ಬಯಲಾಟ ಹೊಸ ಪ್ರಯೋಗದೊಂದಿಗೆ ಜನಮುಖಿಯಾಗಲಿ

KannadaprabhaNewsNetwork |  
Published : Nov 10, 2025, 12:15 AM IST

ಸಾರಾಂಶ

ಕಲೆ ಜಡವಾಗಬಾರದು, ಬೆಳೆಯಬೇಕು, ಅದರಲ್ಲೂ ಬಯಲಾಟ ಹೊಸ ಪ್ರಯೋಗದೊಂದಿಗೆ ಜನಮುಖಿಯಾಗಬೇಕು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ, ತುಮಕೂರು

ಕಲೆ ಜಡವಾಗಬಾರದು, ಬೆಳೆಯಬೇಕು, ಅದರಲ್ಲೂ ಬಯಲಾಟ ಹೊಸ ಪ್ರಯೋಗದೊಂದಿಗೆ ಜನಮುಖಿಯಾಗಬೇಕು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಅವರು ತುಮಕೂರು ನಗರದ ಕನ್ನಡ ಭವನದಲ್ಲಿ ಬಯಲಾಟ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು. ಹೊಸ ಪ್ರಯೋಗಗಳು ಕಥೆಗೆ ಮಾಡಿದ ಅಪಚಾರವಲ್ಲ, ಆಧುನಿಕತೆಯನ್ನು ಮೈಗೂಡಿಸಿಕೊಂಡು ಯುವ ಪೀಳಿಗೆಯನ್ನು ತಲುಪವಂತಾಗಬೇಕು. ಜಾನಪದ ಯಾವಾಗಲೂ ಚಲನಶೀಲವಾಗಿರುತ್ತದೆ. ಸಂಸ್ಕೃತಿ, ಪರಂಪರೆ ಯಾವಾಗಲೂ ಚಲನಶೀಲವಾದರೆ ಮಾತ್ರ ಬಹುಕಾಲ ಉಳಿಯುತ್ತದೆ ಎಂದರು.

ಬಯಲಾಟ ಅಕಾಡೆಮಿ ಪ್ರಸಂಗಗಳನ್ನು ದಾಖಲೀಕರಣ ಮಾಡಬೇಕು. ಯುವಜನತೆ ನೋಡುವಂತಾದಾಗ ಜೀವಂತಿಕೆಯಿರುತ್ತದೆ. ಸರ್ಕಾರದಿಂದ ಬಯಲಾಟ ಜಾನಪದ ಬಿಂಬಿಸುವ ಮ್ಯೂಸಿಯಂ ಸಿದ್ಧವಾಗಬೇಕು. ಬಯಲಾಟ ಲೈಬ್ರರಿ ಪ್ರಾರಂಭಿಸಬೇಕು. ಸರ್ಕಾರ ಇತ್ತೀಚೆಗೆ ಬಯಲಾಟ ಅಕಾಡೆಮಿ ಸ್ಥಾಪಿಸಿ ಜನಸಾಮಾನ್ಯರಿಗೆ ಅವಕಾಶ ಕಲ್ಪಿಸಿದೆ. ಅಕಾಡೆಮಿ ರಾಜ್ಯದ 22 ಜಿಲ್ಲೆಗಳಲ್ಲಿ ನೆನಪಿನಲ್ಲಿ ಉಳಿಯುವ ಕೆಲಸ ಮಾಡಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಡಾ. ಲಕ್ಷ್ಮಣದಾಸ್ ಮಾತನಾಡಿ, ಕಲೆಯ ತವರೂರು ತುಮಕೂರು, ಬಯಲಾಟ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಅಕಾಡೆಮಿಗೆ ಆಗಮಿಸಿ ಪ್ರಯೋಜನ ಪಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಜನಮುಖಿಯಾಗಬೇಕೆಂದು ಶಾಲಾ ಕಾಲೇಜು ಕಡೆ ಕನ್ನಡದ ಕಾರ್ಯಕ್ರಮಗಳನ್ನು ತೆಗೆದುಕೊಂಡು ಹೋಗಿದ್ದೇವೆ. ಅಂತೆಯೇ ಗ್ರಾಮಾಂತರ ಪ್ರದೇಶಗಳಲ್ಲಿ ನಶಿಸಿಹೋಗುತ್ತಿರುವ ಬಯಲಾಟ ಪರಂಪರೆಯನ್ನು ನೆನಪಿಸಲು ಹಾಗೂ ಬೆಳೆಸಲು ಮೂರು ದಿನಗಳ ಕಾರ‍್ಯಾಗಾರ ಹಮ್ಮಿಕೊಂಡು ನಾಲ್ಕು ಪ್ರದರ್ಶನಗಳನ್ನು ಅಕಾಡೆಮಿ ಸಹಕಾರದಿಂದ ಯಶಸ್ವಿಯಾಗಿ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ವಿವಿಧ ಅಕಾಡೆಮಿಗಳ ಸಹಕಾರದಿಂದ ಜನಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ. ಕೆ.ಆರ್.ದುರ್ಗಾದಾಸ್ ಮಾತನಾಡಿ, ಮೂರು ದಿನಗಳ ಕಾಲ ನಾಡಿನ ವಿದ್ವಾಂಸರು ಆಗಮಿಸಿ, ಬಯಲಾಟದ ವಿವಿಧ ಮಜಲುಗಳನ್ನು ಚರ್ಚಿಸಿ ಉಪನ್ಯಾಸ ನೀಡಿದ್ದಾರೆ. 30 ರೀತಿಯ ಬಯಲಾಟ ಕಥೆಗಳು ತುಮಕೂರು ಜಿಲ್ಲೆಯಲ್ಲಿವೆ. ಎಲ್ಲಾ ಕಲಾವಿದರನ್ನು ಕರೆದು ಈ ಪರಂಪರೆಯ ಆಧುನಿಕತೆಯ ಸ್ವರೂಪ ತಿಳಿಸಲಾಗಿದೆ. ಇವುಗಳ ಪ್ರಯೋಜನ ಪಡೆಯುವಂತಾಗಬೇಕೆಂದು ಆಶಿಸಿದರು. ಬಯಲಾಟ ಅಕಾಡೆಮಿ ಸ್ಥಾಪನೆಗೆ ಕಾರಣರಾಗಿದ್ದ ನಾಡೋಜ ಬರಗೂರು ರಾಮಚಂದ್ರಪ್ಪನವರು ಆಗಮಿಸಿ ಸಮಾರೋಪ ಭಾಷಣ ಮಾಡಿರುವುದು ನಮಗೆಲ್ಲ ಶಕ್ತಿ ತುಂಬಿದೆ ಎಂದು ತಿಳಿಸಿದರು.

ಕಾರ್ಯದರ್ಶಿ ಸಣ್ಣಹೊನ್ನಯ್ಯಕಂಟಲಗೆರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿಕ್ಕಣ್ಣ ಎಣ್ಣೆಕಟ್ಟೆ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಮೂರು ದಿನಗಳ ಕಾಲ ನಡೆದ ಬಯಲಾಟ ಸಮ್ಮೇಳನ ಅತ್ಯಂತ ಯಶಸ್ವಿಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು 11 ಸಾವಿರ ನೀಡಿ
ದೇಶಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ