ಅರಣ್ಯ ಇಲಾಖೆಯನ್ನೇ ಏಮಾರಿಸುತ್ತಿರುವ ಚಿರತೆ

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಚಿರತೆ ಸೆರೆಗೆ ಅತಿಯಾದ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಗು ಹಾಗೂ ಜಿಲ್ಲೆಯ ಇತರೆ ತಾಲೂಕುಗಳಿಂದ ಆರು ಪಂಜರ ಹಾಗೂ ೭ ಸಿಸಿ ಕ್ಯಾಮರಗಳನ್ನು ತಂದು ಮಾವಿನಹಳ್ಳಿ ಗ್ರಾಮದಲ್ಲಿ ಅಳವಡಿಸಿ ಸೆರೆಗಾಗಿ ಕಾಯಲಾಗುತಿತ್ತು. ಆದರೆ, ಚಿರತೆ ಗ್ರಾಮಗಳನ್ನು ಪ್ರತಿದಿನ ಬದಲಿಸಿದಂತೆ ಪಂಜರ ಹಾಗೂ ಸಿಸಿ ಕ್ಯಾಮರಗಳನ್ನು ಬದಲಿಸುವ ಕೆಲಸ ಮಾಡುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದಾರೆ. ಅರಣ್ಯ ಇಲಾಖೆ ಸದ್ಯ ದಬ್ಬೆಗದ್ದೆ, ಹೆನ್ನಲಿ, ಅಗಲಹಟ್ಟಿ ಸೇರಿದಂತೆ ಹಲವೆಡೆ ಪಂಜರ ಹಾಗೂ ಸಿಸಿ ಕ್ಯಾಮರ ಅಳವಡಿಸಿದೆ. ಆದರೆ, ಪಂಜರದ ಸನಿಹಕ್ಕೂ ಬಾರದ ಚಿರತೆಯ ಜಾಣ ನಡೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿದೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಊರೂರು ತಿರುಗುತ್ತಾ ದಿನಕ್ಕೊಂದು ಹಸು, ನಾಯಿ ಬೇಟೆಯಾಡುತ್ತಿರುವ ಚಿರತೆಯ ಕಣ್ಣಾಮುಚ್ಚಾಲೆಯಾಟಕ್ಕೆ ತಾಲೂಕಿನ ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದಾರೆ. ಹದಿನೈದು ದಿನಗಳ ಹಿಂದೆ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಕಟ್ಟಿಹಾಕಲಾಗಿದ್ದ ಹಸುವನ್ನು ತಿನ್ನುವ ಮೂಲಕ ಹಾವಳಿ ಆರಂಭಿಸಿದ ಚಿರತೆ ಒಂದು ವಾರದಲ್ಲಿ ನಾಲ್ಕು ಹಸುಗಳನ್ನು ತಿಂದು ಒಂದು ಕರುವನ್ನು ಮಾರಣಾಂತಿಕವಾಗಿ ಗಾಯಗೊಳಿಸಿತ್ತು. ಈ ಘಟನೆಯಿಂದ ಗ್ರಾಮಸ್ಥರ ತೀವ್ರ ಪ್ರತಿರೋಧ ಎದುರಿಸಿದ ಅರಣ್ಯ ಇಲಾಖೆ ಅರಕಲಗೂಡಿನಿಂದ ತರಿಸಲಾಗಿದ್ದ ಪಂಜರವನ್ನು ಹಸು ಭಕ್ಷಿಸಿದ್ದ ಸ್ಥಳದಲ್ಲಿ ಇಟ್ಟು, ಪಂಜರದಲ್ಲಿ ನಾಯಿ ಕಟ್ಟಿಹಾಕಿದ್ದರು. ಆದರೆ, ಚಿರತೆ ಪಂಜರದ ಸಮೀಪಕ್ಕೆ ಸುಳಿಯದೆ ನಾಪತ್ತೆಯಾಗಿತ್ತು. ಇದಾದ ಎರಡು ದಿನಗಳ ಕಾಲ ನಾಪತ್ತೆಯಾಗಿದ್ದ ಚಿರತೆ ಮತ್ತೆ ದಬ್ಬೆಗದ್ದೆ ಗ್ರಾಮದಲ್ಲಿ ನಾಯಿಯೊಂದನ್ನು ಹೊತ್ತೊಯ್ದು ಭಕ್ಷಿಸಿತ್ತು. ಇದಾದ ಮತ್ತೆರೆಡು ದಿನಗಳಲ್ಲಿ ಕ್ಯಾಮನಹಳ್ಳಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಗ್ರಾಮಸ್ಥರಲ್ಲಿ ಭಯ ಹುಟ್ಟುಹಾಕಿತ್ತು. ಇದಾದ ನಂತರ ಅಗಲಟ್ಟಿ ಗ್ರಾಮದಲ್ಲಿ ಹೆಜ್ಜೆಗುರುತು ಮೂಡಿಸಿದ ಚಿರತೆ ಮತ್ತೆ ದಬ್ಬೆಗದ್ದೆ ಗ್ರಾಮದಲ್ಲಿ ಮತ್ತೊಂದು ನಾಯಿ ಬೇಟೆಗೆ ವಿಫಲಯತ್ನ ನಡೆಸಿತ್ತು. ಇದಾದ ಮರುದಿನ ಮಾವಿನಹಳ್ಳಿ ಗ್ರಾಮಕ್ಕೆ ನುಗ್ಗಿ ಜನರೆದುರೆ ಕೋಳಿ ಬೇಟೆಯಾಡಿ ಪರಾರಿಯಾಗಿತ್ತು. ಇದಾದ ಎರಡು ದಿನಗಳ ನಂತರ ಪಟ್ಟಣ ಸಮೀಪದ ಹೆನ್ನಲಿ ಗ್ರಾಮದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ ಗ್ರಾಮಸ್ಥರಲ್ಲಿ ದಿಗಿಲು ಮೂಡಿಸಿತ್ತು. ಬುಧವಾರ ರಾತ್ರಿ ಹೆನ್ನಲಿ ಗ್ರಾಮದಲ್ಲಿ ಚಿರತೆ ಇರುವುದನ್ನು ಪತ್ತೆ ಹಚ್ಚಿದ ಸಿಬ್ಬಂದಿ ಬಲೆ ಹಾಗೂ ಬೋನ್ ಒಡ್ಡುವ ಮೂಲಕ ಸೆರೆಗಾಗಿ ಕಾದುಕುಳಿತಿದ್ದರು. ಆದರೆ, ಅರಣ್ಯ ಇಲಾಖೆ ಸಿಬ್ಬಂದಿಯ ಸನಿಹವೆ ಬಂದ ಚಿರತೆ ನಾಯಿಯೊಂದನ್ನು ಹೊತ್ತೊಯ್ಯುವ ಮೂಲಕ ಸಿಬ್ಬಂದಿಯನ್ನು ಪೆಚ್ಚಾಗುವಂತೆ ಮಾಡಿದೆ. ಹೀಗೆ ಪ್ರತಿದಿನ ಒಂದಲ್ಲ ಒಂದು ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆಗೆ ಬೆದರಿರುವ ಜನರು ತೋಟ, ಗದ್ದೆಗಳಿಗೆ ಒಂಟಿಯಾಗಿ ಓಡಾಡುವುದನ್ನು ಬಿಟ್ಟಿದ್ದು ಗುಂಪುಗುಂಪಾಗಿ ಸಂಚರಿಸ ಬೇಕಿದೆ. ಹೀಗೆ ಜನರ ಪಾಲಿಗೆ ಜೀವ ಭಯ, ಸಾಕುಪ್ರಾಣಿಗಳಿಗೆ ಕಂಟಕವಾಗಿರುವ ಚಿರತೆಯನ್ನು ಸೆರೆಹಿಡಿಯಲೇಬೇಕೆಂದು ಪಣತೊಟ್ಟಿರುವ ಅರಣ್ಯ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದೆಯಾದರೂ ಯಾವುದೇ ಪ್ರಯೋಜನಕ್ಕೂ ಬಾರದಂತಾಗಿದೆ. ಬೋನ್‌, ಸಿಸಿಕ್ಯಾಮರ, ಬಲೆ: ಚಿರತೆ ಸೆರೆಗೆ ಅತಿಯಾದ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಗು ಹಾಗೂ ಜಿಲ್ಲೆಯ ಇತರೆ ತಾಲೂಕುಗಳಿಂದ ಆರು ಪಂಜರ ಹಾಗೂ ೭ ಸಿಸಿ ಕ್ಯಾಮರಗಳನ್ನು ತಂದು ಮಾವಿನಹಳ್ಳಿ ಗ್ರಾಮದಲ್ಲಿ ಅಳವಡಿಸಿ ಸೆರೆಗಾಗಿ ಕಾಯಲಾಗುತಿತ್ತು. ಆದರೆ, ಚಿರತೆ ಗ್ರಾಮಗಳನ್ನು ಪ್ರತಿದಿನ ಬದಲಿಸಿದಂತೆ ಪಂಜರ ಹಾಗೂ ಸಿಸಿ ಕ್ಯಾಮರಗಳನ್ನು ಬದಲಿಸುವ ಕೆಲಸ ಮಾಡುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದಾರೆ. ಅರಣ್ಯ ಇಲಾಖೆ ಸದ್ಯ ದಬ್ಬೆಗದ್ದೆ, ಹೆನ್ನಲಿ, ಅಗಲಹಟ್ಟಿ ಸೇರಿದಂತೆ ಹಲವೆಡೆ ಪಂಜರ ಹಾಗೂ ಸಿಸಿ ಕ್ಯಾಮರ ಅಳವಡಿಸಿದೆ. ಆದರೆ, ಪಂಜರದ ಸನಿಹಕ್ಕೂ ಬಾರದ ಚಿರತೆಯ ಜಾಣ ನಡೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿದೆ.

ಸೆರೆಗೆ ಎಲ್‌ ಟಿ ಎಫ್‌ ಸಿಬ್ಬಂದಿ: ಕಳೆದ ಹದಿನೈದು ದಿನಗಳಿಂದ ಸಕಲೇಶಪುರ ವಲಯ ಅರಣ್ಯ ಇಲಾಖೆಯ ೧೫ ಸಿಬ್ಬಂದಿ ರಾತ್ರಿ, ಹಗಲು ಗ್ರಾಮಗಳಲ್ಲೆ ಬೀಡುಬಿಟ್ಟು ಚಿರತೆ ಸೆರೆಗಾಗಿ ಪ್ರಯತ್ನ ನಡೆಸುತ್ತಿದೆ. ಆದರೂ, ಚಿರತೆ ಸೆರೆಹಿಡಿಯುವುದು ಅಸಾಧ್ಯವಾಗಿರುವುದರಿಂದ ಹುಣಸೂರಿನಿಂದ ಎಲ್‌ಟಿಎಫ್ (ಲ್ಯಾಪರ್ಡ್ ಟಸ್ಕ್ ಪೊರ್ಸ್‌ನ) ೧೦ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಸ್ಥಳಿಯ ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಎಲ್‌ಟಿಎಫ್‌ ಸಿಬ್ಬಂದಿ ಸಹ ಕಾರ್ಯಾಚರಣೆ ನಡೆಸುತ್ತಿದ್ದರಾದರು ಯಾವುದೆ ಪ್ರಯೋಜವಾಗಿಲ್ಲ.

ಸವಾಲು: ಸದ್ಯ ಹೇಮಾವತಿ ನದಿ ಅಂಚಿನ ಗ್ರಾಮಗಳಾದ ಮಾವಿನಹಳ್ಳಿ, ದಬ್ಬೆಗದ್ದೆ, ಮದನಪುರ, ಹೆನ್ನಲಿ, ಅಗಲಟ್ಟಿ ಗ್ರಾಮಗಳ ಸುತ್ತಮುತ್ತ ಸಂಚರಿಸುತ್ತಿರುವ ಚಿರತೆಯನ್ನು ತುಮಕೂರು ಜಿಲ್ಲೆಯಿಂದ ಹಿಡಿದು ತಂದು ಇಲ್ಲಿಗೆ ಬಿಡಲಾಗಿದೆ ಎನ್ನಲಾಗುತ್ತಿದೆ. ಒಮ್ಮೆ ಬೋನ್ ಮೂಲಕ ಸೆರೆಹಿಡಿದಿರುವ ಚಿರತೆಗೆ ಅಪಾಯದ ಬಗ್ಗೆ ಅರಿವಿರುವುದರಿಂದ ಪಂಜರದತ್ತ ಆಹಾರವಿದ್ದರು ಸನಿಹಕ್ಕೆ ಸುಳಿಯದಾಗಿದೆ. ಕಾಡಾನೆಗಿಂತ ಅಪಾಯಕಾರಿ: ಚಿರತೆ ಹಾವಳಿ ಇಟ್ಟಿರುವ ಈ ಗ್ರಾಮಗಳಲ್ಲಿ ಕಾಡಾನೆ ಸಮಸ್ಯೆ ಇಲ್ಲ. ಇದರಿಂದ ನೆಮ್ಮದಿಯಾಗಿದ್ದ ಜನರಿಗೆ ಚಿರತೆಕಾಟ ಸಮಸ್ಯೆಯಾಗಿ ಪರಿಣಮಿಸಿದೆ. ಕಾಡಾನೆಗಿಂತ ಚಿರತೆ ಸಮಸ್ಯೆ ಅಪಾಯಕಾರಿಯಾಗಿದೆ ಎಂಬುದು ಸುತ್ತಲಿನ ಗ್ರಾಮಸ್ಥರ ಅಭಿಮತ. *ಹೇಳಿಕೆ-1

ಈಗಾಗಲೇ ಚಿರತೆ ಸಮಸ್ಯೆಯಿಂದ ಬಸವಳಿದಿರುವ ಮಾವಿನಹಳ್ಳಿ ಗ್ರಾಮಸ್ಥರು ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಸಿಮೆಂಟ್ ಮಂಜು ಅವರೊಂದಿಗೆ ಚರ್ಚೆ ನಡೆಸಿದ್ದು ಜೀವಂತ ಅಥವಾ ಶವವಾಗಿಯಾದರು ಸರಿ ಒಟ್ಟಿನಲ್ಲಿ ಚಿರತೆ ಸೆರೆಹಿಡಿಯಲೇ ಬೇಕು ಎಂದು ಆಗ್ರಹಿಸಿದ್ದಾರೆ. *ಹೇಳಿಕೆ-2 :

ಕಳೆದ ಹದಿನೈದು ದಿನಗಳಿಂದ ಗದ್ದೆತೋಟಗಳಿಗೆ ಹೋಗಲು ಭಯವಾಗುತ್ತಿದೆ. ಜಾನುವಾರುಗಳನ್ನು ಮೇಯಲು ಬಿಡಲು ಸಾಧ್ಯವಾಗದಾಗಿದೆ. ಮಂಜುನಾಥ್‌, ಅಗಲಟ್ಟಿ ಗ್ರಾಮ *ಹೇಳಿಕೆ-3 : ದಿನಂಪ್ರತಿ ಗ್ರಾಮಗಳನ್ನು ಬದಲಿಸುತ್ತಿರುವ ಚಿರತೆಯನ್ನು ಸೆರೆಹಿಡಿಯುವುದು ಸಮಸ್ಯೆಯಾಗಿದ್ದು ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಶಿಲ್ಪ, ವಲಯ ಅರಣ್ಯಾಧಿಕಾರಿ ಸಕಲೇಶಪುರ

Share this article