ವಿಧಾನ ಪರಿಷತ್ ಚುನಾವಣೆ: ಅಲ್ಪಸಂಖ್ಯಾತರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲು ಒತ್ತಾಯ

KannadaprabhaNewsNetwork |  
Published : May 31, 2024, 02:15 AM IST
ಸುದ್ದಿಗೋಷ್ಠಿ | Kannada Prabha

ಸಾರಾಂಶ

ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ.ಎ.ಹನೀಫ್, ಕೊಡಗಿನಲ್ಲಿ ಬಿಜೆಪಿಯ ಭದ್ರಕೋಟೆ ಬೇಧಿಸುವಲ್ಲಿ ಮತ್ತು ಇಬ್ಬರು ಕಾಂಗ್ರೆಸ್ ಶಾಸಕರ ಗೆಲವಿನಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿದ್ದವು. ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಅಲ್ಪಸಂಖ್ಯಾತರ ಮತಗಳಿದ್ದು, ಇದರಲ್ಲಿ ಶೇ.99 ರಷ್ಟು ಮತಗಳು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊರಕಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನಲ್ಲಿ ಜಿಲ್ಲೆಯ ಅಲ್ಪಸಂಖ್ಯಾತರಿಗೆ ಅವಕಾಶವನ್ನು ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಅಲ್ಪಸಂಖ್ಯಾತರು ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿದ್ದು, ಈ ಬಾರಿ ವಿಧಾನ ಪರಿಷತ್ ಸ್ಥಾನವನ್ನು ಅಲ್ಪಸಂಖ್ಯಾತರೊಬ್ಬರಿಗೆ ನೀಡಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಆಗ್ರಹಿಸಿದೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಪಿ.ಎ.ಹನೀಫ್, ಕೊಡಗಿನಲ್ಲಿ ಬಿಜೆಪಿಯ ಭದ್ರಕೋಟೆ ಬೇಧಿಸುವಲ್ಲಿ ಮತ್ತು ಇಬ್ಬರು ಕಾಂಗ್ರೆಸ್ ಶಾಸಕರ ಗೆಲವಿನಲ್ಲಿ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿದ್ದವು. ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಅಲ್ಪಸಂಖ್ಯಾತರ ಮತಗಳಿದ್ದು, ಇದರಲ್ಲಿ ಶೇ.99 ರಷ್ಟು ಮತಗಳು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊರಕಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನಲ್ಲಿ ಜಿಲ್ಲೆಯ ಅಲ್ಪಸಂಖ್ಯಾತರಿಗೆ ಅವಕಾಶವನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್ತಿನ 11 ಸದಸ್ಯರ ಅಧಿಕಾರಾವಧಿ ಜೂ.17 ರಂದು ಕೊನೆಗೊಳ್ಳಲಿದೆ. ಅಲ್ಪಸಂಖ್ಯಾತ ಆಕಾಂಕ್ಷಿಗಳಲ್ಲಿ ಜಿಲ್ಲೆಯ ಓರ್ವರಿಗೆ ವಿಧಾನ ಪರಿಷತ್ ಸ್ಥಾನ ನೀಡುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಇಬ್ಬರು ಶಾಸಕರ ಬಳಿ ಕೋರಲಾಗಿದೆ ಎಂದರು.

ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಮಾತನಾಡಿ, ನಾನು ಕೂಡ ವಿಧಾನ ಪರಿಷತ್ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರು ನಮ್ಮ ಬೇಡಿಕೆಗೆ ಸ್ಪಂದಿಸುವ ವಿಶ್ವಾಸವಿದೆ ಎಂದರು.ಜಿಲ್ಲೆಯ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಕಾಂಗ್ರೆಸ್ ಪಕ್ಷವನ್ನು ನಿರಂತರವಾಗಿ ಬೆಂಬಲಿಸುತ್ತಲೇ ಬಂದಿದ್ದು, ಇವರು ಪಕ್ಷದ ಪ್ರಬಲ ಶಕ್ತಿಯಾಗಿದ್ದಾರೆ. ಆದುದರಿಂದ ಜಿಲ್ಲೆಯ ಶಾಸಕರು ನಮ್ಮ ಈ ಬೇಡಿಕೆ ಪರಿಗಣಿಸಿ, ವಿಧಾನ ಪರಿಷತ್ ನಲ್ಲಿ ಸ್ಥಾನ ಒದಗಿಸಲು ಕಾಂಗ್ರೆಸ್ ವರಿಷ್ಠರಿಗೆ ಶಿಫಾರಸ್ಸು ಮಾಡಬೇಕೆಂದರು.

ಹಿಂದಿನಿಂದಲೂ ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷವನ್ನು ಅಲ್ಪಸಂಖ್ಯಾತರು ಬೆಂಬಲಿಸುತ್ತಾ ಬಂದಿದ್ದಾರೆ. ಆದ್ದರಿಂದ ಈ ಬಾರಿ ನಮಗೆ ರಾಜಕೀಯ ಸ್ಥಾನಮಾನ ನೀಡಲು ಪಕ್ಷದ ಪ್ರಮುಖರು ಮುಂದಾಗಬೇಕು. ತಾನು ಸೇರಿದಂತೆ ಸುರಯ್ಯ ಅಬ್ರಾರ್, ಪಿ.ಎ.ಹನೀಫ್, ಅಬ್ದುಲ್ ರೆಹಮಾನ್, ಅಬ್ದುಲ್ ಸಲಾಂ ಅವರು ಆಕಾಂಕ್ಷಿಗಳಾಗಿರುವುದಾಗಿ ತಿಳಿಸಿದರು.

ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುರಯ್ಯ ಅಬ್ರಾರ್ ಮಾತನಾಡಿ, ಕಳೆದ ಎರಡೂವರೆ ದಶಕಗಳಿಂದ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಈ ಸಂದಿಗ್ಧ

ಅವಧಿಯಲ್ಲಿ ಕೂಡ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷವನ್ನು ಕೈ ಬಿಟ್ಟಿಲ್ಲ. ಈ ಹಿಂದೆ ಟಿ.ಜಾನ್ ಅವರು ವಿಧಾನ ಪರಿಷತ್ ಸದಸ್ಯರಾದ ಬಳಿಕ ಅಲ್ಪಸಂಖ್ಯಾತರಿಗೆ ವಿಧಾನ ಪರಿಷತ್‌ನಲ್ಲಿ ಅವಕಾಶಗಳು ದೊರೆತಿಲ್ಲ. ತಾನು ಕೂಡ ಈ ಬಾರಿಯ ಎಂಎಲ್‌ಸಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದರು.

ಹಿಂದೆ ಜಿಲ್ಲೆಯ ವೀಣಾ ಅಚ್ಚಯ್ಯ ಅವರಿಗೆ ವಿಧಾನ ಪರಿಷತ್ ಸ್ಥಾನವನ್ನು ನೀಡಿದ್ದರೆ, ತಾರಾ ಅಯ್ಯಮ್ಮ ಅವರಿಗೆ ನಿಗಮದಲ್ಲಿ ಅವಕಾಶ ಒದಗಿಸಲಾಗಿತ್ತು. ಸುಮಾ ವಸಂತ್ ಶಾಸಕರಾಗಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಬಾರಿ ತಾನು ಕೂಡ ಆಕಾಂಕ್ಷಿಯಾಗಿದ್ದು, ಕೊಡಗಿನ ಅಲ್ಪಸಂಖ್ಯಾತರನ್ನು ಪರಿಗಣಿಸಿ ವಿಧಾನ ಪರಿಷತ್ ನಲ್ಲಿ ಅವಕಾಶ ಕಲ್ಪಿಸಬೇಕು. ಮಹಿಳೆಯರಿಗೆ ಸ್ಥಾನ ನೀಡಿದರೆ ಇನ್ನೂ ಉತ್ತಮ ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಾವ ಸುದ್ದಿಗೋಷ್ಠಿಯಲ್ಲಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?