ಕನ್ನಡಪ್ರಭ ವಾರ್ತೆ ಮಂಗಳೂರು‘ಸ್ವಚ್ಛತೆ’ಯನ್ನು ಪೂಜೆ ಎನ್ನುವ ದೃಷ್ಟಿಕೋನಕ್ಕೆ ಬದಲಾಯಿಸಬೇಕು, ಇದೇ ಉದ್ದೇಶವನ್ನಿಟ್ಟುಕೊಂಡು ರಾಮಕೃಷ್ಣ ಮಿಷನ್ 5 ವರ್ಷಗಳ ಕಾಲ ನಿರಂತರವಾಗಿ ಪ್ರತಿ ವಾರ ಸ್ವಚ್ಛತಾ ಅಭಿಯಾನ ಆಯೋಜಿಸಿ ಯಶಸ್ವಿಯಾಗಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಹೇಳಿದರು.ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ ವತಿಯಿಂದ ಎಸ್‌ಡಿಎಂ ಉದ್ಯಮಾಡಳಿತ ಕಾಲೇಜಿನ ಎಂಬಿಎ ವಿಭಾಗದ ಸಹಯೋಗದಲ್ಲಿ ಗುರುವಾರ ಎಸ್‌ಡಿಎಂ ಕಾಲೇಜಿನಲ್ಲಿ ಸ್ವಚ್ಛ ಜನಸಂಪರ್ಕ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ಮುಂದಿನ ತಲೆಮಾರಿಗೆ ಪ್ರಕೃತಿಯನ್ನು ಯಥಾವತ್ ಹಾಗೂ ಇದಕ್ಕಿಂತ ಚೆನ್ನಾಗಿ ಬಿಟ್ಟು ಹೋಗುವುದು ಅಗತ್ಯ. ಈ ನಿಟ್ಟಿನಲ್ಲಿ ಅಭಿಯಾನ ನಮಗೊಂದು ಜವಾಬ್ದಾರಿ ನೀಡಿದೆ ಎಂದರು.
ಎಂಆರ್‌ಪಿಎಲ್- ಒಎನ್‌ಜಿಸಿ ಟೀಮ್ ಸಿಎಸ್‌ಆರ್ ಮುಖ್ಯಸ್ಥ ಸ್ಟೀವನ್ ಪಿಂಟೋ ಮಾತನಾಡಿ, ರಾಮಕೃಷ್ಣ ಮಠದ ಸ್ವಚ್ಛತಾ ಅಭಿಯಾನದ ಆರಂಭದ ದಿನದಿಂದಲೂ ಎಂಆರ್‌ಪಿಎಲ್- ಒಎನ್‌ಜಿಸಿ ಕೈಜೋಡಿಸುತ್ತಿದೆ ಎಂದರು.ಕಾಲೇಜಿನ ನಿರ್ದೇಶಕಿ ಡಾ. ಸೀಮಾ ಎಸ್.ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಸ್ವಚ್ಛ ಭಾರತ್ ಅಭಿಯಾನದ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕಿ ರಮ್ಯಾ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ನಿವ್ಯಾ ಕಾರ್ಯಕ್ರಮ ನಿರೂಪಿಸಿದರು.