ಕಲ್ಲು ತೂರಾಟ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ: ಶಾಸಕ ಕೆ.ಎಂ.ಉದಯ್

KannadaprabhaNewsNetwork |  
Published : Sep 09, 2025, 01:00 AM IST
ಶಾಸಕ ಕೆ.ಎಂ.ಉದಯ್ | Kannada Prabha

ಸಾರಾಂಶ

ಕೆಲ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈ ಘಟನೆಗೆ ರಾಜಕೀಯ ಬಣ್ಣ ಹಚ್ಚಿ ಜನರಲ್ಲಿ ಪ್ರಚೋದನೆ ಮೂಡಲು ಪ್ರಯತ್ನಿಸುತ್ತಿದ್ದಾರೆ. ಶಾಂತಿ ಸಂದೇಶ ನೀಡಬೇಕಾದ ಜಾಗದಲ್ಲಿ ಕೋಮು ಗಲಭೆಗೆ ಪ್ರಚೋದನೆ ಸರಿಯಲ್ಲ. ಮದ್ದೂರಿನಲ್ಲಿ ಇದುವರೆಗೆ ಈ ರೀತಿಯ ಘಟನೆ ನಡೆದಿಲ್ಲ. ಘಟನೆಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಈ ಕುರಿತು ಹೇಳಿಕೆ ನೀಡಿರುವ ಅವರು, ಭಾನುವಾರ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿದ್ದು ನಿಜಕ್ಕೂ ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಘಟನೆಗೆ ಕಾರಣರಾದವರು ಮತ್ತು ಇದರ ಹಿಂದೆ ಯಾರೇ ಇದ್ದರೂ ಅವರ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಮೆರವಣಿಗೆ ಮಸೀದಿ ಕಡೆಗಳಿಂದ ಕಲ್ಲು ಎಸೆದ ಘಟನೆಯನ್ನು ನಾನು ಖಂಡಿಸುತ್ತೇನೆ. ಪ್ರತಿ ವರ್ಷ ಗಣೇಶ ಹಬ್ಬದಂದು ಮದ್ದೂರು ಕ್ಷೇತ್ರದ ಪ್ರತಿ ಗ್ರಾಮಗಳಿಗೂ ನಮ್ಮ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಗಣೇಶ ವಿತರಣೆ ಮಾಡುತ್ತಿದ್ದು, ಈ ವರ್ಷ ಬೇರೆ ಕಾರ್ಯಕ್ರಮ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಗಣೇಶ ವಿತರಣೆ ಮಾಡಿಲ್ಲ ಎಂದರು.

ಶನಿವಾರದವರೆಗೂ ಕ್ಷೇತ್ರದಲ್ಲಿದ್ದು ಗಣೇಶ ಪ್ರತಿಷ್ಠಾಪನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಆದರೆ, ಈ ಘಟನೆ ನನಗೆ ತೀವ್ರ ನೋವು ಉಂಟು ಮಾಡಿದೆ. ಘಟನೆ ನಂತರ ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಪ್ಪತಸ್ಥರ ವಿರುದ್ಧ ಕ್ರಮ ವಹಿಸುವಂತೆ ಸೂಚಿಸಿದ್ದೇನೆ. ತಕ್ಷಣವೇ ಪೊಲೀಸರು ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು 21 ಮಂದಿಯನ್ನು ಈಗಾಗಲೇ ಬಂಧಿಸಿದ್ದಾರೆ ಎಂದರು.

ಕೆಲ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಈ ಘಟನೆಗೆ ರಾಜಕೀಯ ಬಣ್ಣ ಹಚ್ಚಿ ಜನರಲ್ಲಿ ಪ್ರಚೋದನೆ ಮೂಡಲು ಪ್ರಯತ್ನಿಸುತ್ತಿದ್ದಾರೆ. ಶಾಂತಿ ಸಂದೇಶ ನೀಡಬೇಕಾದ ಜಾಗದಲ್ಲಿ ಕೋಮು ಗಲಭೆಗೆ ಪ್ರಚೋದನೆ ಸರಿಯಲ್ಲ. ಮದ್ದೂರಿನಲ್ಲಿ ಇದುವರೆಗೆ ಈ ರೀತಿಯ ಘಟನೆ ನಡೆದಿಲ್ಲ. ಘಟನೆಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲು ಆಗದೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ರಾಜಕೀಯ ಕಾರಣಗಳಿಂದ ಜನರಲ್ಲಿ ಅಶಾಂತಿ ಉಂಟು ಮಾಡಲು ಯತ್ನಿಸುತ್ತಿವೆ. ಆದರೆ, ತಾಲೂಕಿನ ಜನ ಬುದ್ಧಿವಂತರು. ಕೋಮುವಾದಕ್ಕೆ ಅವಕಾಶ ನೀಡುವುದಿಲ್ಲ ಎಂದು ನಂಬಿದ್ದೇನೆ. ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಘಟನೆಯನ್ನು ಬಳಸಿಕೊಳ್ಳಬೇಡಿ ಬಿಜೆಪಿ-ಜೆಡಿಎಸ್ ವಿರುದ್ಧ ಕಿಡಿಕಾರಿದರು.

ಮದ್ದೂರು ಕ್ಷೇತ್ರದ ಜನರು ಇಂತಹ ಅಹಿತಕರ ಘಟನೆಗಳಿಂದ ಪ್ರಚೋದಿತರಾಗದೆ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿ. ಒಗ್ಗಟ್ಟು ಮತ್ತು ಅಭಿವೃದ್ಧಿಗೆ ಮಾದರಿಯಾಗಿ ಉಳಿಯಲು ಸಹಕರಿಸುವಂತೆ ಮನವಿ ಮಾಡಿದರು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು