ಕಸ್ತೂರಿ ರಂಗನ್ ವರದಿ ಚರ್ಚೆಗೆ ಅಧಿವೇಶನ ಸ್ವಾಗತಾರ್ಹ: ಶಾಸಕ ಆರಗ ಜ್ಞಾನೇಂದ್ರ

KannadaprabhaNewsNetwork |  
Published : Sep 11, 2026, 01:45 AM IST
ಪೊಟೋ: 10ಎಸ್‌ಎಂಜಿಕೆಪಿ02ಶಿವಮೊಗ್ಗದ ಪತ್ರಿಕಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.  | Kannada Prabha

ಸಾರಾಂಶ

ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಕುರಿತು ವಿಶೇಷ ಅಧಿವೇಶನ ಕರೆದಿರುವುದನ್ನು ಸ್ವಾಗತಿಸುತ್ತೇನೆ. ಈ ವಿಚಾರದಲ್ಲಿ ನಾವೆಲ್ಲರೂ ಭಾಗವಹಿಸುತ್ತೇವೆ. ಅಂತಿಮವಾಗಿ ಪಕ್ಷಾತೀತವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ಕುರಿತು ವಿಶೇಷ ಅಧಿವೇಶನ ಕರೆದಿರುವುದನ್ನು ಸ್ವಾಗತಿಸುತ್ತೇನೆ. ಈ ವಿಚಾರದಲ್ಲಿ ನಾವೆಲ್ಲರೂ ಭಾಗವಹಿಸುತ್ತೇವೆ. ಅಂತಿಮವಾಗಿ ಪಕ್ಷಾತೀತವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆ ಹಾಗೂ ಅಲ್ಲಿನ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಪಕ್ಷಾತೀತವಾಗಿ ಚರ್ಚೆ ನಡೆಸಬೇಕಿದೆ. ಪರಿಸರ ಸಂರಕ್ಷಿಸುವ ಜನರನ್ನು ಹೊರಗಿಟ್ಟು ಸಾಧ್ಯವಿಲ್ಲ. ಹೀಗಾಗಿ ಪಶ್ಚಿಮ ಘಟ್ಟದ ನಿವಾಸಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದರು.ಗಾಡ್ಗಿಲ್ ವರದಿ ಹಾಗೂ ಕಸ್ತೂರಿ ರಂಗನ್ ವರದಿಗಳಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲೇ ಚಾಲನೆ ನೀಡಲಾಗಿತ್ತು. 2009–10ರ ಅವಧಿಯಲ್ಲಿ ಅಂದಿನ ಕೇಂದ್ರ ಪರಿಸರ ಸಚಿವ ಜೈರಾಮ್ ರಮೇಶ್ ಅವರ ನೇತೃತ್ವದಲ್ಲಿ ಗಾಡ್ಗಿಳ್‌ ಸಮಿತಿ ರಚನೆಯಾಗಿತ್ತು. ನಂತರ ಕಸ್ತೂರಿ ರಂಗನ್ ಸಮಿತಿಯನ್ನೂ ಯುಪಿಎ ಸರ್ಕಾರವೇ ನೇಮಿಸಿತ್ತು. ಈ ವಿಚಾರದಲ್ಲಿ ಮೊದಲ ಅಧಿಸೂಚನೆಯೂ ಯುಪಿಎ ಸರ್ಕಾರದ ಅವಧಿಯಲ್ಲೇ ಹೊರಬಂದಿತ್ತು ಎಂದು ಹೇಳಿದರು.2008 ರಿಂದ 2018ರವರೆಗೆ ಕಿಮ್ಮನೆ ರತ್ನಾಕರ್ ಶಾಸಕರಾಗಿದ್ದ ಅವಧಿಯಲ್ಲೇ ಗಾಡ್ಗಿಳ್‌ ಹಾಗೂ ಕಸ್ತೂರಿ ರಂಗನ್ ವರದಿಗಳು ಬಂದಿದ್ದವು. ಆಗ ಮೌನವಾಗಿದ್ದವರು ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈಗ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕಸ್ತೂರಿ ರಂಗನ್ ವರದಿ ಕುರಿತು ಎಷ್ಟು ಅಧ್ಯಯನವಿದೆ ಎಂಬುದು ಪ್ರಶ್ನೆಯಾಗಿದ್ದು, ಈ ವಿಚಾರದಲ್ಲಿ ಮಾತನಾಡುವ ಮುನ್ನ ಸಮಗ್ರ ಅಧ್ಯಯನ ಮಾಡುವುದು ಸೂಕ್ತ. ಬಾಯಿಗೆ ಬಂದಂತೆ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದರು.ಕೇಂದ್ರಕ್ಕೆ ವರದಿ ಸಲ್ಲಿಸಿ: ಕೇರಳ ಮಾದರಿಯಲ್ಲಿ ಪಶ್ಚಿಮ ಘಟ್ಟದ ಯಾವ ಪ್ರದೇಶಗಳನ್ನು ವರದಿಯ ವ್ಯಾಪ್ತಿಗೆ ಸೇರಿಸಬೇಕು, ಯಾವುದನ್ನು ಹೊರಗಿಡಬೇಕು ಎಂಬುದರ ಕುರಿತು ರಾಜ್ಯ ಸರ್ಕಾರ ಸಮಗ್ರ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಬೇಕು. ಆ ಕೆಲಸ ಮಾಡುವ ಬದಲು ಕೇಂದ್ರ ಸರ್ಕಾರವನ್ನು ದೂರುವುದು ಸರಿಯಲ್ಲ ಎಂದರು.ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ನೂರು ದಿನಗಳ ಆಡಳಿತದಲ್ಲಿ ಗಮನಾರ್ಹ ಸಾಧನೆ ಕಾಣುತ್ತಿಲ್ಲ. ಮತದಾರರು ನೀಡಿದ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಲಂಚಗುಳಿತನ ಮತ್ತು ಭ್ರಷ್ಟಾಚಾರಕ್ಕೆ ಸರ್ಕಾರದಲ್ಲಿ ಅವಕಾಶ ನೀಡಲಾಗಿದೆ ಎಂದು ಆರೋಪಿಸಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಬಳ್ಳಾರಿ ಪಾದಯಾತ್ರೆ ರಾಜ್ಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಅದು ಇದೀಗ ಜನಾಕ್ರೋಶದ ಯಾತ್ರೆಯಾಗಿ ಪರಿವರ್ತನೆಯಾಗಿದೆ. ಬರಗಾಲ ಸಹಿತ ರಾಜ್ಯದ ಜನರ ಸಮಸ್ಯೆಗಳ ವಿಚಾರದಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ನಡೆಸಿದ ಹೋರಾಟಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.ಕಸ್ತೂರಿ ರಂಗನ್ ವರದಿ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕಾಂಗ್ರೆಸ್ ನಾಯಕರು ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು, ತಮ್ಮದೇ ಸರ್ಕಾರದ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಜನರ ಮುಂದೆ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಡಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಗ್ರಾಮಾಂತರ ಪ್ರಧಾನ‌ ಕಾರ್ಯದರ್ಶಿ ಗಣೇಶ್, ಯುವರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲುಷಿತ ನೀರು ಸೇವನೆ: ಮೊರಾರ್ಜಿ ವಸತಿ ಶಾಲೆಯ 43 ಮಕ್ಕಳು ಅಸ್ವಸ್ಥ
ಮಿಲಿಟರಿಯಿಂದ ಶಿಸ್ತು ಬದ್ದ ಜೀವನ ಸಾಧ್ಯ