ಬೇಸಿಗೆ ಶಿಬಿರಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳಲಿ: ಕರೂರು

KannadaprabhaNewsNetwork | Published : May 15, 2025 1:54 AM
Follow Us

ಸಾರಾಂಶ

ಮಕ್ಕಳ ವ್ಯಕ್ತಿತ್ವ ಅರಳಿಸಲು ಬೇಸಿಗೆ ಶಿಬಿರಗಳು ಹೆಚ್ಚು ಸಹಕಾರಿಯಾಗಿದೆ.

ಒಂದು ತಿಂಗಳ ಉಚಿತ ಬೇಸಿಗೆ ಸಂಗೀತ ಶಿಬಿರದ ಸಮಾರೋಪ ಸಮಾರಂಭ

ಕನ್ನಡಪ್ರಭವಾರ್ತೆ ಬಳ್ಳಾರಿ

ಮಕ್ಕಳ ವ್ಯಕ್ತಿತ್ವ ಅರಳಿಸಲು ಬೇಸಿಗೆ ಶಿಬಿರಗಳು ಹೆಚ್ಚು ಸಹಕಾರಿಯಾಗಿದ್ದು, ಬೇಸಿಗೆ ಶಿಬಿರಗಳಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಬೇಕೇ ವಿನಾ, ಒತ್ತಾಯದಿಂದ ಶಿಬಿರಕ್ಕೆ ಕಳಿಸುವಂತಾಗಬಾರದು ಎಂದು ಲೆಕ್ಕ ಪರಿಶೋಧಕ ಹಾಗೂ ಬಳ್ಳಾರಿ ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ಧರಾಮೇಶ್ವರಗೌಡ ಕರೂರು ಅಭಿಪ್ರಾಯಪಟ್ಟರು.

ಇಲ್ಲಿನ ಕಪ್ಪಗಲ್ ರಸ್ತೆಯ ಲಯನ್ಸ್ ಕ್ಲಬ್ ಆಫ್ ಬಳ್ಳಾರಿ ಸಭಾಂಗಣದಲ್ಲಿ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಆಯೋಜಿಸಿದ್ದ ಒಂದು ತಿಂಗಳ ಉಚಿತ ಬೇಸಿಗೆ ಸಂಗೀತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಹಾರ್ಮೋನಿಯಂ ನುಡಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳು ಹೋಂ ವರ್ಕ್, ಟ್ಯೂಷನ್ ಮತ್ತಿತರ ಒತ್ತಡಗಳಿಂದ ಹೊರ ಬಂದು ತಮಗೆ ಆಸಕ್ತಿದಾಯಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಆದರೆ, ಶಿಬಿರಗಳಿಗೆ ಕಳಿಸುವ ಪೋಷಕರು ಮಗುವಿಗೆ ಆಸಕ್ತಿಯಿದೆಯೇ ಇಲ್ಲವೋ ? ಎಂಬುದನ್ನು ತಿಳಿದು, ಶಿಬಿರಕ್ಕೆ ಕಳಿಸಬೇಕು. ಪೋಷಕರು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಒತ್ತಡ ಹಾಕಬಾರದು. ಇದರಿಂದ ಮಗುವಿನ ಬೆಳವಣಿಗೆ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ ಎಂದರಲ್ಲದೆ, ಬೇಸಿಗೆ ಶಿಬಿರಗಳಲ್ಲಿ ದೈಹಿಕ ಕಸರತ್ತಿಗೆ ಆಸ್ಪದ ಇರಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಲು ಶಿಬಿರಗಳು ಸೂಕ್ತ ವೇದಿಕೆಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ನಗರದಲ್ಲಿ ಅನೇಕ ವರ್ಷಗಳಿಂದ ಉಚಿತ ಬೇಸಿಗೆ ಸಂಗೀತ ಶಿಬಿರಗಳನ್ನು ಆಯೋಜಿಸುತ್ತಾ ಬಂದಿರುವ ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಅವರು ಮಕ್ಕಳಿಗೆ ಸಂಗೀತಾಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸ್ಮರಿಸಿದರು.

ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಮುಖ್ಯಸ್ಥ ಹಾಗೂ ಸಂಗೀತ ಶಿಕ್ಷಕ ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಅಧ್ಯಕ್ಷತೆ ವಹಿಸಿದ್ದರು.

ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಅಧ್ಯಕ್ಷರಾದ ಕವಿತಾ ಡಿ.ಕಗ್ಗಲ್, ಮುಖಂಡರಾದ ತಿಮ್ಮಾರೆಡ್ಡಿ ಕೊರ್ಲಗುಂದಿ, ಆಂಜಿನೇಯ, ಶಿವಾಚಾರಿ, ಎಸ್‌.ಬಿ. ಮಲ್ಲಿಕಾರ್ಜುನ್, ಕಾಸೀಮ್ ಅಲಿ ಮತ್ತಿತರರು ಉಪಸ್ಥಿತರಿದ್ದರು.

ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು. ಯೋಗೀಶ್ ಸಂಗನಕಲ್ ತಬಲಾ, ಪುಟ್ಟರಾಜ್ ಡಿ.ಕಗ್ಗಲ್ ಕ್ಯಾಷಿಯೋ, ಹರ್ಷ ಆಚಾರ್ ಪ್ಯಾಡ್ ಹಾಗೂ ಪಂಚಾಕ್ಷರಿ ತಾಳ ಸಾಥ್ ನೀಡಿದರು. ಶಿಬಿರಾರ್ಥಿ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಮಾತಿ ಬಸವರಾಜ್, ವಿಜಯಕುಮಾರ್ ಹಾಗೂ ಎರೇಗೌಡ ಗಣಿಕೆಹಾಳ್ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.