ಬಿಂಕದಕಟ್ಟಿಯಲ್ಲಿ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಗ್ರಾಮಸ್ಥರು

KannadaprabhaNewsNetwork | Published : Nov 16, 2024 12:32 AM

ಸಾರಾಂಶ

ಬಿಂಕದಕಟ್ಟಿ ಗ್ರಾಮದಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಚಿರತೆ ಓಡಾಟ ಮಾಡಿದೆ. ಅದೃಷ್ಟವಶಾತ್ ಯಾರ ಮೇಲೂ ದಾಳಿ ಮಾಡಿಲ್ಲ

ಗದಗ: ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ಗ್ರಾಮದ ಬಸವರಾಜ ತಿರ್ಲಾಪುರ ಎನ್ನುವವರ ಮನೆಯ ಸಿಸಿ ಕ್ಯಾಮೆರಾದಲ್ಲಿ ಚಿರತೆಯ ಚಲನವಲನ ದಾಖಲಾಗಿವೆ.

ಭಯದ ವಾತಾವರಣ: ಬಿಂಕದಕಟ್ಟಿ ಗ್ರಾಮದಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಚಿರತೆ ಓಡಾಟ ಮಾಡಿದೆ. ಅದೃಷ್ಟವಶಾತ್ ಯಾರ ಮೇಲೂ ದಾಳಿ ಮಾಡಿಲ್ಲ. ಊರಿನಲ್ಲಿನ ಬಹುತೇಕರು ನಾಯಿ ಇರಬಹುದು ಅಂದುಕೊಂಡಿದ್ದರು. ಆದರೆ ಸಿಸಿ ಕ್ಯಾಮೆರಾ ದೃಶ್ಯ ಕಂಡು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಡೀ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಬಹುತೇಕ ಜನರು ಶುಕ್ರವಾರ ಮನೆ ಬಿಟ್ಟು ಹೊರಗಡೆ ಬಾರದೇ ಮನೆಯಲ್ಲಿಯೇ ಕಾಯುವಂತಾಯಿತು.

ಬೀಡುಬಿಟ್ಟ ಅರಣ್ಯ ಇಲಾಖೆ: ಗದಗ ಜಿಲ್ಲೆಯಲ್ಲಿ ಕಪ್ಪತ್ತಗುಡ್ಡದ ಕೊನೆಯ ಭಾಗದಲ್ಲಿರುವ ಬಿಂಕದಕಟ್ಟಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ಸಂಜೆ 7.30ರ ಸುಮಾರಿಗೆ ಚಿರತೆ ಕಾಣಿಸಿಕೊಂಡಿದೆ. ಚಿರತೆ ಪ್ರತ್ಯಕ್ಷ ಸುದ್ದಿ ಕೇಳಿ ಬಿಂಕದಕಟ್ಟಿ ಗ್ರಾಮಸ್ಥರು ಕಂಗಾಲಾಗಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಬಿಂಕದಕಟ್ಟಿ ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಗ್ರಾಮದ ಸಮೀಪದಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು, ಪಕ್ಕಾ ಚಿರತೆಯದ್ದೇ ಎಂದು ಅರಣ್ಯ ಇಲಾಖೆ ದೃಢಪಡಿಸಿದೆ. ಇನ್ನೂ ತಿರ್ಲಾಪುರ ಓಣಿಯಲ್ಲಿ ಚಿರತೆ ಓಡಾಟದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬಸವರಾಜ ತಿರ್ಲಾಪುರ ಎಂಬುವರ ಮನೆಯ ಮಾಳಿಗೆ ಮೇಲೆಯೇ ಚಿರತೆ ಜಿಗಿದು ಹೋಗಿರುವುದು ಕೂಡಾ ದಾಖಲಾಗಿದೆ.

11 ಜನರ ತಂಡ ಕಾರ್ಯಾಚರಣೆ:ಚಿರತೆ ಸೆರೆಹಿಡಿಯಲು 11 ಜನರ ತಂಡ ರಚಿಸಲಾಗಿದ್ದು, ಶುಕ್ರವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಪ್ರಾರಂಭಿಸಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಚಲನವಲನದ ಮೇಲೆ ನಿಗಾ ವಹಿಸಿದ್ದು ಅಲ್ಲಲ್ಲಿ ಚಿರತೆ ಬಲೆ ಅಳವಡಿಸಿದ್ದಾರೆ.

ನಮ್ಮ ಮನೆಯ ಮೇಲೆಯೇ ಚಿರತೆ ಬಂದಿದೆ ಎನ್ನುವುದು ನನಗೆ ಗೊತ್ತಿಲ್ಲ, ಗ್ರಾಮದಲ್ಲಿ ಜನರು ಚಿರತೆ ಬಂದಿದೆ ಎನ್ನುತ್ತಿದ್ದಂತೆ, ನಮ್ಮ ಮನೆಯ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆ ಓಡಾಟ ಪತ್ತೆಯಾಗಿದೆ. ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಬಸವರಾಜ ತಿರ್ಲಾಪುರ ತಿಳಿಸಿದ್ದಾರೆ.

ಬಿಂಕದಕಟ್ಟಿ ಗ್ರಾಮದಲ್ಲಿ ಚಿರತೆ ಓಡಾಟ ಸುದ್ದಿ ತಿಳಿಯುತ್ತಿದ್ದಂತೆ ನಮ್ಮ‌ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಬಸವರಾಜ ತಿರ್ಲಾಪುರ ಮನೆಯ ಮಾಳಿಗೆ ಮೇಲೆಯೂ ಚಿರತೆ ಓಡಾಡಿದೆ. ಜನರ ಕಣ್ಣಿಗೆ ಬೀಳದಂತೆ ಮಾಳಗೆಯಿಂದ ಮಾಳಗಿ ಜಂಪ್‌ ಮಾಡಿಕೊಂಡು ಓಡಾಡಿದೆ. ಗ್ರಾಮದಲ್ಲಿ ಇನ್ನೂ ಎರಡು ದಿನಗಳ ಶೋಧ ನಡೆಸಿ ಬೋನ್ ಅಳವಡಿಸಿ ಆದಷ್ಟು ಬೇಗನೆ ಚಿರತೆ ಹಿಡಿಯುವ ಕಾರ್ಯ ಮಾಡುತ್ತೇವೆ ಎಂದು ಆರ್.ಎಫ್.ಒ. ವೀರೇಂದ್ರ ಹೇಳಿದರು.

Share this article