ಕನ್ನಡಪ್ರಭ ವಾರ್ತೆ ಕಾರ್ಕಳಪರಶುರಾಮನ ಮೂರ್ತಿ ನಕಲಿ ಅಲ್ಲ ಎಂದಾದರೆ ಬೈಲೂರಿನ ಮಾರಿಗುಡಿಗೆ ಬಂದು ಸುನಿಲ್ ಕುಮಾರ್ ಹಾಗೂ ಬಿಜೆಪಿ ಮುಖಂಡರು ಪ್ರಮಾಣ ಮಾಡಲಿ ಎಂದು ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಶಾಸಕರು ಭಾವನಾತ್ಮಕವಾಗಿ ಜನರನ್ನು ಮೋಸಗೊಳಿಸಿದ್ದಾರೆ. ಇದು ನಾಚಿಕೆಗೇಡಿನ ವಿಷಯ. ಶಾಸಕರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೊಳಕು ಮನಸ್ಥಿತಿಯ ಬಕೆಟ್ ಹಿಡಿಯುವ ಕೆಲಸವನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ. ಕೊಳಕು ರೀತಿಯಲ್ಲಿ ಉತ್ತರ ನೀಡುವಷ್ಟು ನೀಚ ಮಟ್ಟಕ್ಕೆ ಕಾಂಗ್ರೆಸ್ ಇಳಿಯಲ್ಲ ಎಂದು ಉದಯಕುಮಾರ್ ಶೆಟ್ಟಿ ಹೇಳಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಮಾತನಾಡಿ, ಶಾಸಕ ಸುನಿಲ್ ಕುಮಾರ್ ಅವರ ಸಿಮೆಂಟ್ ಹಗರಣದಲ್ಲಿ ಬಿಜೆಪಿ ಮುಖಂಡ ಮಹಾವೀರ ಜೈನ್ ಅವರ ಕೈವಾಡವಿತ್ತು. ಅವರನ್ನು ಬಿಜೆಪಿ ಕಚೇರಿಯಿಂದಲೇ ಹೊರಗಿಡಲಾಗಿತ್ತು. ಬಿಜೆಪಿ ನಾಯಕರೇ ಪರಶುರಾಮನ ವೀಡಿಯೋದ ಅಸಲಿಯತ್ತನ್ನು ಹೊರಗೆ ಹಾಕುತ್ತಿದ್ದಾರೆ. ವೀಡಿಯೋ ಮಾಡಿದವರನ್ನು ಪತ್ತೆಹಚ್ಚುವ ಕೆಲಸ ಬಿಜೆಪಿ ಮಾಡಲಿ ಎಂದು ಸವಾಲೆಸೆದರು.ಕಾಂಗ್ರೆಸ್ ನಾಯಕ ಉದಯ್ ಕುಮಾರ್ ಶೆಟ್ಟಿ ಉಡುಪಿನ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ಪರಶುರಾಮನ ಶಾಪದಿಂದ ಪುಟಗೋಸಿಯಾಗಲಿದ್ದಾರೆ. ಕಾಂಗ್ರೆಸ್ ನಾಯಕ ಉದಯ ಕುಮಾರ್ ಮನೆಗೆ ನುಗ್ಗುವ ತಾಕತ್ತು ಬಿಜೆಪಿ ನಾಯಕರಿಗಿದೆಯೇ ಎಂದು ಸವಾಲೆಸೆದ ಅವರು, ಪೊಲೀಸ್ ಇನ್ಸ್‌ಪೆಕ್ಟರ್ ಅನ್ನು ನಾಯಿ ಎಂದ ಬಿಜೆಪಿ ಪಕ್ಷದ ಅಧ್ಯಕ್ಷ ನವೀನ್ ನಾಯಕ್‌ನನ್ನು ಬಿಜೆಪಿ ಮುಖಂಡರು ವಜಾಗೊಳಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷ ಅಜಿತ್ ಹೆಗ್ಡೆ, ಭೂನ್ಯಾಯ ಮಂಡಳಿ ಸದಸ್ಯ ತಾರನಾಥ ಕೋಟ್ಯಾನ್, ಹೆಬ್ರಿಯ ಯುವ ಕಾಂಗ್ರೆಸ್ ಅಧ್ಯಕ್ಷ ಹೆಬ್ರಿ ದಿನೆಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.