ಹೊಸಪೇಟೆ: ಅಂಗವಿಕಲರು ಸ್ವಾವಲಂಬಿಗಳಾಗಿ ಅವರ ಕಾಲ ಮೇಲೆ ಅವರು ನಿಲ್ಲಬೇಕು ಎಂಬುದು ಕಾಲು ಜೋಡಣಾ ಶಿಬಿರಗಳ ಆಶಯವಾಗಿದೆ. ಬಡವರ ಮುಖದಲ್ಲಿ ಮಂದಹಾಸ ನೋಡಬೇಕು ಎಂಬ ಆಶಯದೊಂದಿಗೆ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.
ಸಂಸ್ಥೆಯ ಮುಖ್ಯಸ್ಥೆ ಚಿತ್ರಾದೇವಿ ಬಲ್ಡೋಟ ಮಾತನಾಡಿ, ಕಳೆದ 11 ವರ್ಷಗಳಿಂದ ಈ ಶಿಬಿರ ಆಯೋಜಿಸುತ್ತಿದ್ದೇವೆ. ಶಿಬಿರದಲ್ಲಿ ಪಾಲ್ಗೊಳ್ಳುವವರಿಂದ ಯಾವುದೇ ರೀತಿಯ ಶುಲ್ಕ ಪಡೆಯುತ್ತಿಲ್ಲ. ಯಾವ ಭಾಗದವರು, ಯಾರು ಬೇಕಾದರೂ ಶಿಬಿರದಲ್ಲಿ ಭಾಗವಹಿಸಿ ಕೃತಕ ಕಾಲು ಜೋಡಿಸಿಕೊಳ್ಳಬಹುದು. ಶಿಬಿರಕ್ಕೆ ಬಂದಿರುವ ಫಲಾನುಭವಿಗಳನ್ನು ಪರಿಶೀಲಿಸಿ ಕೃತಕ ಕಾಲಿನ ಅವಶ್ಯಕತೆ ಇದ್ದವರಿಗೆ ಹೊಂದಿಕೊಳ್ಳುವ ರೀತಿಯಂತೆ ಅಳತೆ ತೆಗೆದು ಅವರಿಗೆ ಒಗ್ಗುವ ಹಾಗೂ ಒಪ್ಪುವ ರೀತಿಯಲ್ಲಿ ಕೃತಕ ಕಾಲುಗಳನ್ನು ತಯಾರಿಸಲಾಗುವುದು. ಕೃತಕ ಕಾಲು ಜೋಡಣಾ ಕಾರ್ಯ ಇನ್ನು ಎರಡು ದಿನ ನಡೆಯಲಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ನರೇಂದ್ರಕುಮಾರ್ ಬಲ್ಡೋಟ ಅಧ್ಯಕ್ಷತೆ ವಹಿಸಿದರು.ಭಗವಾನ್ ಮಹಾವೀರ್ ಜೈಪುರ್ ಅಂಗವಿಕಲ ಸಹಕಾರಿ ಸಮಿತಿಯ ಮುಖ್ಯಸ್ಥ ಅನಿಲ್ ಸುರಾನಾ ಇದ್ದರು. ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ಕೂಡ ಹಂಚಿಕೊಂಡರು.
ಹೊಸಪೇಟೆಯ ಸಹಕಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಎಂಎಸ್ ಪಿಎಲ್ ಹಾಗೂ ಭಗವಾನ್ ಮಹಾವೀರ್ ಜೈಪುರ್ ಅಂಗವಿಕಲ ಸಹಕಾರಿ ಸಮಿತಿಯಿಂದ ಉಚಿತ ಕೃತಕ ಕಾಲುಜೋಡಣೆ ಶಿಬಿರಕ್ಕೆ ಚಾಲನೆ ನೀಡಲಾಯಿತು.