ಕನ್ನಡಪ್ರಭ ವಾರ್ತೆ ಹುನಗುಂದ
ಹದಿನಾಲ್ಕು ವರ್ಷದ ಒಳಗಿನ ಮಕ್ಕಳಿಗೆ ಯಾವುದೇ ಕಾರ್ಖಾನೆ, ಹೋಟೆಲ್ ಅಥವಾ ಅಂಗಡಿಗಳಲ್ಲಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ. ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕೆಂದು ಪ್ರಧಾನ ದಿವಾಣಿ ನ್ಯಾಯಾಧೀಶ ಬಾಳಾಸಾಹೇಬ ವಡವಡೆ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಲಕಾರ್ಮಿಕರು ಶಿಕ್ಷಣದಿಂದ ವಂಚಿತವಾಗಬಾರದು. ಅವರನ್ನು ಮನವೂಲಿಸಿ ಶಾಲೆಗೆ ಕಳುಹಿಸಬೇಕು. ವಿದ್ಯಾರ್ಥಿಗಳಿಗೆ ಸಾಕಷ್ಟು ಸರ್ಕಾರ ವಿದ್ಯಾರ್ಥಿಗಳನ್ನು ಶಾಲೆಗೆ ಸೆಳೆಯಲು ಉಚಿತವಾಗಿ ಸೈಕಲ್, ವಿದ್ಯಾವೇತನ, ಪಠ್ಯಪುಸ್ತಕ, ಸಮವಸ್ತ್ರ, ಬಿಸಿಊಟ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದು, ಅವುಗಳನ್ನು ವಿದ್ಯಾರ್ಥಿಗಳು ಸೌಲಭ್ಯ ಸುದುಪಯೋಗ ಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು.ಕಾನೂನಿನ ಪ್ರಕಾರ ಮದುವೆಗೆ ಹುಡುಗಿಗೆ 18 ವಯಸ್ಸು ಹುಡುಗನಿಗೆ 21 ವಯಸ್ಸು ಕಡ್ಡಾಯವಾಗಿ ಆಗಿರಬೇಕು. ಆದರೂ ಕೂಡ ಕಾನೂನು ಮೀರಿಯೂ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹ ನಡೆಯುತ್ತಿರುತ್ತವೆ. ಅಂತಹ ಸಂದರ್ಭದಲ್ಲಿ ಅಧಿಕಾರಿಗಳಿಗೆ ಮಾಹಿತಿ ವಿದ್ಯಾರ್ಥಿಗಳು ನೀಡಬೇಕು. ಯುವಕರು 18 ವರ್ಷವಾದ ಮೇಲೆಯೇ ವಾಹನ ಚಲಾವಣೆ ಮಾಡಬೇಕು. ಡ್ರೈವಿಂಗ್ ಲೈಸೆನ್ಸ್, ಹೆಲ್ಮೆಟ್, ಇನ್ಶೂರೆನ್ಸ್ ಇದ್ದರೆ ಮಾತ್ರ ವಾಹನ ಚಲಾವಣೆ ಮಾಡಬೇಕು ಎಂದು ತಿಳಿಸಿದರು.ಸರ್ಕಾರಿ ವಕೀಲ ಮಾಧವ ಬಿ.ದೇಶಪಾಂಡೆ ಬಾಲಕಾರ್ಮಿಕ ನಿಷೇಧ ಕಾಯ್ದೆ ಕುರಿತು ಮಾತನಾಡಿದ ಅವರು, ಬಾಲಕಾರ್ಮಿಕರು ಹೆಚ್ಚು ರೈಲ್ವೆ ನಿಲ್ದಾಣ, ಬೀಡಿ, ಸಿಮೆಂಟ್, ಪಟಾಕಿ ತಯಾರಿಕೆ ಕಾರ್ಖಾನೆ, ಹೋಟೆಲ್, ಬಾರ್, ಕಟ್ಟಡ ನಿರ್ಮಾಣ, ಗ್ಯಾರೇಜ್‌ಗಳು ಮತ್ತಿತರ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಅನಿರೀಕ್ಷಿತ ಭೇಟೆ ನೀಡಿ ತಪಾಸಣೆ ಕೈಗೊಂಡು ಕ್ರಮಕೈಗೊಳ್ಳಬೇಕು. ಬಾಲಕಾರ್ಮಿಕರಿಂದ ದೇಶದಲ್ಲಿ ಜನಸಂಖ್ಯೆ ಸ್ಫೋಟವಾಗುತ್ತದೆ. ಆರ್ಥಿಕತೆ ಕಡಿಮೆಯಾಗುತ್ತದೆ. ಆರೋಗ್ಯದ ಮೇಲೆ, ಬೆಳವಣೆಗೆಯ ಮೇಲೆ ದೈಹಿಕ ಕುಗ್ಗುವಿಕೆಯಾಗುತ್ತದೆ. ಇಂದಿನ ದಿನಗಳಲ್ಲಿ ಉತ್ತಮ ಶಾಲೆಗಳು ಅನೇಕ ಕಲಿಕೆ ಸಾಕಷ್ಟು ಸೌಲಭ್ಯಗಳನ್ನು ಪಡೆದು ಉತ್ತಮ ಶಿಕ್ಷಣ ಪಡೆದುಕೊಂಡು ಒಳ್ಳೆಯ ಪ್ರಜೆಯಾಗಬೇಕು. ಕಲಿತು ಮುಂದೆ ಬಂದರೆ ದೇಶ ಅಭಿವೃದ್ದಿಯಾಗುತ್ತದೆ. ದೇಶ ಮುಂದೆ ಬರುತ್ತದೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಪಿ.ಎಸ್. ಕಠಾಣಿ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ ಮಾತನಾಡಿದರು. ಸಿಡಿಪಿಒ ವೆಂಕಪ್ಪ ಗಿರಿತಿಮ್ಮಣ್ಣವರ, ಕಾರ್ಮಿಕ ನಿರೀಕ್ಷಕ ರಾಜಶೇಖರ ಕುರಡಿಕೇರಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ವಕೀಲರ ಸಂಘದ ಉಪಾಧ್ಯಕ್ಷ ಪಿ.ಬಿ. ಹುಲ್ಲಾಳ, ಪ್ರಾಚಾರ್ಯ ಡಾ.ಸುರೇಶ ಎಚ್.ಎಸ್. ಉಪಸ್ಥಿತರಿದ್ದರು.