ಕಾನೂನು ಅರಿವು ಸಮಾಜದ ನೆಮ್ಮದಿಗೆ ಆಧಾರ: ನ್ಯಾಯಾಧೀಶೆ ಹೇಮಾವತಿ

KannadaprabhaNewsNetwork |  
Published : Sep 27, 2026, 01:45 AM IST
26ಎಚ್ಎಸ್ಎನ್8 :  | Kannada Prabha

ಸಾರಾಂಶ

ಕಾನೂನುಗಳ ಸಂಖ್ಯೆ ಅಪಾರವಾಗಿರುವುದರಿಂದ ಎಲ್ಲ ಕಾನೂನುಗಳನ್ನೂ ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರೂ ತಮ್ಮ ಹಕ್ಕು, ಕರ್ತವ್ಯ ಹಾಗೂ ತಮ್ಮ ಸುತ್ತಮುತ್ತಲಿನವರಿಗೆ ಸಂಬಂಧಿಸಿದ ಪ್ರಮುಖ ಕಾನೂನುಗಳ ಬಗ್ಗೆ ಅರಿವು ಹೊಂದಿ, ಆ ಮಾಹಿತಿಯನ್ನು ಇತರರಿಗೂ ತಲುಪಿಸುವ ಪ್ರಯತ್ನ ಮಾಡಬೇಕು

ಕನ್ನಡಪ್ರಭವಾರ್ತೆ, ಹಾಸನ

ಕುಟುಂಬದಲ್ಲಿ ಉಂಟಾಗುವ ಕಾನೂನು ಸಮಸ್ಯೆಗಳು ಕೇವಲ ಆ ಕುಟುಂಬಕ್ಕೆ ಸೀಮಿತವಾಗದೆ, ಗ್ರಾಮ, ಸಮಾಜ ಹಾಗೂ ಒಟ್ಟಾರೆ ದೇಶದ ಪ್ರಗತಿ ಮೇಲೂ ಪರಿಣಾಮ ಬೀರುತ್ತವೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಹಕ್ಕು, ಕರ್ತವ್ಯ ಹಾಗೂ ಕಾನೂನಿನ ಮಿತಿ ಬಗ್ಗೆ ಕನಿಷ್ಠ ಅರಿವು ಹೊಂದಿರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹೇಮಾವತಿ ತಿಳಿಸಿದರು.

ನಗರದ ಎವಿಕೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿಮ್ಸ್ ಮನೋವೈದ್ಯಕೀಯ ವಿಭಾಗ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಪೋಕ್ಸೋ ಕಾಯಿದೆ, ಮಾದಕ ವಸ್ತುಗಳ ದುರ್ಬಳಕೆ ತಡೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಿಳಿಯದೆ ತಪ್ಪು ಮಾಡುವುದು ಕೂಡ ಕೆಲ ಸಂದರ್ಭಗಳಲ್ಲಿ ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗಬಹುದು. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಜತೆಗೆ ಕಾನೂನಿನ ಮಿತಿಗಳನ್ನೂ ಅರಿತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಬಾಲ್ಯವಿವಾಹ ಸೇರಿದಂತೆ ಹಲವು ಸಾಮಾಜಿಕ ಪಿಡುಗುಗಳನ್ನು ಕಾನೂನಿನ ಮೂಲಕ ನಿಯಂತ್ರಿಸಲಾಗಿದ್ದು, ಕಾನೂನು ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆರ್ಥಿಕವಾಗಿ ದುರ್ಬಲರಾಗಿರುವವರು ಹಣದ ಕೊರತೆಯಿಂದ ನ್ಯಾಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಅರ್ಹರಿಗೆ ಉಚಿತ ಕಾನೂನು ನೆರವು ಮತ್ತು ವಕೀಲರ ಸೇವೆ ಒದಗಿಸಲಾಗುತ್ತಿದೆ. ಅಗತ್ಯವಿರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಕಾನೂನುಗಳ ಸಂಖ್ಯೆ ಅಪಾರವಾಗಿರುವುದರಿಂದ ಎಲ್ಲ ಕಾನೂನುಗಳನ್ನೂ ತಿಳಿದುಕೊಳ್ಳುವುದು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರೂ ತಮ್ಮ ಹಕ್ಕು, ಕರ್ತವ್ಯ ಹಾಗೂ ತಮ್ಮ ಸುತ್ತಮುತ್ತಲಿನವರಿಗೆ ಸಂಬಂಧಿಸಿದ ಪ್ರಮುಖ ಕಾನೂನುಗಳ ಬಗ್ಗೆ ಅರಿವು ಹೊಂದಿ, ಆ ಮಾಹಿತಿಯನ್ನು ಇತರರಿಗೂ ತಲುಪಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿಜ್ಞಾನಿ, ವೈದ್ಯ, ಇಂಜಿನಿಯರ್ ಸೇರಿದಂತೆ ಯಾವುದೇ ವೃತ್ತಿ ಆಯ್ಕೆ ಮಾಡಿಕೊಂಡರೂ ಕಾನೂನಿನ ಅರಿವು ಅಗತ್ಯ. ಜನನದಿಂದ ಮರಣದವರೆಗೂ ಪ್ರತಿಯೊಬ್ಬರ ಜೀವನವೂ ಒಂದಲ್ಲೊಂದು ರೀತಿಯಲ್ಲಿ ಕಾನೂನಿನ ಚೌಕಟ್ಟಿನೊಳಗೆ ನಡೆಯುತ್ತದೆ. ಕಾನೂನಿನ ಅರಿವಿಲ್ಲದೆ ಸಮಾಜದಲ್ಲಿ ನೆಮ್ಮದಿಯಿಂದ ಬದುಕುವುದು ಕಷ್ಟ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಎವಿಕೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಶಿಕಲಾ ಎನ್.ಎಸ್. ವಹಿಸಿದ್ದರು. ಇದೆ ವೇಳೆ ಪ್ರಾಂಶುಪಾಲರಾದ ಕಾರ್ಮೇಲ್ ಶೀನಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಬಾಲಸುಬ್ರಮಣ್ಯಂ, ಪೊಲೀಸ್ ಉಪನಿರ್ದೇಶಕ ಗಂಗಾಧರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಧುಕುಮಾರಿ, ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಎಸ್.ವಿ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿಲೀಪ್ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯೋಗ ಸೃಷ್ಟಿಯಲ್ಲಿ ಎನ್‌ಡಿಎ ಸಂಪೂರ್ಣ ವಿಫಲ
ಇಎಸ್‌ಐ ಆಸ್ಪತ್ರೆಗೆ ಬಸವಂತಪ್ಪ ಭೇಟಿ: ಸ್ವಚ್ಛತೆ, ವೈದ್ಯಕೀಯ ಸೇವೆಗೆ ಮೆಚ್ಚುಗೆ