaNewsNetwork | Published : Jul 25, 2024 1:18 AM

ಸಾರಾಂಶ

ಕರ್ನಾಟಕದ ನೆಲ, ಜಲ ಅಭಿಮಾನ ಹೊಂದುವುದರ ಜತೆಗೆ ಮಾತೃಭಾಷೆ ಹೃದಯ ಭಾಷೆ ಮಾಡಿಕೊಂಡು ಅಭಿಮಾನ ಮೆರೆಯಬೇಕು

ಮುಂಡರಗಿ: ಕನ್ನಡ ಶ್ರೀಮಂತ ಭಾಷೆ, ಪ್ರತಿಯೊಬ್ಬರೂ ಇಂಗ್ಲಿಷ್‌ ವ್ಯಾಮೋಹ ಬಿಟ್ಟು ಕನ್ನಡದಲ್ಲಿಯೇ ಓದಿ ಮಹತ್ತರ ಸಾಧನೆ ಮಾಡುವ ಮೂಲಕ ನಾವು ಅಂದುಕೊಂಡಿದ್ದನ್ನು ಸಾಧಿಸಬೇಕು ಎಂದು ರೋಟರಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಕೊಟ್ರೇಶ ಅಂಗಡಿ ಹೇಳಿದರು.

ಅವರು ಮಂಗಳವಾರ ಪಟ್ಟಣದ ವಿ.ಜಿ. ಲಿಂಬಿಕಾಯಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ಕಸಾಪ ವಿದ್ಯಾರ್ಥಿ ಘಟಕ ಆರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದ ನೆಲ, ಜಲ ಅಭಿಮಾನ ಹೊಂದುವುದರ ಜತೆಗೆ ಮಾತೃಭಾಷೆ ಹೃದಯ ಭಾಷೆ ಮಾಡಿಕೊಂಡು ಅಭಿಮಾನ ಮೆರೆಯಬೇಕು, ವಿದ್ಯಾರ್ಥಿಗಳು ಸಾಹಿತ್ಯದ ಒಲವು ಪಡೆದುಕೊಂಡು ಕವಿ ಕುವೆಂಪು ಆದರ್ಶ ರೂಢಿಸಿಕೊಳ್ಳಬೇಕು ಎಂದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಖ್ಯಾತ ವೈದ್ಯ ಡಾ. ಅನ್ನದಾನಿ ಮೇಟಿ ಮಾತನಾಡಿ, ಕನ್ನಡಕ್ಕೆ ತನ್ನದೆಯಾದ ಇತಿಹಾಸ ಇದೆ, 2 ಸಾವಿರ ವರ್ಷಗಳ ಪರಂಪರೆ ಹೊಂದಿದೆ.ಕನ್ನಡಕ್ಕೆ ನಾವೆಲ್ಲರೂ ಹೆಚ್ಚು ಮಹತ್ವ ನೀಡಿ ಬೆಳೆಸುವಂತಾಗಬೇಕು. ಕೀಳರಿಮೆ ಬಿಟ್ಟು ಉನ್ನತ ಹುದ್ದೆಗಳಿಗೆ ಹೋಗಲು ಕೂಡಾ ಮಾತೃ ಭಾಷೆಯೇ ಮುಖ್ಯ, ವೈದ್ಯಕೀಯ ತಾಂತ್ರಿಕ ಅಧ್ಯಯನದಲ್ಲಿ ಉಳಿದ ಬೇರೆ ರಾಜ್ಯಗಳ ಭಾಷೆಯಂತೆ ಮಾತೃ ಭಾಷೆ ಕನ್ನಡದಲ್ಲಿಯೇ ಓದುವ ಅವಕಾಶ ಸಿಗದೆ ಇರುವದು ವಿಪರ್ಯಾಸದ ಸಂಗತಿಯಾಗಿದೆ ಎಂದರು.

ಕುವೆಂಪು ಬದುಕು ಬರಹ ಕುರಿತು ಡಾ. ಕೆ.ಕೊಟ್ಟೂರಯ್ಯ ಮಾತನಾಡಿ, ಕನ್ನಡ ನಾಡಿನ ನೆಲ, ಜಲ, ಶ್ರೀಮಂತಿಕೆಯನ್ನು ತಮ್ಮ ಕವನಗಳ ಮೂಲಕ ಜಗತ್ತಿಗೆ ಪರಿಚಯಿಸಿದ ಮೇರು ವ್ಯಕ್ತಿತ್ವದ ಕವಿ ಕುವೆಂಪು. ಅವರು ನವೋದಯ ಕಾವ್ಯಕ್ಕೆ ಮುನ್ನುಡಿ ಬರೆದರು. ಆಂಗ್ಲ ಸಾಹಿತ್ಯದಿಂದ ಪ್ರಭಾವಗೊಂಡು ಕನ್ನಡದಲ್ಲಿ ಅನೇಕ ಕೃತಿ ರಚಿಸುವ ಮೂಲಕ ನಾಡಿನ ಹೆಮ್ಮೆಯ ಕವಿಯಾಗಿ ಪ್ರಥಮ ಜ್ಞಾನಪೀಠ ಪ್ರಶಸ್ತಿಗೆ ಬಾಜನರಾದರು. ಅವರ ಅನೇಕ ಕೃತಿಗಳಿಂದ ವಿದ್ಯಾರ್ಥಿಗಳು ಪ್ರಭಾವಿತರಾಗಿದ್ದಾರೆ. ಮಕ್ಕಳಿಗೆ ಅವರ ಸಾಹಿತ್ಯ ಪ್ರೇರಣೆಯಾಗಲಿ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಚ್.ಎಸ್. ನಾಡಗೌಡ್ರ, ಎಸ್.ವೈ. ನಾಡಗೌಡ್ರ, ಜೆ.ಎಸ್. ಅಳವಂಡಿ, ಕಸಾಪ ಉಪಾಧ್ಯಕ್ಷ ಶಂಕರ ಕುಕನೂರ, ಕಾರ್ಯಕಾರಿ ಮಂಡಳಿ ಸದಸ್ಯ ಸಿ.ಕೆ. ಗಣಪ್ಪನವರ, ಕೃಷ್ಣಮೂರ್ತಿ ಸಾಹುಕಾರ, ಶಶಿಕಲಾ ಕುಕನೂರ, ಲಿಂಗರಾಜ ದಾವಣಗೆರೆ, ಆರ್.ವೈ.ಪಾಟೀಲ, ಕೊಟ್ರೇಶ ಜವಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ವಿ. ಪಾಟೀಲ ಸ್ವಾಗತಿಸಿ, ಎಂ.ಬಿ.ನಾಗರಹಳ್ಳಿ ಅನುಷಾ ಸಂಶಿ ನಿರೂಪಿಸಿದರು.

Share this article