ಕೇಂದ್ರ ಯೋಜನೆಗಳು ಅರ್ಹರನ್ನು ತಲುಪಲಿ: ಡಾ.ಕೆ.ಸುಧಾಕರ್

KannadaprabhaNewsNetwork |  
Published : Apr 10, 2026, 01:15 AM IST
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ದಿಶಾ ಸಭೆ ಸಂಸದ ಡಾ.ಕೆ.ಸುಧಾಕರ್‌ ಅಧ್ಯಕ್ಷತೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯಗಳು ತಲುಪುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸಂಸದ ಡಾ.ಕೆ ಸುಧಾಕರ್ ಸೂಚನೆ ನೀಡಿದರು

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯಗಳು ತಲುಪುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸಂಸದ ಡಾ.ಕೆ ಸುಧಾಕರ್ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ದಿಶಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆಯುಷ್ಮಾನ್‌ ಭಾರತ, ಕಿಸಾನ್ ಸಮ್ಮಾನ್, ವಿಶ್ವಕರ್ಮ, ಪಿಎಂಇಜಿಪಿ ಯೋಜನೆಯಂತಹ ಸಾಕಷ್ಟು ಜನರ ಪರ ಯೋಜನೆಗಳನ್ನು ತಂದಿದ್ದು, ಅದರ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ಫಸಲ್ ಭೀಮಾ ಯೋಜನೆ ಅರಿವು ಮೂಡಿಸಿ:

ಜಿಲ್ಲೆಯಲ್ಲಿ 1.92 ಲಕ್ಷ ರೈತರಿದ್ದು, ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಕಳೆದ ವರ್ಷ ಕೇವಲ 6053 ರೈತರು ನೋಂದಾಯಿಸಿಕೊಂಡಿದ್ದಾರೆ. ಇಲಾಖೆ ಅಧಿಕಾರಿಗಳು ಜಿಲ್ಲೆಯ ರೈತರಲ್ಲಿ ಯೋಜನೆ ಕುರಿತು ವ್ಯಾಪಕ ಅರಿವು ಮೂಡಿಸಬೇಕು. ವಿಮೆ ಕಟ್ಟಿರುವವರಿಗೆ ಈಗಾಗಲೇ ಸಾಕಷ್ಟು ಅನುಕೂಲವಾಗಿದೆ. ರೈತರಿಗೆ ನಂಬಿಕೆ ಇಲ್ಲದ ಕಾರಣ ವಿಮೆ ಕಟ್ಟಿಲ್ಲ. ಇದರ ಬಗ್ಗೆ ಅರಿವು ಮೂಡಿಸಬೇಕು ಎಂದರು.

ರೈಲ್ವೆ ಇಲಾಖೆ ಕೆಲಸಗಳು ಶೀಘ್ರವಾಗಲಿ:

ದೊಡ್ಡಬಳ್ಳಾಪುರ ರೈಲ್ವೆ ಸ್ಟೇಷನ್ ಬಳಿ ಅಂಡರ್ ಪಾಸ್ ಅವೈಜ್ಞಾನಿಕವಾಗಿದ್ದು, ಇಲ್ಲಿ ಹೆಚ್ಚಿನ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಈ ಭಾಗಕ್ಕೆ ಪ್ರಮುಖವಾಗಿ ಮೇಲ್ಸೇತುವೆ ಅಗತ್ಯ. ಈಗಾಗಲೇ ಶಾಸಕರು, ಅಧಿಕಾರಿಗಳ ಜತೆಗೆ ನಾನು ಸ್ಥಳಕ್ಕೆ ಭೇಟಿ ನೀಡಿದ್ದೆ. ಇಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ರೈಲ್ವೆ ಇಲಾಖೆಯೂ ವೇಗವಾಗಿ ಕೆಲಸಗಳನ್ನು ಮಾಡಬೇಕು. ರೈಲ್ವೆ ಇಲಾಖೆಯ ಸಾಕಷ್ಟು ಕೆಲಸಗಳು ನಿಧಾನವಾಗಿ ಸಾಗುತ್ತಿದ್ದು, ಅದಕ್ಕೆ ವೇಗ ನೀಡಬೇಕು ಎಂದರು.

ಗರ್ಭಕಂಠ ಕ್ಯಾನ್ಸರ್ ಲಸಿಕಾ ಜಾಗೃತಿ ಹೆಚ್ಚಿಸಿ:

ಹೆಣ್ಣು ಮಕ್ಕಳಲ್ಲಿ ಕಂಡುಬರುವ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಎಲ್ಲಾ ಹೆಣ್ಣುಮಕ್ಕಳಿಗೆ ಉಚಿತವಾಗಿ ಎಚ್‌ಪಿವಿ ಲಸಿಕೆ ನೀಡುತ್ತಿದ್ದು, ಜಿಲ್ಲೆಯ ನಾಲ್ಕು ತಾಲೂಕು ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿ 12,000 ಲಸಿಕೆಗಳ ಗುರಿಯಿದ್ದು, ಎಲ್ಲಾ ತಾಲೂಕುಗಳಲ್ಲಿ ಶಾಸಕರು, ಸಂಸದರು, ಸಚಿವರ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ಮಾಡಿ, ಶಾಲಾ ಮಕ್ಕಳಿಗೂ ಈ ಲಸಿಕೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ 22 ಬಾಲ್ಯ ವಿವಾಹ ತಡೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ 22 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. 4 ಪ್ರಕರಣಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿಗಳಲ್ಲಿ ಕಳಪೆ ಮಟ್ಟದ ವಸ್ತುಗಳನ್ನು ಬಳಸಬಾರದು. ಕೊಯಿರಾ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ತಕ್ಷಣವೇ ಬೋರ್‌ವೆಲ್ ಕೊರೆಸಿ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಗ್ರಾಮಗಳಲ್ಲಿ ಕುಡಿಯುವ ನೀರಿನ ಮೂಲಗಳಿಗೆ ಎಚ್.ಎನ್ ವ್ಯಾಲಿ ಮತ್ತು ಕೆ.ಸಿ ವ್ಯಾಲಿ ನೀರು ಸೇರುವುದನ್ನು ಆಗಾಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪರೀಕ್ಷಿಸಬೇಕು. ಜತೆಗೆ ಗ್ರಾಮೀಣಿಗರಿಗೆ ಶುದ್ಧ ಕುಡಿಯುವ

ನೀರು ಕಲ್ಪಿಸಬೇಕು ಎಂದರು.

ಅಧಿಕಾರಿಗಳು ಕೇವಲ ಕಚೇರಿಗೆ ಕೆಲಸ ಕಾರ್ಯಗಳ ಜತೆಗೆ ಗ್ರಾಮ, ನಗರಗಳಿಗೂ ಭೇಟಿ ನೀಡಿ, ಅಲ್ಲಿನ ಜನರ ಕುಂದು ಕೊರತೆಗಳನ್ನು ಆಲಿಸಬೇಕು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಶಿಷ್ಟಾಚಾರವನ್ನು ಪಾಲಿಸಬೇಕು. ಸಮರ್ಪಕವಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಜಿಲ್ಲೆಯ ಎಲ್ಲ ಕಚೇರಿಗಳಲ್ಲಿ ವಿಕಲಚೇತನರಿಗೆ ಸುಗಮ ಭಾರತ ಅಭಿಯಾನದಡಿ ಅವಶ್ಯಕ ಸೌಕರ್ಯಗಳನ್ನು ಕಲ್ಪಿಸಬೇಕು. ವಿಕಲಚೇತನ ಸ್ನೇಹಿ ಇಳಿಜಾರು ದಾರಿ, ಸುಲಭ ಶೌಚಾಲಯ, ಲಿಫ್ಟ್ ಗಳಲ್ಲಿ ಬ್ರೈಲ್ ಸಂಕೇತ ಮತ್ತು ಶಬ್ದ ಸಂಕೇತ ಸೇರಿ ವಿಕಲಚೇತನ ಸ್ನೇಹಿ ಪೂರಕ ವಾತಾವರಣ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧ ತಿಳಿಸಿದರು.

ಸಭೆಯಲ್ಲಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಅಪರ ಜಿಲ್ಲಾಕಾರಿ ಸೈಯಿದಾ ಆಯಿಷಾ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಬಾಶೆಟ್ಟಿಹಳ್ಳಿ ಪಪಂ ಅಧ್ಯಕ್ಷ ಪ್ರೇಮ್ ಕುಮಾರ್, ದಿಶಾ ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

9ಕೆಡಿಬಿಪಿ8-

ಬೆಂಗಳೂರು ಗ್ರಾಮಾಂತರ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ದಿಶಾ ಸಭೆ ಸಂಸದ ಡಾ.ಕೆ.ಸುಧಾಕರ್‌ ಅಧ್ಯಕ್ಷತೆಯಲ್ಲಿ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಥೋತ್ಸವದ ಯಶಸ್ಸಿಗೆ ಸಹಕರಿಸಿದವರಿಗೆ ಮಾಜಿ ಧರ್ಮದರ್ಶಿ ಧನ್ಯವಾದ
ಜನಸ್ಪಂದನಾ ಸಭೆ ಹಿನ್ನೆಲೆ ಪೂರ್ವಸಿದ್ಧತಾ ಸಭೆ ನಡೆಸಿದ ಡೀಸಿ