ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳಿಗೆ ಕಾನೂನಿನ ತಿಳುವಳಿಕೆ ನೀಡಿದರೆ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಬಹುದು ಎಂದು ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅಭಿಪ್ರಾಯಪಟ್ಟರು.ನಗರದ ಸಮೀಪದ ಮಲ್ಲಯ್ಯನಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರ , ಚಾಮರಾಜನಗರ ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾನೂನು ಮತ್ತು ಶಿಕ್ಷಣದ ಬಗ್ಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರಗಳು ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ದಿನೇ ದಿನೇ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳು ಅಪರಾಧವೆಸಗದಂತೆ ಬಾಲ್ಯದಿಂದಲೇ ಸನ್ನಡತೆಯತ್ತ ಕೊಂಡೊಯ್ಯುವ ಮಹತ್ತರ ಜವಬ್ದಾರಿಯನ್ನು ಶಿಕ್ಷಕರು ವಹಿಸಬೇಕು. ಶಾಲೆಗಳಲ್ಲಿ ಹೆಚ್ಚು ಹೆಚ್ಚು ಕಾನೂನು ತಿಳಿವಳಿಕೆ ಮೂಡಿಸುವ ಕಾರ್ಯಕ್ರಮಗಳಿಗೆ ಶಾಲೆಯು ಮುಂದಾಗಬೇಕು. ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುವುದರ ಮೂಲಕ ಯಾರು ಕೂಡ ಅಪಾರಾಧದ ನಂಟು ಹೊಂದದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.ಬಾಲ್ಯ ವಿವಾಹ ತಡೆ ಕಾಯ್ದೆ, ಜನನ ಮತ್ತು ಮರಣ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ, ಮೋಟಾರು ವಾಹನ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ಇಂದುಶೇಖರ್ ತಿಳಿಸಿಕೊಟ್ಟರು. ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಮಾತನಾಡಿ, ಶಿಕ್ಷಣ ಎಂದರೆ ಪುಸ್ತಕದಲ್ಲಿರುವುದನ್ನು ಓದಿ ಹೇಳುವುದಲ್ಲ. ಶಿಕ್ಷಣ ಎಂದರೆ ಹೆಚ್ಚಿನ ಅಂಕಗಳಿಸುವುದಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳಾದ ಆತ್ಮವಿಶ್ವಾಸ, ಮನೋಬಲ, ಸಮಸ್ಯೆಗಳನ್ನು ನಿಭಾಯಿಸುವುದಕ್ಕಿಂತ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ, ವಿನಯವನ್ನು ಕಲಿಸುವುದಾಗಿದೆ ಎಂದರು.
ಶಾಲೆಯ ಪ್ರಾಂಶುಪಾಲ ಎಂ.ಎನ್.ಚಂದ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳು ಪಠ್ಯ ವಿಷಯಗಳೊಂದಿಗೆ ಕಾನೂನಿನ ಜ್ಞಾನ ಪಡೆಯುವುದರ ಮೂಲಕ ಉತ್ತಮ ಭವಿಷ್ಯ ರೂಪಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಯುವ ಸ್ಪಂದನ ಕೇಂದ್ರದ ಜಿಲ್ಲಾ ಯುವ ಪರಿವರ್ತಕ ಎಸ್.ಗುರುರಾಜು ಮಾತನಾಡಿದರು. ಶಾಲೆಯ ಶಿಕ್ಷಕರಾದ ರಾಜೇಶ್, ವಿ.ಗರುಡರಾಜು, ಎಂ.ಬಿ.ಲೀಲಾವತಿ, ರಶ್ಮಿ, ಸೌಮ್ಯ ಇದ್ದರು.