ಕಲ್ಯಾಣ ಮಂಟಪಗಳಲ್ಲಿ ಚಿನ್ನಕದಿಯುತ್ತಿದ್ದ ಉಪನ್ಯಾಸಕಿ ಸೆರೆ

KannadaprabhaNewsNetwork |  
Published : Dec 24, 2025, 04:15 AM IST
ರೇವತಿ | Kannada Prabha

ಸಾರಾಂಶ

ಕಲ್ಯಾಣ ಮಂಟಪಗಳಲ್ಲಿ ಅತಿಥಿ ಸೋಗಿನಲ್ಲಿ ಹೋಗಿ ಹಣ-ಚಿನ್ನಾಭರಣ ಕಳವು ಮಾಡುತ್ತಿದ್ದ ಖಾಸಗಿ ಕಾಲೇಜಿನ ಉಪನ್ಯಾಸಕಿಯೊಬ್ಬಳನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಲ್ಯಾಣ ಮಂಟಪಗಳಲ್ಲಿ ಅತಿಥಿ ಸೋಗಿನಲ್ಲಿ ಹೋಗಿ ಹಣ-ಚಿನ್ನಾಭರಣ ಕಳವು ಮಾಡುತ್ತಿದ್ದ ಖಾಸಗಿ ಕಾಲೇಜಿನ ಉಪನ್ಯಾಸಕಿಯೊಬ್ಬಳನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್‌.ಪುರದ ನಿವಾಸಿ ರೇವತಿ ಬಂಧಿತಳಾಗಿದ್ದು, ಆರೋಪಿಯಿಂದ 32 ಲಕ್ಷ ರು. ಮೌಲ್ಯದ 262 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಬಸವನಗುಡಿಯ ಕಲ್ಯಾಣ ಮಂಟಪದಲ್ಲಿ ಚಿನ್ನಾಭರಣ ಕಳ್ಳತನ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಕೃತ್ಯದ ತನಿಖೆಗಿಳಿದ ಇನ್ಸ್‌ಪೆಕ್ಟರ್ ಸವಿತ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ತನ್ನ ಪತಿ ಹಾಗೂ ಮಗಳ ಜತೆ ಕೆ.ಆರ್‌.ಪುರ ಸಮೀತ ಶಿವಮೊಗ್ಗ ಜಿಲ್ಲೆಯ ನೆಲೆಸಿದ್ದ ರೇವತಿ, ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿ ಆಗಿ ಕೆಲಸ ಮಾಡುತ್ತಿದ್ದಳು. ಹಣದಾಸೆಗೆ ಕಲ್ಯಾಣ ಮಂಟಪಗಳಲ್ಲಿ ಅಪರಿಚಿತರ ಮದುವೆಗಳಿಗೆ ಅತಿಥಿ ಸೋಗಿನಲ್ಲಿ ಒಳ್ಳೆಯ ಉಡುಪು ಧರಿಸಿ ರೇವತಿ ತೆರಳುತ್ತಿದ್ದಳು. ಆಗ ವಧು-ವರರು ಹಾಗೂ ಅತಿಥಿಗಳ ಕೊಠಡಿಗಳಿಗೆ ಹೋಗಿ ಕುಶಲೋಪರಿ ಮಾತನಾಡುವ ನೆಪದಲ್ಲಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಳು. ಆಗ ಕೋಣೆಯಲ್ಲಿದ್ದ ಬ್ಯಾಗ್‌ಗಳಲ್ಲಿ ಹಣ ಹಾಗೂ ಚಿನ್ನಾಭರಣ ಕದ್ದು ಆಕೆ ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ಬಸವನಗುಡಿಯ ಕಲ್ಯಾಣ ಮಂಟಪಕ್ಕೆ ಮದುವೆಗೆ ಚಿಕ್ಕಲಸಂದ್ರ ಹತ್ತಿರದ ಮಂಜುನಾಥ ನಗರದ ನಿವಾಸಿ ತೆರಳಿದ್ದರು. ಆಗ ಅವರ 3 ಲಕ್ಷ ರು ಮೌಲ್ಯದ 32 ಗ್ರಾಂ ಚಿನ್ನ ಸರ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ರೇವತಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಕಳವು ಮಾಡಿ ಒಡವೆಗಳ ಪೈಕಿ ಕೆಲವು ಆಭರಣಗಳನ್ನು ಕಾಡುಬೀಸನಹಳ್ಳಿ ಸಮೀಪ ಬ್ಯಾಂಕ್‌ವೊಂದರಲ್ಲಿ ಅಡಮಾನವಿಟ್ಟು ಆಕೆ ಸಾಲ ಪಡೆದಿದ್ದಳು. ಇನ್ನುಳಿದ ಒಡವೆಯನ್ನು ತನ್ನ ಮನೆಯಲ್ಲೇ ಆಕೆ ಇಟ್ಟಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

ಹೃದಯ ಶಸ್ತ್ರ ಚಿಕಿತ್ಸೆಗೆ ವೆಚ್ಚ:

ರೇವತಿ ಪತಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚಿಗೆ ಅ‍ವರಿಗೆ ಹೃದಯ ಬೈಪಾಸ್ ಶಸ್ತ್ರ ಚಿಕಿತ್ಸೆ ಸಹ ಆಗಿದೆ. ಈ ವೈದ್ಯಕೀಯ ವೆಚ್ಚದ ಸಲುವಾಗಿ ತಾನು ಕಳ್ಳತನ ಮಾಡಿದ್ದಾಗಿ ಆಕೆ ಪೊಲೀಸರಿಗೆ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ಈಕೆಯ ಬಂಧನದಿಂದ ಬಸನವಗುಡಿ ಠಾಣೆಯಲ್ಲಿ ವರದಿಯಾಗಿದ್ದ 3 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಹೊರ ಜಿಲ್ಲೆಗಳಲ್ಲಿ ಸಹ ಆಕೆ ಕಳ್ಳತನ ಕೃತ್ಯ ಎಸಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ