ವರ್ತಕರು ಮಾರಾಟ ನಿಯಮ ಪಾಲಿಸದಿದ್ದರೆ ಕಾನೂನು ಕ್ರಮ: ತಹಶೀಲ್ದಾರ್ ನರಸಪ್ಪ

KannadaprabhaNewsNetwork |  
Published : Jun 16, 2025, 03:36 AM IST
ಕುರುಗೋಡು ೦೧ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಜರುಗಿದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ತಹಸೀಲ್ದಾರ್ ನರಸಪ್ಪ ಮಾತನಾಡಿದರು | Kannada Prabha

ಸಾರಾಂಶ

ವರ್ತಕರು ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಕುರುಗೋಡು

ವರ್ತಕರು ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಹಶೀಲ್ದಾರ್ ನರಸಪ್ಪ ಎಚ್ಚರಿಸಿದರು.

ಇಲ್ಲಿನ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ತಾಲೂಕು ಆಡಳಿತ ಮತ್ತು ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಕೃಷಿ ಪರಿಕರಗಳ ಮಾರಾಟಗಾರರ ಸಭೆಯಲ್ಲಿ ಮಾತನಾಡಿದರು.

ಹೆಚ್ಚು ಲಾಭದಾಸೆಗಾಗಿ ಬೇಡಿಕೆ ಇರುವ ಉತ್ಪನ್ನಗಳ ಕೃತಕ ಮುಗ್ಗಟ್ಟು ಸೃಷ್ಟಿಸುವುದು ಮತ್ತು ಕಳಪೆ ಗಣಮಟ್ಟದ ಉತ್ಪನ್ನ ಮಾರಾಟ ಮಾಡಿ ರೈತರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಕಂಡುಬಂದರೆ ಪರವಾನಿಗೆ ರದ್ದು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತರಿಗೆ ತೊಂದರೆಯಾಗದಂತೆ ಕೃಷಿ ಇಲಾಖೆ ನಿಯಮಗಳ ಪ್ರಕಾರ ವ್ಯಾಪಾರ ವಹಿವಾಟು ನಡೆಸಿದರೆ ತಾಲೂಕು ಆಡಳಿತ ನಿಮ್ಮ ಬೆಂಬಲಕ್ಕೆ ಇರುತ್ತದೆ. ದೋಷ ಕಂಡುಬಂದರೆ ಕ್ರಮಕ್ಕೂ ಸೂಚಿಸಲಾಗುತ್ತದೆ ಎಂದರು.

ಅಗತ್ಯಕ್ಕೆ ತಕ್ಕಷ್ಟು ಪ್ರಮಾಣದಲ್ಲಿ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ದಾಸ್ತಾನು ಮಾಡಿಕೊಳ್ಳಿ. ರೈತರಿಗೆ ಯಾವುದೇ ಉತ್ಪನ್ನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ವರ್ತಕರಿಗೆ ಸೂಚಿಸಿದರು.

ಸಹಾಯಕ ಕೃಷಿ ನಿರ್ದೇಶಕ ದಯಾನಂದ್ ಮಾತನಾಡಿ, ಇಲಾಖೆಯಲ್ಲಿ ಪ್ರಮಾಣೀಕರಿಸಿದ ಕ್ರಿಮಿನಾಶಕ, ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡಬೇಕು. ಲಾಭದಾಸೆಗಾಗಿ ಕಳಪೆ ಗುಣಮಟ್ಟದ ಬಯೋ ಉತ್ಪನ್ನಗಳನ್ನು ಮಾಡಾಟ ಮಾಡಬಾರದು. ಪ್ರತಿಯೊಂದು ಉತ್ಪನ್ನದ ದಾಸ್ತಾನು ಮಾಹಿತಿ ಫಲಕ ಅಂಗಡಿಗಳನ್ನು ಗ್ರಾಹಕರಿಗೆ ಕಾಣುವಂತೆ ಅಳವಡಿಸಬೇಕು. ಖರೀದಿ ಮತ್ತು ಮಾರಾಟದ ಪ್ರತ್ಯೇಕ ವಹಿಗಳನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.

ಪರವಾನಿಗೆ ಪಡೆದ ನಿಗದಿತ ಸ್ಥಳದಲ್ಲಿ ಪರಿಕರಗಳ ದಾಸ್ತಾನು ಮಾಡಬೇಕು. ಪರವಾನಿಗೆ ಇಲ್ಲದ ಸ್ಥಳದಲ್ಲಿ ದಾಸ್ತಾನು ಮಾಡಿರುವುದು ಕಂಡುಬಂದರೆ ದಿಢೀರ್ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗುವುದು ಎಂದರು.

ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕ ಮುಜಿಬುರ್ ರೆಹಮಾನ್ ಮಾತನಾಡಿ, ಅನಧಿಕೃತ ದಾಸ್ತಾನು, ಇಲಾಖೆಯಿಂದ ಪ್ರಮಾಣೀಕರಿಸದ ಉತ್ಪನ್ನಗಳ ಮಾರಾಟ ಮತ್ತು ಭೂಮಿ ಮತ್ತು ರೈತರ ಮೇಲೆ ದುಷ್ಪರಿಣಾಮ ಭೀರುವ ನಿರ್ಬಂಧಿತ ಉತ್ಪನ್ನಗಳ ಮಾರಾಟ ಮತ್ತು ಹೆಚ್ಚಿ ಬೇಡಿಕೆ ಇರುವ ಉತ್ಪನ್ನಗಳ ಕಾಳಸಂತೆಯನ್ನು ಮಾರಾಟ ಮಾಡುವುದು ಪತ್ತೆ ಹಚ್ಚಲು ಇಲಾಖೆಯಲ್ಲಿ ಒಂದು ಪ್ರತ್ಯೇಕ ತಂಡ ಇದೆ. ಸಾರ್ವಜನಿಕರಿಂದ ದೂರುಗಳು ಬಂದರೆ ದಾಳಿ ನಡೆಸಿ ಸಂಬಂಧಿಸಿದ ವರ್ತಕರ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉಪ ಕೃಷಿ ನಿರ್ದೇಶಕ ಎಸ್.ಎನ್. ಮಂಜುನಾಥ, ಕೃಷಿ ಪರಿಕರ ಮಾರಾಟಗಾರರ ಸಂಘದ ತಾಲೂಕು ಅಧ್ಯಕ್ಷ ಸಿ.ಎಚ್. ಶೇಖರ್, ಕೃಷಿ ಅಧಿಕಾರಿ ಎಚ್. ದೇವರಾಜ ಮತ್ತು ಸುರೇಶ್, ಜೆ.ಅರುಣಾ, ಅರವಿ ಶರಣಬಸವ, ದೊಡ್ಡನಗೌಡ, ಸುತ್ತಮುತ್ತಲಿನ ಗ್ರಾಮಗಳ ವರ್ತಕರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ