ಕಾರ್ಯದರ್ಶಿ, ಸಿಬ್ಬಂದಿಗೆ ಸಹಕಾರ ಕಾಯ್ದೆ ಕಾನೂನು ಅರಿವು ಬಹಳ ಮುಖ್ಯ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ನಿರಂತರವಾಗಿ ತರಬೇತಿ ಕಾರ್ಯಕ್ರಮಗಳಲ್ಲಿ ಸಿಬ್ಬಂದಿ ಭಾಗವಹಿಸುವಿಕೆಯಿಂದ ಹಾಲು ಒಕ್ಕೂಟದ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಟಿ.ಶಿವಶಂಕರಪ್ಪ ಶಿಕಾರಿಪುರದಲ್ಲಿ ನಡೆದ ಕಾರ್ಯಾಗಾರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ನಿರಂತರವಾಗಿ ತರಬೇತಿ ಕಾರ್ಯಕ್ರಮಗಳಲ್ಲಿ ಸಿಬ್ಬಂದಿ ಭಾಗವಹಿಸುವಿಕೆಯಿಂದ ಹಾಲು ಒಕ್ಕೂಟದ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ ಎಂದು ಶಿವಮೊಗ್ಗ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಟಿ.ಶಿವಶಂಕರಪ್ಪ ಹೇಳಿದರು.

ಪಟ್ಟಣದ ಸುರಭಿ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಲ, ಸಹಕಾರ ಯೂನಿಯನ್ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಶಿವಮೊಗ್ಗ ಸಹಕಾರ ಇಲಾಖೆ ಆಶ್ರಯದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಾರ್ಯದರ್ಶಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿ ಸಂಘಗಳಲ್ಲಿನ ಕಾರ್ಯದರ್ಶಿ, ಸಿಬ್ಬಂದಿಗೆ ಸಹಕಾರ ಕಾಯ್ದೆ ಕಾನೂನು ತಿಳಿವಳಿಕೆ ಬಹಳ ಮುಖ್ಯವಾಗಿದೆ. ಇಂತಹ ತರಬೇತಿಗಳಲ್ಲಿ ಹೆಚ್ಚು ಮಾಹಿತಿಯನ್ನು ಪಡೆದು, ತಮ್ಮ ಸಹಕಾರ ಸಂಘಗಳಲ್ಲಿ ಅಳವಡಿಸಿಕೊಂಡು ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಬೇಕು ಎಂದರು.

ಜಿಲ್ಲಾ ಸಹಕಾರ ಯೂನಿಯನ್ ವೃತ್ತಿಪರ ನಿರ್ದೇಶಕ ಎಂ.ನಾಗರಾಜಸ್ವಾಮಿ ಮಾತನಾಡಿ, ಜಿಲ್ಲಾ ಸಹಕಾರ ಯೂನಿಯನ್ ಶಿಕ್ಷಣ- ತರಬೇತಿ- ಪ್ರಚಾರ ನೀಡುವ ಸಂಸ್ಥೆಯಾಗಿದೆ. ಇಂತಹ ತರಬೇತಿಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವಿಕೆ ಮತ್ತು ಕಲಿಯುವಿಕೆ ಪ್ರಯೋಜನ ಪಡೆದು, ಅದನ್ನು ಕಾರ್ಯದರ್ಶಿಗಳು ನಿತ್ಯದ ವ್ಯವಹಾರದಲ್ಲಿ ಬಳಸಿಕೊಳ್ಳಬೇಕು. ಆ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ಡಿ.ಎಸ್. ಈಶ್ವರಪ್ಪ ಮಾತನಾಡಿ, ಯೂನಿಯನ್ ಮತ್ತು ಮಹಾಮಂಡಲ ವತಿಯಿಂದ ಜರುಗುವ ತರಬೇತಿ ಕಾರ್ಯಕ್ರಮಗಳಲ್ಲಿ ನೀಡುವ ತರಬೇತಿಯನ್ನು ಮತ್ತು ಅದರ ಉಪಯುಕ್ತತೆಯನ್ನು ಹೆಚ್ಚಿನ ಮಟ್ಟದಲ್ಲಿ ಪಡೆದುಕೊಳ್ಳುವಂತೆ ತಿಳಿಸಿ ಸಿಬ್ಬಂದಿಯ ಸಹಕಾರ, ಶಿಕ್ಷಣ ನಿಧಿ ಈ ರೀತಿಯ ತರಬೇತಿಗಳಿಗೆ ಉಪಯುಕ್ತತೆ ಆಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದರ ಉಪಯೋಗ ಸರ್ವ ಸಹಕಾರಿಗಳಿಗೆ ಮನಮುಟ್ಟುವಂತೆ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಯಂತ್ರಣ ಅಧಿಕಾರಿ ಎಚ್.ರಾಜು, ಯಶವಂತ್ ಕುಮಾರ್, ಲಲಿತಮ್ಮ, ಕೆ.ಸಿ. ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

- - - -19ಕೆಎಸ್‌.ಕೆಪಿ2:

ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಾರ್ಯದರ್ಶಿಗಳಿಗೆ ನಡೆದ ತರಬೇತಿ ಕಾರ್ಯಾಗಾರವನ್ನು ಶಿಮುಲ್‌ ನಿರ್ದೇಶಕ ಟಿ.ಶಿವಶಂಕರಪ್ಪ ಉದ್ಘಾಟಿಸಿದರು.

Share this article