ಎಲ್ಲೆಡೆ ‘ಅರೆಭಾಷೆ ದಿನಾಚರಣೆ’ ಜರುಗಲಿ: ಕಾಳನ ರವಿ

KannadaprabhaNewsNetwork | Published : Dec 16, 2023 2:00 AM

ಸಾರಾಂಶ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಜಿಲ್ಲೆಯ ಗೌಡ ಸಮಾಜ-ಸಂಘಟನೆಗಳ ಸಹಯೋಗದಲ್ಲಿ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ಅರೆಭಾಷೆ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಭಾಗಗಳಲ್ಲಿ ಅರೆಭಾಷೆ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಗ್ರಾಮೀಣ ಪ್ರದೇಶದಲ್ಲಿಯೂ ‘ಅರೆಭಾಷೆ ದಿನ’ ಆಚರಣೆ ಆಯೋಜಿಸುವಂತಾಗಬೇಕು ಎಂದು ಭಾಗಮಂಡಲ ಗ್ರಾ.ಪಂ.ಅಧ್ಯಕ್ಷ ಕಾಳನ ರವಿ ಸಲಹೆ ಮಾಡಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಜಿಲ್ಲೆಯ ಗೌಡ ಸಮಾಜ-ಸಂಘಟನೆಗಳ ಸಹಯೋಗದಲ್ಲಿ ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಅರೆಭಾಷೆ ದಿನಾಚರಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಉಪ ಭಾಷೆಯಾದ ಅರೆಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನೆಗಳಲ್ಲಿ ಅರೆಭಾಷೆಯನ್ನು ಮಾತನಾಡುವಂತಾಗಬೇಕು. ಇದರಿಂದ ಮಕ್ಕಳಿಗೆ ಭಾಷೆ ಕಲಿಸಲು ಸಾಧ್ಯವಾಗಲಿದೆ ಎಂದು ಕಾಳನ ರವಿ ಅವರು ಅಭಿಪ್ರಾಯಪಟ್ಟರು.

ಭಾಗಮಂಡಲ ವ್ಯಾಪ್ತಿಯಲ್ಲಿ ಶೇ.75 ಕ್ಕೂ ಹೆಚ್ಚು ಜನರು ಅರೆಭಾಷೆ ಮಾತನಾಡುವವರು ವಾಸಿಸುತ್ತಿದ್ದಾರೆ. ಅರೆಭಾಷೆ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತಾಗಬೇಕು ಎಂದು ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಹಲವರು ಶ್ರಮಿಸಿದ್ದಾರೆ ಎಂದರು.

ಅರೆಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಬೆಳೆಸುವತ್ತ ಒತ್ತು ನೀಡಿ ಕಾರ್ಯಕ್ರಮವನ್ನು ತಮ್ಮ ಅವಧಿಯಲ್ಲಿ ಆಯೋಜಿಸಲಾಗಿತ್ತು ಎಂದು ತಿಳಿಸಿದರು.

ಅರೆಭಾಷೆಯು ವಿಶಿಷ್ಟ ಮಾತೃ ಹೃದಯ ಭಾಷೆಯಾಗಿದ್ದು, ಈ ಭಾಷೆಯ ಅಸ್ತಿತ್ವ ಉಳಿಸುವಂತಾಗಬೇಕು ಎಂದರು. ಸಾಂಸ್ಕೃತಿಕ ಸಮಾವೇಶಗಳು, ಸಾಹಿತ್ಯ ಸಮ್ಮೇಳನಗಳು, ಹೀಗೆ ಹಲವು ಕಾರ್ಯಕ್ರಮಗಳನ್ನು ಹೊರಜಿಲ್ಲೆಗಳಲ್ಲೂ ಸಹ ಆಯೋಜಿಸಿ ಅರೆಭಾಷೆ ಬೆಳವಣಿಗೆಗೆ ಶ್ರಮಿಸಲಾಗಿತ್ತು ಎಂದರು.

‘ಹಿಂಗಾರು ತ್ರೈಮಾಸಿಕ’ ಪತ್ರಿಕೆ ಪ್ರಕಟಿಸುವ ನಿಟ್ಟಿನಲ್ಲಿ ‘ಸಂಪಾದಕೀಯ ಸಲಹಾ ಸಮಿತಿ’ ರಚಿಸಿಕೊಂಡು ಹೊರ ತರುವಂತಾಗಬೇಕು ಎಂದು ಕೊಲ್ಯದ ಗಿರೀಶ್ ಅವರು ಸಲಹೆ ಮಾಡಿದರು.

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಮಾತನಾಡಿ, ಅರೆಭಾಷೆ ಬೆಳವಣಿಗೆಗೆ ಪ್ರತಿಯೊಬ್ಬರೂ ಅರೆಭಾಷೆ ಮಾತಾಡುವುದರ ಜೊತೆಗೆ, ಓದುವ ಮತ್ತು ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಲೇಖನ, ಕಥೆ, ಕವನ, ಬರೆಯುವ ಮೂಲಕ ಅರೆಭಾಷೆ ಬೆಳವಣಿಗೆಗೆ ಮುಂದಾಗಬೇಕಿದೆ ಎಂದು ಸಲಹೆ ಮಾಡಿದರು.

‘ಸಾಹೇಬ್ರು ಬಂದವೆ’ ನಾಟಕ ಹಲವು ಕಡೆ ಪ್ರದರ್ಶನ ಮಾಡುವ ಮೂಲಕ ಅರೆಭಾಷೆ ಮಹತ್ವ ತಿಳಿಸುವಲ್ಲಿ ಸಹಕಾರಿಯಾಯಿತು ಎಂಬುದನ್ನು ಮರೆಯುವಂತಿಲ್ಲ. ಅರೆಭಾಷೆಯಲ್ಲಿ ವಿಡಂಬನೆ, ಹಾಸ್ಯ, ಗಂಭೀರತೆ ಮತ್ತಿತರ ಪ್ರಯೋಗಗಳು ‘ಸಾಹೇಬ್ರು ಬಂದವೆ’ ನಾಟಕದಲ್ಲಿ ಕಾಣಬಹುದಾಗಿದೆ ಎಂದರು.

‘ಅರೆಭಾಷೆಯಲ್ಲಿ ಪದಕೋಶ, ವಿಶ್ವಕೋಶ, ಪಾರಂಪರಿಕ ವಸ್ತುಕೋಶ ಹೀಗೆ ಹಲವು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅರೆಭಾಷೆ ಬೆಳವಣಿಗೆಗೆ ಶ್ರಮಿಸಲಾಗಿದೆ. ಅವುಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದರು.’

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪನೆಯಾಗಿರುವುದು ದೊಡ್ಡ ಸಾಧನೆ ಎಂದರೆ ತಪ್ಪಾಗಲಾರದು. ಅರೆಭಾಷೆ ಪುಸ್ತಕಗಳ ಡಿಜಿಟಲೀಕರಣ. ಅರೆಭಾಷೆ ಸಾಧಕರ ಮಾಲೆ, ಸಾಕ್ಷ್ಯಚಿತ್ರ, ಚಿತ್ರಕಲಾ ಶಿಬಿರ, ಅರೆಭಾಷೆ ಐಎಸ್‌ಒ ಕೋಡ್ ಮಾನ್ಯತೆಗೆ ಪ್ರಯತ್ನ, ವಿಚಾರ ಸಂಕಿರಣಗಳು ಹೀಗೆ ಹಲವು ಕಾರ್ಯಕ್ರಮಗಳನ್ನು ತಮ್ಮ ಅವಧಿಯಲ್ಲಿ ಆಯೋಜಿಸಿ ಅರೆಭಾಷೆ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದು ಲಕ್ಷ್ಮೀನಾರಾಯಣ ಕಜೆಗದ್ದೆ ವಿವರಿಸಿದರು.

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ಮಾತನಾಡಿ, ಅರೆಭಾಷೆ ಅಕಾಡೆಮಿ ಸ್ಥಾಪನೆಗೆ ಎಲ್ಲರೂ ಶ್ರಮಿಸಿದ್ದಾರೆ. ಅರೆಭಾಷೆಯನ್ನು ಮುಂದಿನ ಜನಾಂಗಕ್ಕೂ ತಿಳಿಸುವ ನಿಟ್ಟಿನಲ್ಲಿ ಅರೆಭಾಷೆ ಮಾತನಾಡುವಂತಾಗಬೇಕು ಎಂದರು. ನಿವೃತ್ತ ಪೊಲೀಸ್ ಅಧೀಕ್ಷಕರಾದ ಚೊಕ್ಕಾಡಿ ಅಪ್ಪಯ್ಯ ಮಾತನಾಡಿ, ಕೋಡಿ ಕುಶಾಲಪ್ಪ ಗೌಡ ಮತ್ತು ಪುರುಷೋತ್ತಮ ಬಿಳಿಮಲೆ ಬರೆದಿರುವ ಪುಸ್ತಕವನ್ನು ಎಲ್ಲಾ ಅರೆಭಾಷಿಕರು ಓದುವಂತಾಗಬೇಕು ಎಂದರು. ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ, ಮಾತೃ ಭಾಷೆಯಾದ ಅರೆಭಾಷೆಯನ್ನು ಕನ್ನಡ ಜೊತೆ ಕಲಿಯಬೇಕು ಎಂದರು. ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಅಂಬೆಕಲ್ ನವೀನ್ ಮಾತನಾಡಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಮಾತನಾಡಿ, ಹಿಂಗಾರು ತ್ರೈಮಾಸಿಕ ಪುಸ್ತಕ ಪ್ರಕಟಿಸುವ ನಿಟ್ಟಿನಲ್ಲಿ ಸಂಪಾದಕೀಯ ಸಮಿತಿ ರಚಿಸಿಕೊಂಡು ನಿಯಮಾನುಸಾರ ತ್ವರಿತ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ, ಉಪಾಧ್ಯಕ್ಷರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಕುದುಪಜೆ ರೋಹಿಣಿ, ಪೇರಿಯನ ಮುತ್ತಮ್ಮ, ನಾರೋಲನ ಭಾಗೀರಥಿ, ಬಾರನ ಶೋಭಾ, ಮೂಲೆಮಜಲು ಅಮಿತಾ, ಕಟ್ರತನ ಲಲಿತ ಐಯ್ಯಣ್ಣ, ಬೈಮನ ಜ್ಯೋತಿ ಮತ್ತಿತರರಿದ್ದರು.

ಕೊಡಗು ಗೌಡ ಮಹಿಳಾ ಒಕ್ಕೂಟದ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಬೈತಡ್ಕ ಜಾನಕಿ ಬೆಳ್ಯಪ್ಪ ಅವರು ಅರೆಭಾಷೆ ದಿನಾಚರಣೆ ಮಹತ್ವದ ಕುರಿತು ಹಾಡು ಹಾಡಿದರು. ಪ್ರೇಮ ರಾಘವಯ್ಯ ಮತ್ತು ರೇವತಿ ರಮೇಶ್ ನಾಡಗೀತೆ ಹಾಡಿದರು.

ರಿಜಿಸ್ಟ್ರಾರ್‌ ಚಿನ್ನಸ್ವಾಮಿ ಸ್ವಾಗತಿಸಿದರು. ವಿನೋದ್ ಮೂಡಗದ್ದೆ ನಿರೂಪಿಸಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಕೊಡಗು ಗೌಡ ವಿದ್ಯಾಸಂಘದ ಕಾರ್ಯದರ್ಶಿ ಪೇರಿಯನ ಉದಯ್ ಕುಮಾರ್ ವಂದಿಸಿದರು.

Share this article