ಮಹಿಳೆ ಆರೋಗ್ಯಕ್ಕೂ ಮಹತ್ವ ನೀಡಲಿ

KannadaprabhaNewsNetwork |  
Published : Mar 11, 2026, 02:45 AM IST
ಮಹಿಳೆ ಆರೋಗ್ಯಕ್ಕೂ ಮಹತ್ವ  ನೀಡಲಿ  : ಜಿಲ್ಲಾಧಿಕಾರಿ ಸಂಗಪ್ಪ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಮಹಿಳೆಯರು ತಮ್ಮ ಮನೆಯ ಆರ್ಥಿಕ ಸುಧಾರಣೆಗೆ ಮಹತ್ವ ನೀಡಿದಷ್ಟೇ ತಮ್ಮ ಆರೋಗ್ಯಕ್ಕೂ ಅಷ್ಟೇ ಮಹತ್ವ ನೀಡಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಿಳೆಯರು ತಮ್ಮ ಮನೆಯ ಆರ್ಥಿಕ ಸುಧಾರಣೆಗೆ ಮಹತ್ವ ನೀಡಿದಷ್ಟೇ ತಮ್ಮ ಆರೋಗ್ಯಕ್ಕೂ ಅಷ್ಟೇ ಮಹತ್ವ ನೀಡಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು .

ಮಹಿಳೆಯರು ತಮ್ಮ ಕುಟುಂಬ ಮತ್ತು ಮಕ್ಕಳ ಪಾಲನೆ ಪೋಷಣೆಗೆ ಹೆಚ್ಚು ಒತ್ತು ಕೊಟ್ಟು ತಮ್ಮ ಆರೋಗ್ಯ ನಿರ್ಲಕ್ಷಿಸುತ್ತಾರೆ. ಹೆಚ್ಚಿನ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ ಇರುವ ಕುರಿತು ವರದಿಗಳು ಹೇಳುತ್ತವೆ. ಆದ್ದರಿಂದ ಹೆಣ್ಣು ಮಕ್ಕಳು ಆರೋಗ್ಯಕ್ಕೂ ಆದ್ಯತೆ ನೀಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಬೇಕು. ಕ್ರೀಡೆಗಳು ಆರೋಗ್ಯ ವೃದ್ಧಿಗೆ ಸಹಕಾರಿಯಾಗಿರುವುದರಿಂದ ಮಹಿಳೆಯರು ಮುಕ್ತವಾಗಿ ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸುವಂತಾಗಬೇಕು ಎಂದು ಹೇಳಿದರು.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಇನ್ನೂ ಬಯಲು ಶೌಚ ರೂಢಿಯಲ್ಲಿದೆ. ಇದು ಮಹಿಳೆಯರ ಸ್ಥಾನಮಾನಕ್ಕೆ ಚ್ಯುತಿ ತರುವಂತಾಗಿದೆ. ಬಯಲು ಬಹಿರ್ದೆಸೆ ಆರೋಗ್ಯದ ಮೇಲೂ ದುಷ್ಟಪರಿಣಾಮ ಬೀರುವುದರಿಂದ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಶೌಚಾಲಯಗಳಿಗೆ ಬೇಡಿಕೆ ಇಡಬೇಕು. ಬೇಡಿಕೆ ಇಡುವ ಮಹಿಳೆಯರಿಗೆ ಜಿಲ್ಲಾಡಳಿತ ಬೆಂಗಾವಲಿನಂತೆ ನಿಂತು ಸಹಾಯ, ಸಹಕಾರ ನೀಡಲು ಸದಾ ಸಿದ್ಧವಿರುತ್ತದೆ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ ಮಾತನಾಡಿ, ಕ್ರೀಡೆಗಳು ಮನಸ್ಸನ್ನು ಶುಚಿಗೊಳಿಸುವ ಸಾಮರ್ಥ್ಯ ಹೊಂದಿವೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಕ್ರೀಡೆ ಕಲಿಸಿಕೊಡುತ್ತದೆ. ಮಹಿಳೆ ಇಂದು ಸಾಕಷ್ಟು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾಳೆ. ಸಾಧನೆ ಮಾಡಿದ್ದಾಳೆ. ಇನ್ನೂ ಸಾಕಷ್ಟು ಸಾಧನೆ ಆಗಬೇಕಿದೆ. 21ನೇ ಶತಮಾನದಲ್ಲೂ ಮಹಿಳಾ ಸಮಾನತೆಗೆ ಹೊರಾಡಬೇಕಿದೆ. ನಮ್ಮ ಹಕ್ಕುಗಳನ್ನು ಪಡೆಯಲು ನಾವು ಸದಾ ಸಿದ್ಧರಿರಬೇಕು. ಈ ನಿಟ್ಟಿನಲ್ಲಿ ಎಲ್ಲ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಪಂಕಜಾ ಜೋಷಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಕ್ರೀಡಾ ತರಬೇತಿದಾರರಾದ ಅನೀತಾ ನಿಂಬರಗಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ
ಪರೀಕ್ಷಾ ಭಯ ಹೋಗಲಾಡಿಸುವ ಪ್ರೇರಣಾ ಶಿಬಿರ