ಹಂಪಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಪ್ರವಾಸಿಗರಲ್ಲಿ ಆತಂಕ

KannadaprabhaNewsNetwork | Published : Jul 10, 2024 12:42 AM

ಸಾರಾಂಶ

ಇತ್ತೀಚಿಗೆ ಉಗ್ರನರಸಿಂಹ ಸ್ಮಾರಕದ ಬಳಿ ಕರಡಿ ಪ್ರತ್ಯಕ್ಷವಾದ ಬೆನ್ನಲ್ಲಿಯೇ ಹೇಮಕೂಟದ ಬಳಿ ಇರುವ ಬೆಟ್ಟದ ತುದಿಯಲ್ಲಿ ಸೋಮವಾರ ಸಂಜೆ ಚಿರತೆ ಪ್ರತ್ಯಕ್ಷವಾಗಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಶ್ವವಿಖ್ಯಾತ ಹಂಪಿಯಲ್ಲಿ ಪದೇ, ಪದೇ ಕಾಣಿಸಿಕೊಳ್ಳುವ ಚಿರತೆ, ಕರಡಿಗಳಿಂದ ದೇಶ-ವಿದೇಶಿ ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದ್ದು, ಪ್ರಾಣಿಗಳು ದಾಳಿ ನಡೆಸುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಇತ್ತೀಚಿಗೆ ಉಗ್ರನರಸಿಂಹ ಸ್ಮಾರಕದ ಬಳಿ ಕರಡಿ ಪ್ರತ್ಯಕ್ಷವಾದ ಬೆನ್ನಲ್ಲಿಯೇ ಹೇಮಕೂಟದ ಬಳಿ ಇರುವ ಬೆಟ್ಟದ ತುದಿಯಲ್ಲಿ ಸೋಮವಾರ ಸಂಜೆ ಚಿರತೆ ಪ್ರತ್ಯಕ್ಷವಾಗಿದ್ದು, ಹಂಪಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕರಿಗಾಹಿ ಮೇಲೆ ದಾಳಿ

ಆಗಾಗ ಹಂಪಿಯ ಕೋರಿಗುಡ್ಡ, ರತ್ನಕೂಟದ ಬಳಿ ಕಾಣಿಸಿಕೊಳ್ಳುವ ಚಿರತೆ, ಕೋವಿಡ್ ಸಮಯದಲ್ಲಿ ಋಷಿಮುಖ ಪರ್ವತದಲ್ಲಿ ಓರ್ವ ಕುರಿಗಾಹಿ ಯುವಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಪ್ರವಾಸಿಗರನ್ನು ಬೆಚ್ಚಿಬೇಳಿಸಿತ್ತು. ಈಗ ಚಿರತೆ ಮತ್ತೆ ಕಾಣಿಸಿಕೊಂಡಿರುವುದು ಪ್ರವಾಸಿಗರು ಭಯದ ನೆರಳಿನಲ್ಲಿ ತಿರುಗಾಡುವಂತಾಗಿದೆ.

ಎಚ್‌ಪಿಸಿಯಲ್ಲಿ ಮತ್ತೆ ಚಿರತೆ

ಕಳೆದ ೪೫ ತಿಂಗಳ ಹಿಂದೆಷ್ಟೆ ಕಮಲಾಪುರ ಎಚ್‌ಪಿಸಿ ಕ್ಯಾಂಪ್‌ನಲ್ಲಿ ಕಾಣಿಸಿಕೊಂಡ ಚಿರತೆಯನ್ನು ಅರಣ್ಯ ಇಲಾಖೆ ಬೋನಿನಲ್ಲಿ ಸೆರೆ ಹಿಡಿದಿತ್ತು. ಪುನಃ ಇದೀಗ ಕ್ಯಾಂಪ್‌ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.

ಶತಶತಮಾನಗಳಿಂದ ಹಂಪಿ ಪರಿಸರದಲ್ಲಿ ಚಿರತೆ, ಕರಡಿ ಸೇರಿದಂತೆ ಇತರೆ ಪ್ರಾಣಿಗಳು ವಾಸ ಮಾಡುತ್ತಿವೆ.

ಮಳೆಗಾಲವಾದ್ದರಿಂದ ಗುಹೆಯಿಂದ ಚಿರತೆಗಳು ಹೊರ ಬರುತ್ತಿವೆ. ನಸುಕಿನಲ್ಲಿ ಮತ್ತು ಸಂಜೆ ಹೊತ್ತಿನಲ್ಲಿ ಹೆಚ್ಚಾಗಿ ಹೊರ ಬಂದು ಜನರ ಕಣ್ಣಿಗೆ ಬೀಳುತ್ತಿವೆ.

ಎಚ್ಚರ

ಅದರಲ್ಲಿಯೂ ಮಾತಂಗ ಪರ್ವತ, ಚಿರತೆ, ಕರಡಿಗಳ ಅವಾಸ ಸ್ಥಾನವಾಗಿದೆ. ಸೂರ್ಯೋದಯ, ಸೂರ್ಯಾಸ್ತ ವೀಕ್ಷಣೆಗೆ ಪ್ರವಾಸಿಗರು, ಪರ್ವತ ಶ್ರೇಣಿಯಲ್ಲಿ ಫೋಟೋ ತೆಗೆಯಲು, ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ನಿತ್ಯ ತೆರ‍‍ಳುವುದು ವಾಡಿಕೆ. ಈ ಜಾಗಕ್ಕೆ ತೆರಳುವ ಮುನ್ನ ಪ್ರವಾಸಿಗರು ಎಚ್ಚರ ವಹಿಸುವುದು ಸೂಕ್ತ. ಮಾತಂಗ ಪರ್ವತ ಹಿಂಬದಿಯಲ್ಲಿ ಮೆಟ್ಟಿಲು (ತುರ್ತು ಕಾಲುವೆ) ಮೂಲಕ ತೆರಳುವ ಪ್ರವಾಸಿಗರು ತುಂಬಾ ಎಚ್ಚರದಿಂದ ಇರಬೇಕಿದೆ. ಈ ಜಾಗದಲ್ಲಿ ಕರಡಿ-ಚಿರತೆಗಳು ತಿರುಗಾಡುತ್ತಿವೆ. ಅನೇಕ ಬಾರಿ ಚಿರತೆ, ಕರಡಿಗಳ ಸೆಗಣಿ ದಾರಿಯಲ್ಲಿ ಬಿದ್ದಿರುವುದನ್ನು ಸ್ಥಳೀಯರು ಕಂಡಿದ್ದಾರೆ.

ಗುಂಪಾಗಿ ಇರಿ

ಹಂಪಿ ಸಮೀಪವೇ ಕರಡಿಧಾಮ ಇರುವುದರಿಂದ ಕರಡಿ, ಚಿರತೆ ಸೇರಿದಂತೆ ಆಹಾರ ಹುಡುಕಿಕೊಂಡು ಜನವಸತಿ ಪ್ರದೇಶಕ್ಕೆ ಬರುವುದು ವಾಡಿಕೆಯಾಗಿದೆ. ಪ್ರವಾಸಿಗರು, ಗುಂಪು, ಗುಂಪಾಗಿ ತೆರಳವುದು ಸೂಕ್ತ. ಅದರಲ್ಲಿ ಮಕ್ಕಳನ್ನು ಒಬ್ಬಂಟಿಯಾಗಿ ಬಿಡುವುದು ಸರಿಯಲ್ಲ. ಸಣ್ಣ ಮಕ್ಕಳ ಮೇಲೆ ಚಿರತೆಗಳು ಹೆಚ್ಚಾಗಿ ದಾಳಿ ಮಾಡುತ್ತವೆ. ಆಹಾರ ಪದಾರ್ಥಗಳನ್ನು ತಿನ್ನಲು ಸಹ ಕರಡಿಗಳು ಬರುತ್ತಿವೆ.

ಬೀಳಲಿ ಕಡಿವಾಣ

ಮಾತಂಗ ಪರ್ವತ ಪ್ರದೇಶಕ್ಕೆ ತೆರಳುವ ಪ್ರವಾಸಿಗರಿಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಮಯದ ನಿಗದಿ ಮಾಡಬೇಕು. ಪರ್ವತ ಪ್ರದೇಶಲ್ಲಿ ಸುರಕ್ಷತೆ ಕ್ರಮಗಳನ್ನು ಕೈಗೊಂಡು, ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂಬುದು ವನ್ಯ ಜೀವಿ ಪ್ರೇಮಿಗಳ ಅಭಿಪ್ರಾಯ.

ಅರಣ್ಯ ಇಲಾಖೆ ನಿಗಾಅರಣ್ಯ ಇಲಾಖೆ ಸಹ ಜನವಸತಿ ಪ್ರದೇಶಕ್ಕೆ ಬರುತ್ತಿರುವ ಕಾಡು ಪ್ರಾಣಿಗಳ ಬಗ್ಗೆ ನಿಗಾವಹಿಸಿದೆ. ಕೆಲವೆಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪ್ರಾಣಿಗಳ ಜಾಡು ಪರಿಶೀಲಿಸಿ, ಮಾನವ-ಪ್ರಾಣಿ ಸಂಘರ್ಷವಾಗದಂತೆ ಕ್ರಮ ವಹಿಸಿದೆ. ಸದ್ಯ ಹಂಪಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆ, ಕರಡಿಗಳ ಜಾಡು ತಿಳಿಯಲು ಪೆಟ್ರೋಲಿಂಗ್ ನಡೆಸಲಾಗುವುದು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಪೆಟ್ರೋಲಿಂಗ್

ಹಂಪಿಯಲ್ಲಿ ಆಗಾಗ ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಚಿರತೆ, ಕರಡಿಗಳ ಜಾಡು ತಿಳಿಯಲು ಪೆಟ್ರೋಲಿಂಗ್ ನಡೆಸಲಾಗುವುದು. ಸಾಧ್ಯವಾದಲ್ಲಿ ಬೋನ್ ಇರಿಸಿ, ಚಿರತೆ ಸೆರೆ ಹಿಡಿಯಲಾಗುವುದು.

ಭರತರಾಜ್ ಎಂ.ಎ. ವಲಯ ಅರಣ್ಯಾಧಿಕಾರಿ, ಪ್ರದೇಶಿಕ ವಿಭಾಗ, ಹೊಸಪೇಟೆ.ಪ್ರವಾಸಿಗರು ಎಚ್ಚರವಹಿಸಿ

ಶತಶತಮಾನಗಳಿಂದ ಹಂಪಿ ಪರಿಸರದಲ್ಲಿ ಚಿರತೆ, ಕರಡಿ ಸೇರಿ ಇತರೆ ಪ್ರಾಣಿಗಳು ವಾಸ ಮಾಡುತ್ತಿವೆ. ಮಳೆಗಾಲವಾದ್ದರಿಂದ ಗುಹೆಯಿಂದ ಚಿರತೆಗಳು ಹೊರ ಬರುತ್ತಿವೆ. ಅದರಲ್ಲಿ ಮಾತಂಗ ಪರ್ವತ ಪ್ರದೇಶಕ್ಕೆ ತೆರಳುವ ಪ್ರವಾಸಿಗರು ತುಂಬಾ ಎಚ್ಚರದಿಂದ ಇರಬೇಕು. ಪರ್ವತ ಪ್ರದೇಶಲ್ಲಿ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭದ್ರತೆ ಸಿಬ್ಬಂದಿ ನೇಮಕ ಮಾಡಬೇಕು.

ಡಾ. ಸಮದ್ ಕೊಟ್ಟೂರು, ವನ್ಯಜೀವಿ ತಜ್ಷರು, ಹೊಸಪೇಟೆ.

೯ಎಚ್‌ಪಿಟಿ1ಹಂಪಿಯ ಬೆಟ್ಟದ ತುದಿಯಲ್ಲಿ ಪ್ರತ್ಯಕ್ಷವಾದ ಚಿರತೆ.

Share this article