ಕಾರವಾರ:
ಸಂಸದ ಅನಂತಕುಮಾರ ಹೆಗಡೆ ಅವರು ಸಕ್ರಿಯ ರಾಜಕೀಯಕ್ಕೆ ಬಂದು ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸಿ ಅವರ ಹೊನ್ನಾವರದ ಅಭಿಮಾನಿಗಳು ಶ್ರೀಕುಮಾರ ರೋಡಲೈನ್ಸ್ ಮುಖ್ಯಸ್ಥ ವೆಂಕಟ್ರಮಣ ಹೆಗಡೆ ಕವಲಕ್ಕಿ ಅವರ ನೇತೃತ್ವದಲ್ಲಿ ಡಿ.24 ರಂದು ಅವರ ಶಿರಸಿ ನಿವಾಸಕ್ಕೆ ತೆರಳಿ ಹಕ್ಕೊತ್ತಾಯ ಮಾಡಲಿದ್ದಾರೆ.ವೆಂಕಟ್ರಮಣ ಹೆಗಡೆ ಕವಲಕ್ಕಿ ನೇತೃತ್ವದಲ್ಲಿ ಅಂದು 11.30ಕ್ಕೆ ಸಂಸದರ ನೂರಾರು ಅಭಿಮಾನಿಗಳು ಸೇರಿ ಹಕ್ಕೊತ್ತಾಯ ನಡೆಸಲಿದ್ದಾರೆ.
ಭಾರತ ಜಗತ್ತಿನ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ದೇಶದ ಭವಿಷ್ಯ ಇನ್ನಷ್ಟು ಉಜ್ವಲವಾಗಬೇಕಿದ್ದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಮೋದಿ ಅವರ ಕೈಬಲಪಡಿಸಬೇಕಾದಲ್ಲಿ ಉತ್ತರ ಕನ್ನಡ ಕ್ಷೇತ್ರದಲ್ಲಿ ಸಂಸದ ಅನಂತಕುಮಾರ ಹೆಗಡೆ ಮತ್ತೆ ಸಕ್ರಿಯ ರಾಜಕೀಯಕ್ಕೆ ಬಂದು ಚುನಾವಣಾ ಕಣಕ್ಕಿಳಿಯಬೇಕು. ಈ ಕ್ಷೇತ್ರದಲ್ಲಿ ಗೆದ್ದು ಬರಬೇಕು ಎಂದು ವೆಂಕಟ್ರಮಣ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.ಅನಂತಕುಮಾರ ಹೆಗಡೆ ಕೆಲವು ತಿಂಗಳಿಂದ ರಾಜಕೀಯವಾಗಿ ತಟಸ್ಥ ನೀತಿ ಅನುಸರಿಸುತ್ತಿದ್ದಾರೆ. ಇದು ಈ ಕ್ಷೇತ್ರದಲ್ಲಷ್ಟೇ ಅಲ್ಲ, ರಾಜ್ಯಾದ್ಯಂತ ಅವರ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ. ಅನಂತಕುಮಾರ ಹೆಗಡೆ ಅವರು ಸಕ್ರಿಯ ರಾಜಕಾರಣದಲ್ಲಿದ್ದರೆ ಇಡಿ ರಾಜ್ಯದಲ್ಲೇ ಬಿಜೆಪಿ ಪರವಾದ ವಾತಾವರಣ ತಲೆ ಎತ್ತಲಿದೆ. ಉತ್ತರ ಕನ್ನಡ ಕ್ಷೇತ್ರದಲ್ಲೂ ಹೆಗಡೆ ನಿರಾಯಾಸವಾಗಿ ಗೆದ್ದು ಬರಲಿದ್ದಾರೆ. ಬಿಜೆಪಿಯ ವರಿಷ್ಠರೂ ಹೆಗಡೆ ಅವರಿಗೆ ಗೌರವದ ಸ್ಥಾನಮಾನ ನೀಡಬೇಕು. ಅವರ ಅನುಭವ, ಸಂಘಟನಾ ಶಕ್ತಿ ಬಳಸಿಕೊಳ್ಳಬೇಕು ಎಂದು ವೆಂಕಟ್ರಮಣ ಹೆಗಡೆ ಹೇಳುತ್ತಾರೆ.
ಪ್ರಖರ ರಾಷ್ಟ್ರೀಯತೆಯಿಂದ ರಾಜ್ಯಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅನಂತಕುಮಾರ ಹೆಗಡೆ ಭಾರತೀಯ ಜನತಾ ಪಕ್ಷಕ್ಕೆ ಅಮೂಲ್ಯ ಆಸ್ತಿಯಾಗಿದ್ದಾರೆ. ಅವರು ಸಕ್ರಿಯ ರಾಜಕೀಯಕ್ಕೆ ಮರಳಿದಲ್ಲಿ ಉತ್ತರ ಕನ್ನಡದಲ್ಲಿ ಬಿಜೆಪಿ ಇನ್ನಷ್ಟು ಬಲಿಷ್ಠವಾಗಲಿದೆ. ಸಕ್ರಿಯ ರಾಜಕೀಯಕ್ಕೆ ಬಂದು ಚುನಾವಣೆಗೆ ನಿಲ್ಲುವಂತೆ ಅನಂತಕುಮಾರ ಹೆಗಡೆ ಅವರನ್ನು ಆಗ್ರಹಿಸುವುದು, ಹೆಗಡೆ ಅವರಿಗೆ ಪಕ್ಷದಲ್ಲಿ ಗೌರವಯುತ ಸ್ಥಾನಮಾನ ಕಲ್ಪಿಸುವಂತೆ ವರಿಷ್ಠರನ್ನು ಒತ್ತಾಯಿಸುವುದು ಈ ಹಕ್ಕೊತ್ತಾಯದ ಪ್ರಮುಖ ಉದ್ದೇಶವಾಗಿದೆ.ವೆಂಕಟ್ರಮಣ ಹೆಗಡೆ ಕವಲಕ್ಕಿ ಈ ಹಕ್ಕೊತ್ತಾಯ ನಡೆಸುವುದಾಗಿ ಪ್ರಕಟಿಸುತ್ತಿದ್ದಂತೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿನ ಅವರ ಅಭಿಮಾನಿಗಳು ಅವರ ನಿವಾಸದತ್ತ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ.
ಅನಂತಕುಮಾರ್ ಹೆಗಡೆ ಕೆಲವು ತಿಂಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿ ಇರದೆ ಇರುವುದು ಅವರ ಬೆಂಬಲಿಗರಲ್ಲಿ ನಿರಾಸೆ ಮೂಡಿಸಿದೆ. ಅವರ ಪ್ರಖರವಾದ ಭಾಷಣ ಇಡಿ ಜಿಲ್ಲೆಯಲ್ಲಿ ಸಂಚಲನ ಹುಟ್ಟಿಸುತ್ತಿತ್ತು. ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಅದಮ್ಯ ಉತ್ಸಾಹ ತುಂಬುತ್ತಿದ್ದರು. ಇದೇ ಕಾರಣಕ್ಕೆ ಅವರ ಬೆಂಬಲಿಗರು ಹೆಗಡೆ ಅವರು ಸಕ್ರಿಯ ರಾಜಕಾರಣಕ್ಕೆ ಮರಳಬೇಕೆಂದು ಬಯಸುತ್ತಿದ್ದಾರೆ.ಅನಂತಕುಮಾರ್ ಹೆಗಡೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ನಿಲ್ಲದೆ ಇದ್ದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಇದೆ. ಆದರೆ ಪ್ರತಿಯೊಬ್ಬ ಆಕಾಂಕ್ಷಿಯೂ ಹೆಗಡೆ ಅವರು ಚುನಾವಣೆಗೆ ಸ್ಪರ್ಧಿಸುವುದಾದಲ್ಲಿ ತಾವು ಕಣಕ್ಕಿಳಿಯುವುದಿಲ್ಲ ಎನ್ನುತ್ತಿದ್ದಾರೆ. ಹೆಗಡೆ ಅವರಿಗೇ ಟಿಕೆಟ್ ನೀಡಿದಲ್ಲಿ ಎಲ್ಲ ಆಕಾಂಕ್ಷಿಗಳೂ ಒಂದಾಗಿ ಪಕ್ಷದ ಗೆಲುವಿಗೆ ಶ್ರಮಿಸಲಿದ್ದಾರೆ. ಸುಲಭವಾಗಿ ಉತ್ತರ ಕನ್ನಡ ಲೋಕಸಭಾ ಸ್ಥಾನದಲ್ಲಿ ಜಯಗಳಿಸಬಹುದು ಎನ್ನುವುದು ಸಂಸದರ ಬೆಂಬಲಿಗರ ಲೆಕ್ಕಾಚಾರ.ಇದಲ್ಲದೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆನ್ನುವುದು ಪಕ್ಷದಲ್ಲಿ ಮೂಡಿಬರುತ್ತಿರುವ ಒಕ್ಕೊರಲಿನ ಅಭಿಪ್ರಾಯ. ಮೋದಿ ಕೈ ಬಲಪಡಿಸಲು ಹೆಗಡೆ ಅವರಂತಹ ನಾಯಕರು ಬೇಕು. ಜೊತೆಗೆ ಈ ಕ್ಷೇತ್ರವೂ ಬಿಜೆಪಿ ಮಡಿಲಿಗೆ ಬಿದ್ದಂತಾಗಲಿದೆ ಎನ್ನುವ ಅಭಿಪ್ರಾಯ ಬೆಂಬಲಿಗರದ್ದು.ಇದೆಲ್ಲ ಕಾರಣಗಳಿಂದ ಅವರ ಬೆಂಬಲಿಗರು ಹೆಗಡೆ ಅವರ ನಿವಾಸದ ಮುಂದೆ ಹಕ್ಕೊತ್ತಾಯ ಮಾಡಲು ಸಂಘಟಿತರಾಗುತ್ತಿದ್ದಾರೆ. ಹೊನ್ನಾವರದ ಅಭಿಮಾನಿಗಳ ಸಾರಥ್ಯವನ್ನು ವೆಂಕಟ್ರಮಣ ಹೆಗಡೆ ಕವಲಕ್ಕಿ ವಹಿಸುತ್ತಿದ್ದಾರೆ.
ವೆಂಕಟ್ರಮಣ ಹೆಗಡೆ ಕವಲಕ್ಕಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಟ್ಟಾ ಬೆಂಬಲಿಗರು. ಮೇಲಾಗಿ ಅನಂತಕುಮಾರ ಹೆಗಡೆ ಅವರ ಆತ್ಮೀಯರು, ಬೆಂಬಲಿಗರೂ ಹೌದು. ಮೋದಿ ಕೈಬಲಪಡಿಸಲು, ಬಿಜೆಪಿ ಈ ಕ್ಷೇತ್ರವನ್ನು ಗೆಲ್ಲಲು ಹಾಗೂ ಅನಂತಕುಮಾರ್ ಹೆಗಡೆ ಅವರೇ ಕಣಕ್ಕಿಳಿಯಬೇಕು ಎನ್ನುವುದು ಅವರ ನಿಲುವು. ಈಗ ವೆಂಕಟ್ರಮಣ ಹೆಗಡೆ ನೇತೃತ್ವದಲ್ಲಿ ಹಕ್ಕೊತ್ತಾಯ ನಡೆಯುತ್ತಿದ್ದಂತೆ ಜಿಲ್ಲೆಯ ಇತರೆಡೆಗಳಲ್ಲಿನ ಸಂಸದರ ಅಭಿಮಾನಿಗಳೂ ಹಕ್ಕೊತ್ತಾಯ ಮಂಡಿಸಲು ಹೆಗಡೆ ಅವರ ನಿವಾಸದ ಎದುರು ಬೇರೆ ಬೇರೆ ದಿನಗಳಂದು ಆಗಮಿಸುವ ಸಾಧ್ಯತೆ ಹೆಚ್ಚಿದೆ. ಒಟ್ಟಿನಲ್ಲಿ ಹೇಗಾದರೂ ಮಾಡಿ ಅನಂತಕುಮಾರ ಹೆಗಡೆ ಅವರನ್ನು ಚುನಾವಣಾ ಕಣಕ್ಕಿಳಿಸಲು ಅವರ ಬೆಂಬಲಿಗರು ಅಣಿಯಾಗಿದ್ದಾರೆ.ದೇಶದ ಹಿತಕ್ಕೆ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿ ಆಗಬೇಕು. ಉತ್ತರ ಕನ್ನಡದಲ್ಲಿ ಅನಂತಕುಮಾರ್ ಹೆಗಡೆ ಅವರೇ ಸಂಸದರಾಗಬೇಕು. ಇದರಿಂದ ರಾಷ್ಟ್ರ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಎರಡರ ಭವಿಷ್ಯವೂ ಇನ್ನಷ್ಟು ಉಜ್ವಲವಾಗಲಿದೆ ಎಂದು ವೆಂಕಟ್ರಮಣ ಹೆಗಡೆ ಕವಲಕ್ಕಿ ಹೇಳಿದ್ದಾರೆ.