ಬಿ. ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವದ ಆನೆಗಳ ಮಾವುತರು ಮತ್ತು ಕಾವಾಡಿಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೈಸೂರು ಅರಮನೆ ಆವರಣದಲ್ಲಿ ತಾತ್ಕಾಲಿಕ ಶಾಲೆಯನ್ನು ಆರಂಭಿಸಲಾಗಿದೆ.
ಈ ತಾತ್ಕಾಲಿಕ ಶಾಲೆಗೆ 1 ರಿಂದ 9ನೇ ತರಗತಿವರೆಗೆ 25 ಮಕ್ಕಳು ದಾಖಲಾಗಿದ್ದಾರೆ. ಇವರಿಗೆ ನಿತ್ಯ ಪಾಠ, ಪ್ರವಚನ, ಆಟೋಟ, ನೃತ್ಯದೊಂದಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸಹ ನೀಡಲಾಗುತ್ತಿದೆ. ಇದು ಮಾತ್ರವಲ್ಲದೆ, ಮಕ್ಕಳಿಗೆ ಸಮವಸ್ತ್ರ, ಪಠ್ಯ, ನೋಟ್ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ನೀಡಲಾಗಿದೆ.ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಪ್ರತಿ ವರ್ಷ ಆನೆಗಳು ಬರುತ್ತವೆ. ಈ ಆನೆಗಳನ್ನು ನೋಡಿಕೊಳ್ಳಲು ಮಾವುತರು ಮತ್ತು ಕಾವಾಡಿಗಳು ಕುಟುಂಬ ಸಮೇತ ಬರುತ್ತಾರೆ. ಹೆತ್ತವರೊಂದಿಗೆ ಮಕ್ಕಳು ಸಹ ಶಾಲೆ ಬಿಟ್ಟು ಮೈಸೂರಿಗೆ ಬರುತ್ತಾರೆ. ಹೀಗೆ ಶಾಲೆ ಬಿಟ್ಟು ಬರುವ ಮಕ್ಕಳಿಗಾಗಿ ಈ ತಾತ್ಕಾಲಿಕ ಶಾಲೆಯನ್ನು ಆರಂಭಿಸಲಾಗಿದೆ.
ಮಕ್ಕಳು ಶಾಲೆ ಬಿಟ್ಟು ಮೈಸೂರಿಗೆ ಬರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿತ್ತು. ಇದನ್ನು ಅರಿತ ಶಾಲಾ ಶಿಕ್ಷಣ ಇಲಾಖೆಯು ಪ್ರತಿ ವರ್ಷ ಮಾವುತರು ಮತ್ತು ಕಾವಾಡಿಗರ ಮಕ್ಕಳಿಗಾಗಿ ತಾತ್ಕಾಲಿಕ ಶಾಲೆಯಲ್ಲಿ ಅರಮನೆ ಆವರಣದಲ್ಲಿ ನಡೆಸುತ್ತಿದೆ.ಆನೆಗಳೂ ಮಕ್ಕಳು:
ಈ ಬಾರಿ ದಸರೆಗೆ 14 ಆನೆಗಳು ಆಯ್ಕೆಯಾಗಿದ್ದು, ಈ ಪೈಕಿ 9 ಆನೆಗಳು ಈಗಾಗಲೇ ಮೈಸೂರಿಗೆ ಬಂದು ತಾಲೀಮು ಆರಂಭಿಸಿವೆ. ಈ 9 ಆನೆಗಳೊಂದಿಗೆ ಬಂದಿರುವ ಮಾವುತರು, ಕಾವಾಡಿಗಳ ಮಕ್ಕಳು ತಾತ್ಕಾಲಿಕ ಶಾಲೆಗೆ ಸೇರಿಕೊಂಡಿದ್ದಾರೆ. ಆ.25 ರಂದು ಎರಡನೇ ತಂಡದಲ್ಲಿ ಇನ್ನೂ 5 ಆನೆಗಳು ಬರಲಿದ್ದು, ಅವುಗಳ ಮಾವುತರು ಮತ್ತು ಕಾವಾಡಿಗಳ ಮಕ್ಕಳು ಸಹ ತಾತ್ಕಾಲಿಕ ಶಾಲೆಗೆ ಸೇರಿಕೊಳ್ಳಲಿದ್ದಾರೆ.ಮೂವರು ಶಿಕ್ಷಕಿಯರು:
ತಾತ್ಕಾಲಿಕ ಶಾಲೆಗೆ ಮೂವರು ಶಿಕ್ಷಕಿಯರನ್ನು ನಿಯೋಜಿಸಲಾಗಿದೆ. ಸಿಲ್ಕ್ ಫ್ಯಾಕ್ಟರಿ ಬಳಿಯ ರೆಹಮನಿಯಾ ಶಾಲೆಯ ಶಿಕ್ಷಕಿ ನೂರ್ ಫಾತಿಮಾ ಅವರು ಗಣಿತ ಮತ್ತು ಇಂಗ್ಲಿಷ್, ಚಾಮುಂಡಿಪುರಂ ವಿಎಂಎಚ್ ಬಾಲಬೋಧಿನಿ ಶಾಲೆಯ ಶಿಕ್ಷಕಿ ಮೋಸಿನಾ ತಾಜ್ ಅವರು ಕನ್ನಡ ಹಾಗೂ ಕುಕ್ಕರಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕಿ ಡಿ. ದಿವ್ಯಪ್ರಿಯದರ್ಶಿನಿ ಅವರು ವಿಜ್ಞಾನ ಬೋಧಿಸುತ್ತಿದ್ದಾರೆ.ಇವರು ಮಕ್ಕಳಿಗೆ ತರಗತಿ ಪಾಠ ಪ್ರವಚನದ ಜೊತೆಗೆ ಶೈಕ್ಷಣಿಕವಾಗಿ ಬುನಾದಿ ಹಾಕುವಂತಹ ವಿಚಾರಗಳನ್ನು ಹೇಳಿಕೊಡುತ್ತಾರೆ. ಎಲ್ಲಾ ಮಕ್ಕಳಿಗೂ ಸಾಮಾನ್ಯ ಜ್ಞಾನ, ಗಣಿತ, ಚಿತ್ರ ಬಿಡಿಸುವುದು, ಆಟ ಸೇರಿದಂತೆ ವಿವಿಧ ರೀತಿಯಲ್ಲಿ ತರಬೇತಿ ನೀಡಲಾಗುತ್ತದೆ. ಅಲ್ಲದೆ, ಮಕ್ಕಳನ್ನು ಪ್ರವಾಸಿ ತಾಣಗಳಿಗೂ ಕರೆದುಕೊಂಡು ಹೋಗಲಾಗುತ್ತದೆ.
ಆಗ ಟೆಂಟ್ ಶಾಲೆ, ಈಗ ತಾತ್ಕಾಲಿಕ ಶಾಲೆ:ದಸರಾ ಆನೆಗಳ ವಾಸ್ತವ್ಯಕ್ಕೆ ಅರಮನೆ ಆವರಣದಲ್ಲಿ ಮೀಸಲಿಟ್ಟಿರುವ ಸ್ಥಳದಲ್ಲೇ ಮಾವುತರು, ಕಾವಾಡಿಗರ ಕುಟುಂಬ ವಾಸಕ್ಕಾಗಿ ತಾತ್ಕಾಲಿಕ ಶೆಡ್ ನಿರ್ಮಿಸಲಾಗುತ್ತದೆ. ಈ ಶೆಡ್ ನಲ್ಲೇ ಮಕ್ಕಳಿಗಾಗಿ ಟೆಂಟ್ ಶಾಲೆಯನ್ನು ನಡೆಸಲಾಗುತ್ತಿದೆ.
ಆದರೆ, ಕಳೆದ ನಾಲ್ಕು ವರ್ಷದಿಂದ ಅರಮನೆ ಆನೆ ಬಿಡಾರದಲ್ಲಿರುವ ಕಟ್ಟಡದಲ್ಲಿ ಟೆಂಟ್ ಶಾಲೆ ಬದಲಾಗಿ ತಾತ್ಕಾಲಿಕ ಶಾಲೆಯನ್ನು ನಡೆಸಲಾಗುತ್ತಿದೆ.‘ಆನೆಗಳೊಂದಿಗೆ ಹಾಡಿಯಿಂದ ಬರುವ ಮಕ್ಕಳು ಇಲ್ಲಿನ ಪರಿಸರಕ್ಕೆ ಹೊಗ್ಗಿಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ಮಕ್ಕಳ ಮನವೊಲಿಸಿ, ಶಾಲೆಗೆ ಕರೆ ತಂದು ಪಾಠ ಮಾಡುವುದು ಸವಾಲಿನ ಕೆಲಸವಾಗಿದೆ. ಮಕ್ಕಳಿಗೆ ಆಟ ಆಡಿಸಿ, ಕಥೆಗಳನ್ನು ಹೇಳುವ ಮೂಲಕ ಶಾಲೆಗೆ ಬರ ಮಾಡಿಕೊಂಡು ನಂತರ ಪಾಠಗಳನ್ನು ಮಾಡಲಾಗುತ್ತಿದೆ. ಮಕ್ಕಳಲ್ಲಿ ಕಲಿಯುವ ಆಸಕ್ತಿ ಇದ್ದರೂ ಹಿಂದೇಟು ಹಾಕುತ್ತಾರೆ. ಇದಕ್ಕೆ ಪರಿಸರ ಕಾರಣವಾಗಿದ್ದು, ಅವರನ್ನು ಆತ್ಮೀಯವಾಗಿ ಕಾಣುವ ಮೂಲಕ ಪಾಠ ಮಾಡಲಾಗುತ್ತಿದೆ’.
- ಡಿ. ದಿವ್ಯಾ ಪ್ರಿಯದರ್ಶಿನಿ, ಶಿಕ್ಷಕಿ, ತಾತ್ಕಾಲಿಕ ಶಾಲೆ‘ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ ಪಾಠ ಮಾಡಲಾಗುತ್ತಿದೆ. 1 ರಿಂದ 4, 5 ರಿಂದ 7, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ಮಾಡಿ ಪಾಠ ಮಾಡಲಾಗುತ್ತಿದೆ. ತಾತ್ಕಾಲಿಕ ಶಾಲೆಯು ಬೆಳಗ್ಗೆ 9.45 ರಿಂದ ಸಂಜೆ 4 ರವರೆಗೆ ನಡೆಯುತ್ತದೆ. ಮಧ್ಯಾಹ್ನ 1ಕ್ಕೆ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ. ಮಧ್ಯಾಹ್ನದ ನಂತರ ಹಾಡು, ನೃತ್ಯ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹೇಳಿ ಕೊಡಲಾಗುತ್ತಿದೆ.’
- ಮೋಸಿನಾ ತಾಜ್, ಶಿಕ್ಷಕಿ, ತಾತ್ಕಾಲಿಕ ಶಾಲೆ