ಕನ್ನಡಪ್ರಭ ವಾರ್ತೆ ನಂಜನಗೂಡು
ಕೇಂದ್ರ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ಘೋಷಿಸಿದೆ, ನಿಗದಿತ ಬೆಂಬಲ ಬೆಲೆಗೆ ರೈತರ ಉತ್ಪನ್ನಗಳನ್ನು ಖರೀದಿಸುವಂತೆ ಕಾನೂನು ರೂಪಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್ ಆಗ್ರಹಿಸಿದರು.ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಭಾನುವಾರ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಭತ್ತಕ್ಕೆ 3800 ಬೆಂಬಲ ಬೆಲೆ ಘೋಷಿಸಿದೆ. ಆದರೆ ರೈತರಿಂದ ದಲ್ಲಾಳಿಗಳು ಕ್ವಿಂಟಾಲ್ ಭತ್ತವನ್ನು 2500 ರೂಪಾಯಿಗೆ ಖರೀದಿಸುತ್ತಾರೆ. ಕೇಂದ್ರ ಸರ್ಕಾರ ತಾನು ಘೋಷಿಸಿದ ಬೆಂಬಲ ಬೆಲೆಗೆ ರೈತರ ಉತ್ಪನ್ನಗಳನ್ನು ಖರೀದಿಸುವಂತೆ ಕಾನೂನು ರಚಿಸಬೇಕು. ಇಲ್ಲದಿದ್ದರೆ ಸರ್ಕಾರದ ನೀತಿಗೆ ಬೆಲೆ ಇರುವುದಿಲ್ಲ. ರೈತರ ಸಂಕಷ್ಟಕ್ಕೆ ಪರಿಹಾರ ಲಭಿಸುವುದಿಲ್ಲ ಎಂದು ಅವರು ಹೇಳಿದರು.ರೈತ ಸಂಘ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ನಡೆಸುತ್ತಿದೆ. ಹಂಡುವಿನಹಳ್ಳಿ- ದೇಬೂರು ಕೆರೆಗೆ ಸೇರಿದ 27 ಎಕರೆ ಪ್ರದೇಶವನ್ನು ನಗರದ ಪ್ರಭಾವಿಯೊಬ್ಬ ನಕಲಿ ದಾಖಲೆ ಸೃಷ್ಟಿಸಿಕೊಂಡು ಲಪಟಾಯಿಸಿದ್ದ, ರೈತ ಸಂಘ ಹೋರಾಟ ನಡೆಸಿ ಕೆರೆಗೆ ಸೇರಿದ 27 ಎಕರೆ ಜಮೀನನ್ನು ಉಳಿಸಿದೆ, ಜಮೀನು ಲಪಟಾಸಿದ್ದ ಪ್ರಭಾವಿ ವ್ಯಕ್ತಿ ಹೋರಾಟಗಾರರ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ. ಇಂಥ ಎಷ್ಟೇ ಪ್ರಕರಣ ಹಾಕಿದರೂ ರೈತ ಸಂಘ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ರೈತ ಸಂಘದ ಹೋರಾಟದ ಫಲವಾಗಿ ಬೆಳಲೆ- ಶಿರಮಳ್ಳಿ ಭಾಗದ ರೈತರ 150 ಎಕರೆ ಜಮೀನಿಗೆ ವ್ಯವಸಾಯಕ್ಕೆ ನೀರು ಹರಿಯುತ್ತಿದೆ. ಗೋಮಾಳಗಳನ್ನು ಪ್ರಬಲರ ಕಪಿಮುಷ್ಠಿಯಿಂದ ಬಿಡಿಸಿದ್ದೇವೆ ಎಂದರು.
ನೀರಾವರಿ ಇಲಾಖೆ ಕಬಿನಿ ಬಲದಂಡೆ, ಹುಲ್ಲಹಳ್ಳಿ,ರಾಂಪುರ ನಾಲೆಗಳ ಮೂಲಕ ಗ್ರಾಮಗಳ ಕೆರೆಗಳನ್ನು ತುಂಬಿಸಬೇಕು. ರೈತರ ಜಮೀನಿಗೆ ನೀರು ಹರಿಸುವ ಮುನ್ನಾ ನಾಲೆಗಳಲ್ಲಿ ತುಂಬಿರುವ ಹೂಳು ತೆಗೆಸಬೇಕು. ಸ್ಥಳೀಯ ಶಾಸಕರು ನನೆಗುದಿಗೆ ಬಿದ್ದಿರುವ ನುಗು ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಬೇಕು. ಜು. 1ರೊಳಗೆ ನೀರಾವರಿ ಇಲಾಖೆ ನಾಲೆಗಳಲ್ಲಿ ತುಂಬಿರುವ ಹೂಳನ್ನು ತೆಗೆಸದಿದ್ದರೆ ತೀವ್ರ ಹೋರಾಟ ರೂಪಿಸಲಾಗುವುದು, ಕಾವೇರಿ ನೀರಾವರಿ ಇಲಾಖೆ ಕಚೇರಿಗೆ ರೈತರು ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಸಿದರು.ಗ್ರಾಮದ ನೂರಾರು ರೈತರಿಗೆ ಹಸಿರು ಶಾಲು ತೊಡಿಸಿ ರೈತ ಸಂಘಕ್ಕೆ ಸ್ವಾಗತಿಸಲಾಯಿತು.
ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್ರಾವ್, ಮುಖಂಡರಾದ ಮಂಜು ಕಿರಣ್, ಹಿಮ್ಮಾವು ರಘು, ಹರತಲೆ ಕೆಂಪಣ್ಣ, ಶ್ವೇತಾ, ಶೈಲಜಾ, ಮಹದೇವಸ್ವಾಮಿ, ಹೆಡತಲೆ ಶಂಕರ್, ತಿಮ್ಮಣ್ಣ, ಅಹಲ್ಯ ನಾಗರಾಜು, ರಂಗಸ್ವಾಮಿ ನಾಯಕ, ವೆಂಕಟೇಗೌಡ ಇದ್ದರು.