ಕೊಪ್ಪಳ: ಚಾರಣದಿಂದ ಪರಿಸರ ಬಗ್ಗೆ, ಸ್ಥಳಗಳ ಬಗ್ಗೆ ಜ್ಞಾನಧಾರಣೆ ಆಗುತ್ತದೆ. ಅಲ್ಲದೆ ದೈಹಿಕ ಸದೃಢತೆ ಸಹ ಹೆಚ್ಚುತ್ತದೆ ಎಂದು ಎಸ್ಪಿ ರಾಮ್ ಎಲ್. ಅರಸಿದ್ದಿ ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೊಪ್ಪಳ ಚಾರಣ ಬಳಗದಿಂದ ನಗರದ ಪಾಲ್ಕಿಗುಂಡು, ಅಶೋಕನ ಶಾಸನ ವೀಕ್ಷಣೆ ಮತ್ತು ಸಾಹಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಚಾರಣಗಳಿಂದ ಮನುಷ್ಯನಿಗೆ ದೈಹಿಕ ಸಾಮರ್ಥ್ಯತೆ ಹೆಚ್ಚಿಸುವ ಜತೆಗೆ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ. ಮನೆಯಲ್ಲಿ ಮೊಬೈಲ್, ಟಿವಿ ನೋಡುತ್ತಾ ಕಾಲ ಕಳೆಯುವ ಬದಲು ಚಾರಣಗಳನ್ನು ಮಾಡಿದಾಗ ಮನಸ್ಸು ಹಗುರವಾಗುತ್ತದೆ. ಸುತ್ತಲಿನ ಪರಿಸರದ ಜ್ಞಾನ ದೊರೆಯುತ್ತದೆ ಎಂದರು.ರಜಾದಿನಗಳಲ್ಲಿ ಮನೆಯಲ್ಲಿ ಕುಳಿತು ಸಮಯ ವ್ಯರ್ಥ ಮಾಡುವ ಬದಲು ನೈಸರ್ಗಿಕ ಚಾರಣಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದರು.
ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಮಾತನಾಡಿ, ಪಾಲ್ಕಿಗುಂಡು ಶಾಸನದೊಂದಿಗೆ ಅಶೋಕನ ಕಾಲದ ಚರಿತ್ರೆಯನ್ನು ವಿವರಿಸುತ್ತಾ, ಮೌರ್ಯರ ಕಾಲದಲ್ಲೇ ಈ ಕೊಪ್ಪಳ ಖಜಾನೆ ಕೇಂದ್ರವಾಗಿತ್ತು. ಕುಪಣ ಎನ್ನುವ ಮುನಿ ಖಜಾನೆ ಅಧಿಕಾರಿಯಾಗಿದ್ದ. ಕುಪಣನ ಕಾಲದಲ್ಲಿ ಅವರದೇ ಹೆಸರಿನ ಮೇಲೆ ಈ ಗ್ರಾಮ ಗುರುತಿಸಿಕೊಂಡಿತ್ತು ಎಂದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್ ಮಾತನಾಡಿ, ಚಾರಣ ಕಾರ್ಯಕ್ರಮಗಳಿಗೆ ಇಲಾಖೆ ಸದಾ ಸಹಕಾರ ನೀಡುತ್ತದೆ. ಅದನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಉಪನ್ಯಾಸಕ ಡಾ. ರಾಜು ಹೊಸಮನಿ ಮಾತನಾಡಿದರು. ಇಲಾಖೆಯ ಕೋಚ್‌ಗಳಾದ ವಿಶ್ವನಾಥ ಕರ್ಲಿ, ದೀಪಾ ಅವರು ಚಾರಣಕ್ಕೆ ಮಾರ್ಗದರ್ಶನ ಮಾಡಿದರು. ಡಾ. ವಿಜಯಕುಮಾರ ಸುಂಕದ್ ವಂದಿಸಿದರು. ಚಾರಣವು ನಗರದ ಶಿಲ್ಪಾ ಗ್ರ್ಯಾಂಡ್ ಹೋಟೆಲ್ ಹಿಂಭಾಗದಿಂದ ಪ್ರಾರಂಭಗೊಂಡು ಪಾಲ್ಕಿಗುಂಡು ಅಶೋಕನ ಶಾಸನ ವೀಕ್ಷಿಸಿ ಕೊನೆಗೆ ಮರ್ದನಲಿ ದರ್ಗಾದ ಕೆಳಭಾಗದಲ್ಲಿ ಮುಕ್ತಾಯವಾಯಿತು. ಈ ಚಾರಣದಲ್ಲಿ ತೊಂಬತ್ತಕ್ಕೂ ಅಧಿಕ ಜನರು ಭಾಗವಹಿಸಿದ್ದರು.