ಆನೇಕಲ್‌ ತಾಲೂಕಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

KannadaprabhaNewsNetwork | Published : Apr 3, 2024 1:32 AM

ಸಾರಾಂಶ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ರಸ್ತೆ ದಾಟುತ್ತಿದ್ದ ಚಿರತೆಯನ್ನು ಬೈಕ್‌ ಸವಾರ ವೀಕ್ಷಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಆನೇಕಲ್‌ಇಲ್ಲಿಗೆ ಸಮೀಪದ ಕಾವಲಹೊಸಹಳ್ಳಿಯ ಎಸ್‌ಆರ್‌ಆರ್ ಬಡಾವಣೆಯಲ್ಲಿ ಭಾನುವಾರ ರಾತ್ರಿ ಚಿರತೆ ಓಡಾಡಿರುವುದನ್ನು ನಿವಾಸಿಗಳು ಕಂಡು ಆತಂಕಗೊಂಡಿದ್ದಾರೆ. ಬಡಾವಣೆಯ ವಾಸಿ ಪಾಂಡುರಂಗ ತಮ್ಮ ದ್ವಿಚಕ್ರ ವಾಹನದಲ್ಲಿ ರಾತ್ರಿ 8ರ ಸುಮಾರಿಗೆ ಬರುವಾಗ ಚಿರತೆ ಕಾಂಪೌಂಡ್ ದಾಟಿ ಹಾರಿದನ್ನು ಕಂಡು ಚಿಕಿತರಾದರು.

ಚಿರತೆ ಓಡಾಟದ ಸುದ್ದಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ನಿವಾಸಿಗಳು ತಿಳಿಸಿದರು. ಕೂಡಲೇ ಧಾವಿಸಿ ಬಂದ ಅರಣ್ಯ ಸಿಬ್ಬಂದಿ ವನ ಪಾಲಕ ಜನಾಗೇರಿ ನೇತೃತ್ವ ವಲಯ ಅರಣ್ಯಾಧಿಕಾರಿ ರಘು ಅವರ ಮಾರ್ಗ ದರ್ಶನದಲ್ಲಿ ಚಿರತೆಯ ಹೆಜ್ಜೆ ಗುರುತನ್ನು ಕಂಡು ಅದೇ ಜಾಡಿನಲ್ಲಿ ಮುಂದುವರಿದರು.

ಚಿರತೆಯು ಒಂದು ನಾಯಿಯ ಅರ್ಧ ಭಾಗವನ್ನು ತಿಂದು ಉಳಿದ ಭಾಗವನ್ನು ಹೊತ್ತೊಯ್ದಿರುವುದು ಕಂಡು ಬಂದಿದೆ. ಸಿಡಿ ಹೊಸಕೋಟೆ ಮಾರ್ಗದಲ್ಲಿ ಸಂಚರಿಸಿ ನೀಲಗಿರಿ ತೋಪು ಪೊದೆಗಳು ಇರುವ ದಾರಿಯಲ್ಲಿ ಗೌರೇನಳ್ಳಿಯನ್ನು ದಾಟಿ ಕಾಡುದಾರಿ ಸೇರಿದೆ. ದೊಡ್ಡಕೆರೆ ಕಾನೆಯಲ್ಲಿ ಕೆಲಸ ಮಾಡುವ ರೈತಾಪಿ ಜನರು ಚಿರತೆ ಕೆರೆ ಅಂಚಿನಲ್ಲಿ ಹೋಯಿತು ಎಂಬುದನ್ನು ದೃಢ ಪಡಿಸಿದರು.

ನಿವಾಸಿಗಳೇ ಎಚ್ಚರ:

ನಾಯಿ ಆಹಾರದ ರುಚಿ ಕಂಡ ಚಿರತೆ ಮತ್ತೆ ಬರುವ ಸಾಧ್ಯತೆ ಇದ್ದು ಸಂಜೆ ಹೊತ್ತು ಹಾಗೂ ಮುಂಜಾನೆ ವಾಕಿಂಗ್ ಹೊರಡುವ ಸಾರ್ವಜನಿಕರು ಕೆಲ ದಿನ ಓಡಾಟವನ್ನು ನಿಲ್ಲಿಸಬೇಕು ಹಾಗೂ ಎಚ್ಚರಿಕೆಯಿಂದ ಇರಬೇಕು. ಮನೆಯ ಹೊರಭಾಗದಲ್ಲಿ ಟಾಯ್ಲೆಟ್ ಅಥವಾ ಸ್ಟೋರ್ ರೂಮ್ ಇದ್ದಲ್ಲಿ ಭದ್ರವಾಗಿ ಬೀಗ ಹಾಕಬೇಕು ಎಂದು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಆನೇಕಲ್ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಚಿರತೆ ಓಡಾಟ ವಿಷಯ ಭಾರಿ ಸುದ್ದಿ ಮಾಡಿದೆ. ಕಳೆದ ಜನವರಿಯಲ್ಲಿ ಹೆಬ್ಬಗೋಡಿ, ಕಮ್ಮಸಂದ್ರ ಘಟ್ಟಹಳ್ಳಿ, ಹುಸ್ಪೂರು ಮುಂತಾದ ಕಡೆ ಚಿರತೆ ಓಡಾಟ ಇದ್ದಿತು. ಅರಣ್ಯ ಸಿಬ್ಬಂದಿ ಜನರಲ್ಲಿ ಧೈರ್ಯವನ್ನು ತುಂಬಿ ನಮ್ಮ ಸಿಬ್ಬಂದಿ ಹಗಲಿರುಳು ಕೂಂಬಿಂಗ್ ಮಾಡುತ್ತಿದ್ದು, ಪೊದೆಗಳು, ತೋಪು ಇರುವಲ್ಲಿ ಭಾರಿ ಸದ್ದಿನ ಪಟಾಕಿಯನ್ನು ಸಿಡಿಸಿ ಚಿರತೆಯನ್ನು ಬೆದರಿಸಿ ಆಳ ಕಾಡಿನೊಳಗೆ ಓಡಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

Share this article