ಕನ್ನಡಪ್ರಭ ವಾರ್ತೆ ಬೇಲೂರು
ನೊಂದ, ಸಂತ್ರಸ್ತ ಮಹಿಳೆಯರು ಸ್ವಾಭಿಮಾನ ಉಳಿಸಿಕೊಳ್ಳಲು ಕಾನೂನು ಅರಿವು, ನೆರವು ಅಗತ್ಯ ಎಂದು ವಕೀಲ ಎಚ್. ಆರ್. ಚಂದ್ರು ಹೇಳಿದರು.ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಅಭಿಯೋಜನಾ ಇಲಾಖೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಮಹಿಳೆಯರ ಸಂರಕ್ಷಣಾ ಕಾಯ್ದೆ ಎಂಬ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಉಚಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಪಟ್ಟಣದ ಯೋಜನಾ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಕೀಲ ಚಂದ್ರು, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಭ್ರೂಣಹತ್ಯೆ, ಕನಿಷ್ಠ ವೇತನ ನೀಡದೇ ಇರುವುದು, ಉದ್ಯೋಗಸ್ಥೆ ಮಹಿಳೆಗೆ ಸೌಲಭ್ಯಗಳು ನೀಡಬೇಕು. ನೊಂದ ಹಾಗೂ ದೌರ್ಜನ್ಯಕ್ಕೆ ಒಳಗಾದ ಸಂತ್ರೆಸ್ತೆಯರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ಪ್ರತಿ ನ್ಯಾಯಾಲಯದಲ್ಲಿ ಈ ವ್ಯವಸ್ಥೆ ಇದೆ ನೊಂದ ಮಹಿಳೆಯರು ಸದುಪಯೋಗವನ್ನು ಪಡೆದುಕೊಳ್ಳಬೇಕು. ಮಹಿಳಾ ಸ್ವಾಂತನ ಕೇಂದ್ರ ನಡೆಸುವುದು ತುಂಬಾ ಕಷ್ಟದ ಕೆಲಸ. ನೊಂದ ಮಹಿಳೆಯರಿಗೆ, ನಿರಾಶ್ರಿತರಿಗೆ ಆಶ್ರಯ ನೀಡಿ ಅವರಿಗೆ ನ್ಯಾಯ ಕೊಡಿಸುವ ಮೂಲಕ ನೊಂದ ಮಹಿಳೆಯರಿದ್ದು, ಅವರಿಗೆ ಸೂಕ್ತ ನ್ಯಾಯ ಕೊಡಿಸವ ಕೆಲಸ ಮಾಡಬೇಕಿದೆ ಎಂದರು.ಮಹಿಳೆಯರು ಸಮಾಜ ಹಾಗೂ ಕುಟುಂಬದ ಎಲ್ಲ ಸ್ತರಗಳಲ್ಲಿ ತನ್ನ ಕಾರ್ಯಕ್ಷಮತೆ ಹಾಗೂ ಬದ್ಧತೆ ಪ್ರದರ್ಶಿಸಿದ್ದಾಳೆ. ಮಹಿಳೆ ತನ್ನ ಕಾರ್ಯಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೆರವೇರಿಸುತ್ತಾಳೆ. ಮಹಿಳೆ ನಿಸ್ವಾರ್ಥವಾಗಿ ತಾಯಿ, ಹೆಂಡತಿಯಾಗಿ ಸೇವೆ ಸಲ್ಲಿಸುತ್ತಾಳೆ. ಅವಳಿಗೆ ಎಂಥ ಉಡುಗೊರೆ ನೀಡಿದರೂ ಅವಳ ಸೇವೆಗೆ ಸಮನಾಗುವುದಿಲ್ಲ. ಹೀಗಾಗಿ ಮಹಿಳೆಯರು ಕೀಳರಿಮೆ ಬಿಟ್ಟು ಹೊರಬರಬೇಕು. ತಮಗೆ ಕಷ್ಟ ಉಂಟಾದಾಗ, ದೌರ್ಜನ್ಯಕ್ಕೆ ಒಳಗಾದಾಗ ಯಾವುದೇ ಮುಜುಗರಕ್ಕೆ ಒಳಗಾಗದೆ ಕಾನೂನಿನ ನೆರವು ಪಡೆಯಬೇಕು ಎಂದು ಹೇಳಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಜಿಲ್ಲಾ ನಿರ್ದೇಶಕಿ ಮಮತಾ ಮಾತನಾಡಿ, ಸ್ತ್ರೀ ಇಂದು ಸಮಾಜದಲ್ಲಿ ಗಂಡಸರಷ್ಟೇ ಸರಿಸಮಾನವಾಗಿ ದುಡಿದರೂ ಗಂಡಿನಷ್ಟೇ ಪ್ರಾಬಲ್ಯ ಇದ್ದರೂ ಹೆಣ್ಣಿನ ಶೋಷಣೆ ಮಾತ್ರ ನಿಲ್ಲದೆ ಇರುವುದು ವಿಪರ್ಯಾಸ. ನಿರಂತರವಾಗಿ ಸಮಾಜದಲ್ಲಿ ಅನ್ಯಾಯವಾಗುತ್ತಿದ್ದು ಅದರ ವಿರುದ್ಧ ಸಿಡಿದು ನಿಲ್ಲಬೇಕು. ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಸಾಂತ್ವನ ಕೇಂದ್ರ, ಸಹಾಯವಾಣಿ, ಮಹಿಳೆಯರ ರಕ್ಷಣಾ ಇಲಾಖೆಗೆ ನಿಮ್ಮ ಸಮಸ್ಯೆ ತಿಳಿಸಿದರೆ ನಿಮಗೆ ನ್ಯಾಯಸಿಗುತ್ತದೆ. ನಿಮ್ಮ ದುಃಖ ದುಮ್ಮಾನಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಅದನ್ನು ಕಾನೂನು ಮುಖಾಂತರ ತಂದು ಅಲ್ಲಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ನಾವು ಹಿಂಜರಿಕೆ ಮೊದಲು ಬಿಡಬೇಕು. ದೌರ್ಜನ್ಯ ಅನ್ಯಾಯವನ್ನು ಮಹಿಳೆಯರು ಎದುರಿಸುವಂತಹ ಶಕ್ತಿ ಬರಬೇಕು ಎಂದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಸಹಾಯಕ ಸರ್ಕಾರಿ ಅಭಿಯೋಜಕರಾದ ಗೀತಾಮಣಿ ಸೇರಿದಂತೆ ಇತರರು ಹಾಜರಿದ್ದರು.