ಉಪ ಪಂಗಡಗಳನ್ನು ಬದಿಗಿಟ್ಟು ಬ್ರಾಹ್ಮಣ ಎಂದೇ ನಮೂದಿಸಿ: ಎಸ್‌. ರಘುನಾಥ್‌

KannadaprabhaNewsNetwork |  
Published : Sep 08, 2025, 01:00 AM IST
ಚಿಕ್ಕಮಗೂರಿನ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಅಶಕ್ತರು, ದಿವ್ಯಾಂಗರಿಗೆ ಮಾಶಾಸನ ವಿತರಣಾ ಕಾರ್ಯಕ್ರಮವನ್ನು ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಎಸ್‌. ರಘುನಾಥ್ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಮುಂಬರುವ ಜಾತಿ ಗಣತಿ ವೇಳೆ ಅಧಿಕಾರಿಗಳು ಸಮೀಕ್ಷೆಗಾಗಿ ಮನೆಗೆ ಬಂದಾಗ ಬ್ರಾಹ್ಮಣ ಸಮುದಾಯದವರು ತಮ್ಮ ಉಪ ಪಂಗಡಗಳನ್ನು ಬದಿಗಿಟ್ಟು ಬ್ರಾಹ್ಮಣ ಎಂದೇ ನಮೂದಿಸಬೇಕು ಎಂದು ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಎಸ್‌. ರಘುನಾಥ್ ಮನವಿ ಮಾಡಿದರು.

- ವಿದ್ಯಾರ್ಥಿ ವೇತನ ವಿತರಣೆ । ಪ್ರತಿಭಾ ಪುರಸ್ಕಾರ ಅಶಕ್ತರು, ದಿವ್ಯಾಂಗರಿಗೆ ಮಾಸಾಶನ ವಿತರಣಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮುಂಬರುವ ಜಾತಿ ಗಣತಿ ವೇಳೆ ಅಧಿಕಾರಿಗಳು ಸಮೀಕ್ಷೆಗಾಗಿ ಮನೆಗೆ ಬಂದಾಗ ಬ್ರಾಹ್ಮಣ ಸಮುದಾಯದವರು ತಮ್ಮ ಉಪ ಪಂಗಡಗಳನ್ನು ಬದಿಗಿಟ್ಟು ಬ್ರಾಹ್ಮಣ ಎಂದೇ ನಮೂದಿಸಬೇಕು ಎಂದು ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಎಸ್‌. ರಘುನಾಥ್ ಮನವಿ ಮಾಡಿದರು.ನಗರದ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಬ್ರಾಹ್ಮಣ ಮಹಾಸಭಾ ಮತ್ತು ದಿವಿಜ ಸೌಹಾರ್ದ ಸಹಕಾರಿ ಸಂಘ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಅಶಕ್ತರು, ದಿವ್ಯಾಂಗರಿಗೆ ಮಾಶಾಸನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರದ ಜಾತಿ ಗಣತಿಯ ಕ್ರಮ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಜಾತಿ ಗಣತಿ ಅರ್ಜಿಗಳಲ್ಲಿ ಕ್ರಿಶ್ಚಿಯನ್ ಬ್ರಾಹ್ಮಣ, ಕರ್ನಾಟಕ ಮುಜಾವರ್ ಬ್ರಾಹ್ಮಣ, ವೇದವ್ಯಾಸ ಕ್ರಿಶ್ಚಿಯನ್ ಬ್ರಾಹ್ಮಣ ಎಂದು ವಿಂಗಡಿಸಲಾಗಿದೆ ಎಂದು ಆರೋಪಿಸಿದ ಅವರು, ಇದರ ವಿರುದ್ಧ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಕ್ಷೇಪಣೆ ಸಲ್ಲಿಸಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಲಿದೆ ಎಂದು ತಿಳಿಸಿದರು.ಜಾತಿಗಣತಿ ವೇಳೆ ಅಧಿಕಾರಿಗಳು ಮನೆಗೆ ಬಂದಾಗ ಬ್ರಾಹ್ಮಣ ಸಮುದಾಯದವರು ಯಾವುದೇ ಕಾರಣಕ್ಕೂ ತಮ್ಮ ಉಪ ಪಂಗಡಗಳನ್ನು ನಮೂದಿಸಬಾರದು. ನಮ್ಮ ಉಪ ಪಂಗಡಗಳು ನಮ್ಮಲ್ಲೇ ಇರಲಿ, ಅದನ್ನು ಸರ್ಕಾರಕ್ಕೆ ತಿಳಿಸುವ ಅವಶ್ಯಕತೆ ಇಲ್ಲ. ಹಾಗಾಗಿ ದಯವಿಟ್ಟು ಎಲ್ಲರೂ ಬ್ರಾಹ್ಮಣ ಎಂದೇ ನಮೂದಿಸಬೇಕು ಎಂದರು.ರಾಜ್ಯದ ಬ್ರಾಹ್ಮಣ ಸಮುದಾಯದ ಕ್ಷೇಮಾಭಿವೃದ್ಧಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ₹100 ಕೋಟಿ ನಿಧಿ ಸ್ಥಾಪಿಸಲು ಮುಂದಾಗಿದ್ದು ಆ ಹಿನ್ನೆಲೆಯಲ್ಲಿ ಸಮುದಾಯದ ಸ್ಥಿತಿವಂತರಿಂದ ದೇಣಿಗೆ ಸಂಗ್ರಹಿಸುತ್ತಿದ್ದು ಈಗಾಗಲೇ ₹60 ಲಕ್ಷ ರು. ಸಂಗ್ರಹವಾಗಿದೆ ಎಂದು ಹೇಳಿದರು.ಈ ನಿಧಿ ಹಣವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಾಗೂ ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವು ನೀಡಲು ಬಳಸಲಾಗುವುದು ಎಂದರು. ಸಮುದಾಯದ ಎಲ್ಲರೂ ನಿಧಿಗೆ ದೇಣಿಗೆ ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣ ಮಹಾಸಭಾ ಸದಸ್ಯರಾಗಬೇಕು ಎಂದು ಮನವಿ ಮಾಡಿದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದಲೂ ಇನ್ನು ಮುಂದೆ ವಿದ್ಯಾರ್ಥಿ ವೇತನ ವಿತರಣೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.ಬ್ರಾಹ್ಮಣ ಮಹಾಸಭಾದ ರಾಜ್ಯ ಜಂಟಿ ಕಾರ್ಯದರ್ಶಿ ಡಾ. ಜಿ.ಎಸ್. ಮಹಾಬಲ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಮಹಾಸಭಾದೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಾಹ್ಮಣ ಮಹಾಸಭಾ ನಿರ್ದೇಶಕಿ ಎಸ್. ಶಾಂತಕುಮಾರಿ, ಸಮುದಾಯದ ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ 1989 ರಿಂದ ಪ್ರತಿ ವರ್ಷ ವಿದ್ಯಾರ್ಥಿ ವೇತನ ವಿತರಣೆ. ಪ್ರತಿಭಾ ಪುರಸ್ಕಾರ ಮಾಡಲಾಗುತ್ತಿದೆ. ಸಮುದಾಯದ 57 ಅಶಕ್ತರಿಗೆ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ. ಶೃಂಗೇರಿ ಮಠದ ಸಹಕಾರ ಮತ್ತು ಸಮುದಾಯದ ದಾನಿಗಳ ನೆರವಿನಿಂದ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೂ ನೀಡಲಾಗುವುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಸಮಾರಂಭದಲ್ಲಿ 35 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು, 38 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು. ದಿವಿಜ ಸೌಹಾರ್ದ ಸಹಕಾರಿ ಸಂಘದಿಂದ ಅಶಕ್ತ ಮಹಿಳೆಯರು, ಪುರುಷರು ಹಾಗೂ ದಿವ್ಯಾಂಗರಿಗೆ ಮಾಸಾಶನ ವಿತರಿಸ ಲಾಯಿತು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ರಾಜಶೇಖರ ರಾವ್, ಬ್ರಾಹ್ಮಣ ಮಹಾಸಭಾ ಖಜಾಂಚಿ ಶ್ಯಾಮಲಾ ರಾವ್, ಜಂಟಿ ಕಾರ್ಯದರ್ಶಿ ಎ.ಎನ್. ಗೋಪಾಲಕೃಷ್ಣ, ನಿರ್ದೇಶಕಿ ಜಯಶ್ರೀ ಜೋಷಿ, ಸುಮಾಪ್ರಸಾದ್, ದಾನಿ ಬಿ.ಎಸ್. ರಂಗನಾಥ್, ದಿವಿಜ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಡಿ.ಎಚ್. ನಟರಾಜ್ ಉಪಸ್ಥಿತರಿದ್ದರು. 7 ಕೆಸಿಕೆಎಂ 4ಚಿಕ್ಕಮಗೂರಿನ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಅಶಕ್ತರು, ದಿವ್ಯಾಂಗರಿಗೆ ಮಾಶಾಸನ ವಿತರಣಾ ಕಾರ್ಯಕ್ರಮವನ್ನು ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಎಸ್‌. ರಘುನಾಥ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಸಿದ್ದುಗೆ ಇದು ಕೊನೆ ಅಧಿವೇಶನ: ವಿಜಯೇಂದ್ರ
ಬಿವೈವಿ ಕಲೆಕ್ಷನ್‌ ಕಿಂಗ್‌, ಕಲೆಕ್ಷನ್‌ ಬಿಚ್ಚಿಡ್ಲಾ? : ಡಿಕೆ