ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ಅರಾಭಿಕೊತ್ತನೂರು ಶ್ರೀ ಪ್ರಸನ್ನ ಸೋಮನಾಥೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿದ್ದು, ಇದೇ ಸಂದರ್ಭದಲ್ಲಿ ಪಕ್ಕದ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿತು.ಅರಣ್ಯ ಇಲಾಖೆಯ ನಿಬಂಧನೆಗಳಿಂದಾಗಿ ಗ್ರಾಮದಲ್ಲಿ ದಶಕಗಳ ಹಿಂದೆ ನಡೆಯುತ್ತಿದ್ದ ಚಿರತೆ ಮೆರವಣಿಗೆ ನಿಲ್ಲಿಸಲಾಗಿದೆ. ಇಂದು ರಥ ಎಳೆಯುವ ವೇಳೆಗೆ ಪಕ್ಕದ ಬೆಟ್ಟದಲ್ಲಿ ದಿಢೀರನೆ ಚಿರತೆ ಪ್ರತ್ಯಕ್ಷವಾಗಿದೆ. ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ
ದಶಕಗಳ ಹಿಂದೆ ಗ್ರಾಮದ ಜನತೆ ರಥಸಪ್ತಮಿಗೆ ಮೊದಲು ಬೋನು ಇಟ್ಟು ಚಿರತೆ ಹಿಡಿದು ಅದನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸುವ ಪದ್ದತಿ ಇತ್ತು. ಆದರೆ ಅರಣ್ಯ ಇಲಾಖೆ ನಿಬಂಧನೆಗಳ ನಂತರ ಅದನ್ನು ಕೈಬಿಡಲಾಗಿದೆ. ಆದರೆ ಬುಧವಾರ ರಥವನ್ನು ದೇವಾಲಯದ ಸಮೀಪ ಬೆಟ್ಟದೆಡೆಗೆ ಎಳೆಯುತ್ತಿದ್ದಂತೆ ಚಿರತೆ ಪ್ರತ್ಯಕ್ಷವಾಗಿ ಸಾವಿರಾರು ಮಂದಿ ನೋಡಲು ಮುಗಿಬಿದ್ದರು. ಇಲ್ಲಿ ಸಂಕ್ರಾಂತಿ ನಿಷಿದ್ಧಸಂಕ್ರಾಂತಿಯನ್ನೇ ಆಚರಿಸದ ಈ ಗ್ರಾಮದ ಜನತೆ ರಥಸಪ್ತಮಿಯ ಈ ರಥೋತ್ಸವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ, ಗ್ರಾಮದ ಬೆಟ್ಟಗಳಲ್ಲಿರುವ ಚಿರತೆಯನ್ನು ಭೇಟೆಯಾಡಿ ಊರಿಗೆ ಕರೆತಂದು ಗ್ರಾಮದ ಮಧ್ಯಭಾಗದಲ್ಲಿ ಮೆರವಣಿಗೆ ಮಾಡಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದರು. ಈಗ ಸೋಮನಾಥೇಶ್ವರ ಸ್ವಾಮಿಯ ರಥೋತ್ಸವವನ್ನೇ ವೈಭವದಿಂದ ಆಚರಿಸಿಕೊಂಡು ಬರುತ್ತಿದ್ದಾರೆ.
ರಥೋತ್ಸವದಲ್ಲಿ ಮಾಜಿ ಸಚಿವ ಶ್ರೀರಾಮುಲು, ಮಾಜಿ ಸಚಿವ ವರ್ತೂರು ಪ್ರಕಾಶ್, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್‌ಸಿ ಅನಿಲ್‌ಕುಮಾರ್, ವೇಣುಗೋಪಾಲಗೌಡ, ನಂದಿನಿ ಪ್ರವೀಣ್, ಉಪತಹಸೀಲ್ದಾರ್ ಶ್ರೀನಿವಾಸಮೂರ್ತಿ, ಆರ್.ಐ ಲೋಕೇಶ್, ಗ್ರಾಪಂ ಅಧ್ಯಕ್ಷೆ ರೇಣುಕಾಂಭ ಮುನಿರಾಜು, ಉಪಾಧ್ಯಕ್ಷ ನಾಗೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಸದಸ್ಯರಾದ ಎ.ಎಸ್.ನಂಜುಂಡೇಗೌಡ, ನಾರಾಯಣಸ್ವಾಮಿ,ಪ್ರಸನ್ನಕುಮಾರ್, ಕವಿತಾ, ನಾರಾಯಣಪ್ಪ,ನಾಗರಾಜ್ ಚಿಕ್ಕಚೆನ್ನಪ್ಪ ಪಾಲ್ಗೊಂಡಿದ್ದರು.