ನಮ್ಮ ರಾಜ್ಯದಲ್ಲೂ ದಲಿತ ವ್ಯಕ್ತಿ ಸಿಎಂ ಆಗಲಿ

KannadaprabhaNewsNetwork |  
Published : Feb 15, 2026, 04:15 AM IST
ದಲಿತರು ಸಿಎಂ ಆಗಬೇಕು: ಸಂಸದ ರಮೇಶ ಜಿಗಜಿಣಗಿ | Kannada Prabha

ಸಾರಾಂಶ

ವಿಜಯೇಂದ್ರ ಸೇರಿದಂತೆ ಯಾರೇ ಮುಖ್ಯಮಂತ್ರಿಯಾದರೂ ನನಗೆ ಅಸಮಾಧಾನವಿಲ್ಲ. ದಲಿತರು ಸಿಎಂ ಆಗಬೇಕೆಂಬ ಬೊಬ್ಬೆ ಕೊನೆಯವರೆಗೂ ಧ್ವನಿ ಎತ್ತುತ್ತೇನೆ. ನಾನೇ ಸಿಎಂ ಆಗಬೇಕೆಂಬುದು ಇಲ್ಲ. ಯಾರೇ ದಲಿತ ನಾಯಕ ಸಿಎಂ ಆಗಲಿ ಎಂಬುದು ನನ್ನ ಆಸೆ ಎಂದು ಬಿಜೆಪಿ ಹಿರಿಯ ನಾಯಕ, ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯೇಂದ್ರ ಸೇರಿದಂತೆ ಯಾರೇ ಮುಖ್ಯಮಂತ್ರಿಯಾದರೂ ನನಗೆ ಅಸಮಾಧಾನವಿಲ್ಲ. ದಲಿತರು ಸಿಎಂ ಆಗಬೇಕೆಂಬ ಬೊಬ್ಬೆ ಕೊನೆಯವರೆಗೂ ಧ್ವನಿ ಎತ್ತುತ್ತೇನೆ. ನಾನೇ ಸಿಎಂ ಆಗಬೇಕೆಂಬುದು ಇಲ್ಲ. ಯಾರೇ ದಲಿತ ನಾಯಕ ಸಿಎಂ ಆಗಲಿ ಎಂಬುದು ನನ್ನ ಆಸೆ ಎಂದು ಬಿಜೆಪಿ ಹಿರಿಯ ನಾಯಕ, ಸಂಸದ ರಮೇಶ ಜಿಗಜಿಣಗಿ ಹೇಳಿದರು.

ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಹಾಗೂ ಬಿಜೆಪಿಯಲ್ಲಿ ವಿಜಯೇಂದ್ರ ಸಿಎಂ ಆಗುತ್ತಾರೆ ಎಂಬ ವಿಚಾರದ ಕುರಿತು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರನ್ನು ಸಿಎಂ ಮಾಡುತ್ತಾರೋ ಇಲ್ಲವೋ ಎಂಬುದು ಪಕ್ಷಕ್ಕೆ ಬಿಟ್ಟಿದ್ದು. ಇತರೆ ರಾಜ್ಯಗಳಲ್ಲಿ ದಲಿತ ಸಮುದಾಯದವರು ಸಿಎಂ ಆಗಿದ್ದಾರೆ. ಹಾಗೇ ನಮ್ಮ ರಾಜ್ಯದಲ್ಲೂ ದಲಿತ ವ್ಯಕ್ತಿ ಸಿಎಂ ಆಗಲಿ ಎಂಬುದು ನನ್ನ ಆಸೆಯಾಗಿದೆ ಎಂದರು.ದೇವರು ನನಗೆ ಜೀವನದಲ್ಲಿ ಎಲ್ಲವನ್ನೂ ಕೊಟ್ಟಿದ್ದಾನೆ. ಯಾರ ಬಳಿಯೂ ಕೈಯೊಡ್ಡದೇ ಲಕ್ಷಾಂತರ ಹಣ ಹಾಗೂ ಆಸ್ತಿ ಕೊಟ್ಟಿದ್ದಾನೆ. ನಾನು ಕೇಂದ್ರದಲ್ಲಿ ಸಚಿವನಾಗಿದ್ದೇನೆ. ರಾಜ್ಯದಲ್ಲಿ 19 ವರ್ಷ ಮಂತ್ರಿಯಾಗಿದ್ದೇನೆ. 45 ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬೇರೆ ಬೇರೆ ಪಕ್ಷಗಳಿಂದ ಮೂರು ಬಾರಿ ಸಂಸದನಾಗಿದ್ದೇನೆ. ನಾನು ವೈಯಕ್ತಿಕವಾಗಿ ಏನೂ ಬೇಡಲ್ಲ, ಸಮಾಜಕ್ಕಾಗಿ ಕೇಳುತ್ತೇನೆ. ಸಿಎಂ ಮಾಡೋದು ಬಿಡೋದು ನಮ್ಮ ಪಕ್ಷದವರಿಗೆ ಬಿಟ್ಟಿದ್ದು. ನಾನು ನನ್ನ ಅಭಿಪ್ರಾಯ ಮಾತ್ರ ಹೇಳುತ್ತೇನೆ, ಮಾಡುತ್ತಾರೋ ಬಿಡುತ್ತಾರೋ ಆ ಮಾತು ಬೇರೆ ಎಂದರು.ಕಾಂಗ್ರೆಸ್ ಸರ್ಕಾರಕ್ಕೆ ಸಾವಿರ ದಿನ ಪೂರೈಕೆ ಹಿನ್ನೆಲೆ, ಸರ್ಕಾರದ ವಿರುದ್ಧ ಹರಿಹಾಯ್ದ ಜಿಗಜಿಣಗಿ, ರಾಜ್ಯ ಸರ್ಕಾರ ಕೇಂದ್ರದ ಅನುದಾನವನ್ನು ಉಪಯೋಗ ಮಾಡಿಕೊಳ್ಳುತ್ತಿಲ್ಲ. 45 ವರ್ಷಗಳಿಂದ ರಾಜಕಾರಣ ನೋಡಿಕೊಂಡು ಬಂದಿದ್ದೇನೆ. ಇಂಥ ಸರ್ಕಾರವನ್ನು ಎಂದೂ ಕಂಡಿಲ್ಲ. ಇದು ಹೊಲಸು ಸರ್ಕಾರ. ಬೆಳಗ್ಗೆ ಮುಸ್ಲಿಂ ಮಧ್ಯಾಹ್ನ ದಲಿತರ ಸಾಯಂಕಾಲ ಓಬಿಸಿ ಹೆಸರು ಹೇಳುತ್ತೀರಿ. ಇವಷ್ಟೇ ಸಮುದಾಯಗಳಿಂದ ಮಾತ್ರ ಸರ್ಕಾರ ಆಗುತ್ತಾ? ಬೇರೆ ಸಮಾಜಗಳು ಬೇಡವೇ ಎಂದು ಪ್ರಶ್ನಿಸಿದರು.ಮುಂದಿನ ದಿನಗಳಲ್ಲಿ ಇವರನ್ನು ದೇವರೇ ಕಾಪಾಡಲು ಆಗಲ್ಲ. ಅವಮಾನ ಅತ್ಯಾಚಾರ ಆಗುತ್ತಿದೆ. ಬೆಂಗಳೂರಲ್ಲೇ ಮಹಿಳೆಯರು ಓಡಾಡಲು ಆಗುತ್ತಿಲ್ಲ. ಯಾವ ಸರ್ಕಾರವೂ ಇಂತಹ ಅವಮಾನ ಕೆಲಸ ಮಾಡಿಲ್ಲ. ಯಾರೇ ಜನರು ಸರ್ಕಾರಕ್ಕೆ ಸಹಕಾರ ನೀಡಲ್ಲ. ಮುಂದಿನ ಚುನಾವಣೆ ನಾಳೆಯೇ ನಡೆಯಲಿ, ಮುಂದೆ ನಡೆಯಲಿ ಕಾಂಗ್ರೆಸ್‌ಗೆ ಅಧಿಕಾರ ಸಿಗಲ್ಲ ಎಂದರು.ಕಾಂಗ್ರೆಸ್‌ ಲೇವಡಿಯ ಪೋಸ್ಟರ್‌ ಬಿಡುಗಡೆ:

ಕಾಂಗ್ರೆಸ್ ಸರ್ಕಾರದ ಸಾವಿರ ದಿನ ಸಾವಿರ ಸಮಸ್ಯೆಗಳು ಎಂಬ ಪೋಸ್ಟರ್‌ ಅನ್ನು ನಗರದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಡುಗಡೆ ಮಾಡಿ ಸಂಸದ ಜಿಗಜಿಣಗಿ ಹಾಗೂ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಲೇವಡಿ ಮಾಡಿದರು. ಬಳಿಕ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಾವಿರ ದಿನ ಪೂರೈಸಿದ್ದು ಸಾವಿರ ಸಾವಿರ ಸಮಸ್ಯೆಗಳಿಗೆ ಹೊರತು ಅಭಿವೃದ್ಧಿಗಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಮಿಷನ್, ಭ್ರಷ್ಟಾಚಾರ, ಹಗರಣಗಳು ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿವೆ. ಸಾವಿರಾರು ಕೋಟಿ ಲೂಟಿ ಹೊಡೆದು ಕಾಂಗ್ರೆಸ್ ಸರ್ಕಾರ ಸಾವಿರ ದಿನ ಪೂರೈಸಿದೆ. ಮುಡಾ ಹಗರಣ, ವಾಲ್ಮಿಕಿ ಹಗರಣ, ಅಬಕಾರಿ ಇಲಾಖೆಯಲ್ಲಿ ಹಗರಣ, ಸ್ಮಾರ್ಟ್ ಮೀಟರ್ ಹಗರಣ, ಸಾವಿರಾರು ಕೊಲೆ, ಮಹಿಳೆಯರಿಗೆ ಭದ್ರತೆ ಇಲ್ಲದ ಕಾಂಗ್ರೆಸ್ ಸರ್ಕಾರ. 2024 ರಲ್ಲಿ 324 ಅತ್ಯಾಚಾರ ಪ್ರಖರಣಗಳಾಗಿವೆ. ಎಂದು ಕಾಂಗ್ರೆಸ್ ಸರ್ಕಾರದ 1000 ದಿನಗಳ ಸಾಧನೆ ಬಗ್ಗೆ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್‌.ಕೆ.ಬೆಳ್ಳುಬ್ಬಿ, ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಅರುಣ ಶಹಾಪುರ, ಮುಖಂಡರಾದ ಸುರೇಶ ಬಿರಾದಾರ, ಉಮೇಶ ಕಾರಜೋಳ, ಮಳುಗೌಡ ಪಾಟೀಲ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ‘ಬಳ್ಳಾರಿ ಚಲೋ’ ಪಾದಯಾತ್ರೆ ಇಂದಿನಿಂದ
3200 ರೈತರಿಗೆ ಬಿಡಿಎ ಸೈಟ್‌ - ಬೆಂಗಳೂರಲ್ಲಿ ₹16000 ಕೋಟಿ ವೆಚ್ಚದ ಕಾರಂತ ಬಡಾವಣೆ