ಕನ್ನಡಪ್ರಭ ವಾರ್ತೆ ಕಡೂರು
ಕಾಂಗ್ರೆಸ್ ಪಕ್ಷದ ಪುರಸಭಾಧ್ಯಕ್ಷ ಎಂದು ಭಂಡಾರಿ ಶ್ರೀನಿವಾಸ್ ಹೇಳಿಕೊಂಡಿದ್ದು ಕಾಂಗ್ರೆಸ್‌ನ ಯಾವ ಸದಸ್ಯರು ಇವರಿಗೆ ಮತ ಹಾಕಿದ್ದಾರೆ ಎಂಬುದನ್ನು ಅವರು ಸ್ಪಷ್ಟ ಪಡಿಸಬೇಕು ಎಂದು ಕಾಂಗ್ರೆಸ್ ಹಿರಿಯ ಸದಸ್ಯ ತೋಟದಮನೆ ಮೋಹನ್ ಆಗ್ರಹಿಸಿದರು.ಕಡೂರು ಪುರಸಭೆ ಚುನಾವಣೆಗೆ ಸಂಭಂದಿಸಿದಂತೆ ಸಹ ಸದಸ್ಯರೊಂದಿಗೆ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪುರಸಭೆ ಚುನಾವಣೆಗೆ ಸಂಭಂದಿಸಿದಂತೆ ಶಾಸಕ ಕೆ.ಎಸ್.ಆನಂದ್ ಅವರು ಕರೆದ ಸಭೆಯಲ್ಲಿ, ಕಾಂಗ್ರೆಸ್ ಪಕ್ಷ ಸೇರಿದ್ದ ಭಂಡಾರಿ ಶ್ರೀನಿವಾಸ್ ಸೇರಿದಂತೆ 5 ಜೆಡಿಎಸ್, ಕಾಂಗ್ರೆಸ್‌ನ 7 ಮತ್ತು ಪಕ್ಷೇತರ1 ಸೇರಿ 13 ಜನರಲ್ಲಿ ಅಧ್ಯಕ್ಷರನ್ನು ಮಾಡಿಕೊಳ್ಳಿ ಎಂದು ಸೂಚಿಸಿದ್ದರು. ಅದಕ್ಕೆ ಪುರಸಭೆಯಲ್ಲಿ ಒಟ್ಟಿಗೆ ಹೋಗೋಣ ಪಟ್ಟಣದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಮಾತನಾಡಿದ್ದೆ ಆದರೆ ಭಂಡಾರಿ ಶ್ರೀನಿವಾಸ್ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿ ಅವರೇ ಅಧ್ಯಕ್ಷರಾಗಬಹುದಿತ್ತು. ಆದರೆ ಬಿಜೆಪಿಯೊಂದಿಗೆ ಕೈಜೋಡಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷಕ್ಕೆ ಕೆಟ್ಟ ಹೆಸರು ತಂದಿದ್ದಾರೆ ಎಂದು ಆರೋಪಿಸಿದರು.
ಶ್ರೀನಿವಾಸ್ ಅವರು ಕಾಂಗ್ರೆಸ್ ಪಕ್ಷ ಸೇರಿದ ಮೇಲೆ ಪಕ್ಷದ ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೋರಿ ಅಧ್ಯಕ್ಷರಾಗಿದ್ದಾರೆ. ಕಳೆದ 30 ತಿಂಗಳ ಆಡಳಿತ ನಡೆಸಿದ ಭಂಡಾರಿ ಶ್ರೀನಿವಾಸ್ ಒಪ್ಪಂದದಂತೆ ಬಿಜೆಪಿಯವರಿಗೆ ಬಿಟ್ಟುಕೊಡದೆ ತಾವೇ ಮತ್ತೆ ಅಧ್ಯಕ್ಷರಾಗಿದ್ದು, ಅಧಿಕಾರಕ್ಕೋಸ್ಕರ ಎಂಬಂತಾಗಿದೆ ಎಂದರು.ಕಾಂಗ್ರೆಸ್ ಪಕ್ಷದಿಂದ ತಾವು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವುದಾಗಿ ಶಾಸಕ ಕೆ.ಎಸ್. ಆನಂದ್ ರವರಿಗೆ ದೂರವಾಣಿ ಮೂಲಕ ತಿಳಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ಪಕ್ಷೇತರರು ಸೇರಿದಂತೆ ಬಿಜೆಪಿ ಎಲ್ಲ ಸದಸ್ಯರು ಬೆಳ್ಳಿ ಪ್ರಕಾಶ್ ರವರ ಮಾರ್ಗಸೂಚಿಯಂತೆ ನಡೆದುಕೊಂಡಿದ್ದಾರೆ.
ಜೆಡಿಎಸ್‌ನ ಜಿ. ಸೋಮಯ್ಯ 4 ಬಾರಿ ಗೆದ್ದಿದ್ದು, ಅವರನ್ನು ಅಧ್ಯಕ್ಷರನ್ನಾಗಿ ಮಾಡಬಹುದಿತ್ತು. ಅದನ್ನು ಬಿಟ್ಟು ಅಧಿಕಾರ ಕ್ಕೋಸ್ಕರ ಬಿಜೆಪಿ ಜೊತೆ ಕೈಜೋಡಿಸಿ ಮುಜುಗರ ಉಂಟುಮಾಡಿದ್ದಾರೆ ಎಂದು ಆರೋಪಿಸಿದರು.ಮುಂದಿನ ದಿನಗಳಲ್ಲಿ ಪುರಸಭೆಯಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಕಾಂಗ್ರೆಸ್ ವಿರೋಧ ಪಕ್ಷವಾಗಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪುರಸಭೆ ಕಾಂಗ್ರೆಸ್ ಸದಸ್ಯರಾದ ಜ್ಯೋತಿ ಆನಂದ್, ಹಾಲಮ್ಮ, ಭಾಗ್ಯಮ್ಮ, ಶ್ರೀಕಾಂತ್, ಪುರಸಭೆ ಮಾಜಿ ಉಪಾಧ್ಯಕ್ಷ ಎಂ.ಸೋಮಶೇಖರ್, ತೋಟದ ಮನೆ ಶ್ರೀನಿವಾಸ್, ಲೋಕೇಶ್, ಯಶ್ವಂತ್ ಶಾಂತಪ್ಪ ಮತ್ತಿತರರು ಇದ್ದರು.