ಕೊಪ್ಪಳ: ವಿವಾಹಿತೆಯನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಹಿಷ್ಕಾರ ತಲೆಬರಹದಡಿ ''''ಕನ್ನಡಪ್ರಭ'''' ಪ್ರಕಟಿಸಿದ ವಿಶೇಷ ವರದಿಯಿಂದ ಎಚ್ಚೆತ್ತ ಕೊಪ್ಪಳ ತಾಲೂಕಾಡಳಿತವೇ ಚಿಲಕಮುಕ್ಕಿ ಗ್ರಾಮಕ್ಕೆ ಭೇಟಿ ನೀಡಿ ಬಹಿಷ್ಕಾರ ತೆರವು ಮಾಡಿ ಎಲ್ಲರೂ ಒಂದಾಗಿ ಬಾಳದಿದ್ದರೆ ಕಾನೂನು ಕ್ರಮಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದೆ.
ತಹಸೀಲ್ದಾರ್ ವಿಠ್ಠಲ ಚೌಗಲೆ, ಗ್ರಾಮೀಣ ಠಾಣೆಯ ಪಿಎಸ್‌ಐ ಅಶೋಕ ಬೇವೂರು, ತಾಪಂ ಇಒ ದುಂಡಪ್ಪ ತೂರಾದಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳ ದಂಡೇ ಗ್ರಾಮಕ್ಕೆ ಭೇಟಿ ನೀಡಿ, ದೇವಸ್ಥಾನದಲ್ಲಿ ಸೌರ್ಹಾದ ಸಭೆ ನಡೆಸಿದರು.ಯಾರು ಯಾರ ಮೇಲೆಯೂ ಬಹಿಷ್ಕಾರ ಹಾಕುವುದಕ್ಕೆ ಅವಕಾಶ ಇಲ್ಲ. ತಪ್ಪು ಮಾಡಿದ್ದರೆ ನಿಯಮಾನುಸಾರ ಕ್ರಮ ವಹಿಸಬೇಕು. ಅದನ್ನು ಬಿಟ್ಟು ತಾವೇ ಬಹಿಷ್ಕಾರ ಹಾಕುವುದು ಅಕ್ಷಮ್ಯ ಅಪರಾಧ. ಹನುಮಂತಪ್ಪ ಹುಳ್ಳಿ ವಿವಾಹವಾಗಿದ್ದಕ್ಕೆ ಬಹಿಷ್ಕಾರ ಹಾಕಿದ್ದು ಅಲ್ಲದೆ ಆತ ಊರ ತೊರೆಯುವಂತೆ ಮಾಡಿದ್ದರಿಂದ ನಿಮ್ಮ ಮೇಲೆ ಎಫ್‌ಐಆರ್ ದಾಖಲು ಮಾಡಿ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಪರ್ವತ ಮಲ್ಲಯ್ಯ ಸಮಾಜದ ಹಿರಿಯರು ಮಾತನಾಡಿ, ನಾವು ಯಾರಿಗೂ ಬಹಿಷ್ಕಾರ ಹಾಕಿಲ್ಲ, ನಮ್ಮ ಹಿರಿಯರು ಕೆಲವರು ಬೇರೆ ಬೇರೆ ಊರಲ್ಲಿ ಇದ್ದಾರೆ. ಹೀಗಾಗಿ, ಅವರೆಲ್ಲರೂ ಸೇರಿ ವಾರದೊಳಗಾಗಿ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.ಗ್ರಾಪಂ ಮಾಜಿ ಸದಸ್ಯನಿಗೆ ಬಹಿಷ್ಕಾರ ಹಾಕಿದ ನಿಮ್ಮ ಮೇಲೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದಾಗ ನಾವೆಲ್ಲರೂ ಸೇರಿಯೇ ಇರುತ್ತೇವೆ, ಅವರು ಯಾರ ಮನೆಗಾದರೂ ಬರಲಿ, ಹೋಗಲಿ ಎಂದು ಹೇಳಿ ಅಲ್ಲಿಂದ ಹಿರಿಯರು ಎದ್ದು ಹೋಗಿದ್ದಾರೆ. ಹೀಗಾಗಿ, ತಹಸೀಲ್ದಾರ್ ವಿಠ್ಠಲ ಚೌಗಲೆ, ಸಮಸ್ಯೆಯನ್ನು ಇಂದಿನಿಂದಲೇ ಇತ್ಯರ್ಥ ಮಾಡಿಕೊಳ್ಳಿ, ಬಹಿಷ್ಕಾರ ಹಾಕುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಇಲ್ಲದಿದ್ದರೆ ನಿಮ್ಮ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದಾದ ಆನಂತರ ಸೌರ್ಹಾದತೆಯಿಂದ ಬದುಕುವ ಕುರಿತು ಸಂವಿಧಾನ ಪೀಠಿಕೆ ಓದಿ, ಎಲ್ಲರೂ ಸಮಾನತೆಯಿಂದ ಬದುಕೋಣ ಎಂದು ತಿಳಿ ಹೇಳಿ ಬಂದಿದ್ದಾರೆ.
ಕನ್ನಡಪ್ರಭ''''ದಲ್ಲಿ ವರದಿ ಬಂದಿದ್ದರಿಂದ ನಮ್ಮೂರಿಗೆ ಅಧಿಕಾರಿಗಳು ಬಂದು ನಮ್ಮ ಸಮಸ್ಯೆ ಬಗೆಹರಿಸಲು ಸೂಚಿಸಿದ್ದಾರೆ. ಸಮಾಜದ ಹಿರಿಯರು ವಾರದ ಗಡುವು ತೆಗೆದುಕೊಂಡಿದ್ದಾರೆ. ಅವರೆಲ್ಲರೂ ಸೇರಿ ಬೇಗ ಇತ್ಯರ್ಥ ಮಾಡಿ ನಮ್ಮ ಬಹಿಷ್ಕಾರ ತೆರವು ಮಾಡಲಿ ಎಂದು ಬಹಿಷ್ಕಾರಕ್ಕೆ ಒಳಗಾದ ಕುಟುಂಬದ ಹಿರಿಯ ಶಿವಾಜಪ್ಪ ಹುಳ್ಳಿ ಹೇಳಿದರು.ಬಹಿಷ್ಕಾರ ಹಾಕಿರುವುದು ಗೊತ್ತಾಗಿದೆ. ಗ್ರಾಪಂ ಮಾಜಿ ಸದಸ್ಯನಿಗೂ ಬಹಿಷ್ಕಾರ ಹಾಕಿದ್ದಾರೆ. ಹೀಗಾಗಿ, ಕಠಿಣ ಎಚ್ಚರಿಕೆ ನೀಡಿ ಸೌಹಾರ್ದದಿಂದ ಬಾಳಲು ಹೇಳಿದ್ದೇವೆ. ಇಲ್ಲದಿದ್ದರೆ ಎಫ್‌ಐಆರ್ ದಾಖಲಿಸಿ, ಕಾನೂನು ಕ್ರಮವಹಿಸಲು ಸೂಚಿಸಿದ್ದೇನೆ ಎಂದು ತಹಸೀಲ್ದಾರ್ ವಿಠ್ಠಲ ಚೌಗಲೆ ಹೇಳಿದರು.