ಕನ್ನಡಪ್ರಭ ವಾರ್ತೆ ಹಲಗೂರು
ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಸಂಚರಿಸುತ್ತಿದ್ದು, ಬೀದಿ ನಾಯಿಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಕೊಂದು ತಿಂದಿರುವ ಘಟನೆಗಳು ನಡೆದಿವೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ವಿಶೇಷವಾಗಿ ರಾತ್ರಿ ವೇಳೆ ಜಮೀನುಗಳಿಗೆ ತೆರಳಿ ಕೃಷಿ ಬೆಳೆಗಳಿಗೆ ನೀರು ಹಾಯಿಸಲು ರೈತರು ಎದುರುವಂತಾಗಿದೆ.
ಜಮೀನುಗಳು, ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಜಾನುವಾರುಗಳ ಸುರಕ್ಷತೆಯ ಬಗ್ಗೆಯೂ ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಚಿರತೆ ಸಂಚಾರದಿಂದ ರಾತ್ರಿ ವೇಳೆ ಒಂಟಿಯಾಗಿ ಓಡಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿರತೆಯನ್ನು ಶೀಘ್ರ ಸೆರೆ ಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ದಿನಗಳಿಂದ ಮನವಿ ಮಾಡಿದ್ದರು.ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ಚಿರತೆ ಚಲನವಲನ ಗಮನಿಸಿ ಗ್ರಾಮದ ಕೆರೆ ಪಕ್ಕದ ಸ್ಮಶಾನದ ಜಮೀನಿನಲ್ಲಿ ಬೋನ್ ಇರಿಸಿ ಸೆರೆ ಹಿಡಿಯಲು ಮುಂದಾಗಿರುವುದರಿಂದ ಮಳವಳ್ಳಿ ಪ್ರಾದೇಶಿಕ ಅರಣ್ಯ ವಲಯದ ಗಸ್ತು ಅರಣ್ಯ ಪಾಲಕ ಕೃಷ್ಣ ತಿಳಿಸಿದ್ದಾರೆ.
ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಬೋನಿನಲ್ಲಿ ಸೆರೆ
ಅಲ್ಲದೇ, ಸುತ್ತಮುತ್ತಲ್ಲಿನ ಗ್ರಾಮಗಳ ಜನರು ರಾತ್ರಿ ವೇಳೆ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮಸ್ಥರು ದೂರಿನ ಹಿನ್ನೆಲೆಯಲ್ಲಿ ವಲಯ ಅರಣ್ಯಾಧಿಕಾರಿ ಗವಿಯಪ್ಪ ಮಾರ್ಗದರ್ಶನದಲ್ಲಿ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಕಳೆದ ಅಕ್ಟೋಬರ್ 9ರಂದು ಬೋನ್ ಇರಿಸಿದ್ದರು.ಸೋಮವಾರ ರಾತ್ರಿ ಚಿರತೆ ಬೋನಿನಲ್ಲಿ ಸೆರೆಯಾಗಿದ್ದು, ಚಿರತೆಯನ್ನು ನಾಗರಹೊಳೆ ವನ್ಯಜೀವಿಗಳ ಅರಣ್ಯ ಧಾಮದ ವಶಕ್ಕೆ ನೀಡಲಾಗುವುದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.