ಕನ್ನಡಪ್ರಭ ವಾರ್ತೆ ಹನೂರುಅರಣ್ಯದಂಚಿನ ಗ್ರಾಮಗಳಲ್ಲಿ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ ಹೆಚ್ಚಾಗಿದ್ದು, ಮಾನವ ಪ್ರಾಣಿ ಸಂಘರ್ಷ ನಿರಂತರವಾಗಿದೆ. ಹನೂರು ತಾಲೂಕಿನ ಗಂಗನ ದೊಡ್ಡಿ ಗ್ರಾಮದ ಶಿವಲಿಂಗ ಹಾಗೂ ಗೋವಿಂದ ಎಂಬ ರೈತರ ಜಮೀನುಗಳಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಚಿರತೆ ದಾಳಿ ನಡೆಸಿ ಮೇಕೆಗಳನ್ನು ತಿಂದು ಹಾಕಿದೆ.
ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ, ರೈತರ ಆರೋಪ:ಮಲೆಮಾದೇಶ್ವರ ವನ್ಯಜೀವಿ ವಿಭಾಗದ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಉಪಟಳ ಹೆಚ್ಚಾಗಿದ್ದು ರೈತರು ಸಂಕಷ್ಟಕ್ಕೀಡಾಗುವುದರ ಜೊತೆಗೆ ಭಯದ ವಾತಾವರಣದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗುವಂತಾಗಿದೆ. ಕಳೆದ ಒಂದು ವರ್ಷದಿಂದ ನಿರಂತರವಾಗಿ ಗಂಗನದೊಡ್ಡಿ, ಬಸಪ್ಪನ ದೊಡ್ಡಿ, ದೋಮನಗದ್ದೆ ಸೇರಿದಂತೆ ಸುತ್ತಲಿನ ಗ್ರಾಮಗಳ ಉಡುತೊರೆ ಹಳ್ಳ ಅಂಚಿನಲ್ಲಿ ಬರುವ ರೈತರ ಜಮೀನುಗಳಲ್ಲಿ ಸಾಕುಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಚಿರತೆಯಿಂದ ಈ ಭಾಗದಲ್ಲಿ ಹೆಚ್ಚಿದ ರೈತರಲ್ಲಿ ಆತಂಕ ಮನೆ ಮಾಡಿದೆ. ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಸಾಕುಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಚಿರತೆ ಸೆರೆ ಹಿಡಿಯಲು ವಿಫಲರಾಗಿರುವುದರಿಂದ ರೈತರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅರಣ್ಯ ಅಧಿಕಾರಿಗಳ ಭೇಟಿ ಪರಿಶೀಲನೆ:ರೈತನ ಜಮೀನಿಗೆ ಭೇಟಿ ನೀಡಿ ಅಲ್ಲಿನ ಚಿರತೆಯ ಚಲನವಲನ ಬಗ್ಗೆ ಮಾಹಿತಿ ಪಡೆದು ಸರ್ಕಾರದಿಂದ ಸಿಗುವ ಪರಿಹಾರದ ಬಗ್ಗೆ ಮಾಹಿತಿ ನೀಡುವುದರ ಮೂಲಕ ಇಲ್ಲಿನ ಸಮಸ್ಯೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದು ಡಿಆರ್‌ಎಫ್ ವಿನಯ್, ಗಾರ್ಡ್ ಅಶೋಕ್ ಭರವಸೆ ನೀಡಿದ್ದಾರೆ.
ರಾಜ್ಯ ರೈತ ಸಂಘ ತಾಲೂಕು ಘಟಕ ವತಿಯಿಂದ ಅರಣ್ಯ ಅಧಿಕಾರಿಗಳಿಗೆ ಕಳೆದ ಒಂದು ವರ್ಷದಿಂದ ಉಪಟಳ ನೀಡುತ್ತಿರುವ ಚಿರತೆ ಸೆರೆ ಹಿಡಿಯಬೇಕು. ಕಾಡಾನೆಗಳು, ಹಂದಿಗಳು ದಿನನಿತ್ಯ ರೈತರ ಜಮೀನುಗಳಲ್ಲಿ ಬೆಳೆ ಹಾನಿ ಮಾಡುತ್ತಿದೆ. ಸಾಕು ಪ್ರಾಣಿಗಳನ್ನು ಚಿರತೆ ಕೊಂದು ತಿನ್ನುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆ ಸೆರೆ ಹಿಡಿಯಬೇಕು. ಅರಣ್ಯದಂಚಿನ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ.ಅಮ್ಜದ್ ಖಾನ್, ರಾಜ್ಯ ರೈತ ಸಂಘ, ಹನೂರು ತಾಲೂಕು ಘಟಕ ಅಧ್ಯಕ್ಷ