ಪ್ರಧಾನಿ ಮೋದಿಜೀಗೆ ಸಿಎಂ ಸಿದ್ದರಾಮಯ್ಯ ಕ್ಷಮೆಯಾಚಿಸಲಿ : ಸಂಸದ ಬಿ. ವೈ.ರಾಘವೇಂದ್ರ

KannadaprabhaNewsNetwork | Updated : Nov 04 2024, 01:11 PM IST

ಸಾರಾಂಶ

ಅವಹೇಳನಕಾರಿ ಪದ ಪ್ರಯೋಗ ಹಿರಿಯ ನಾಯಕರಿಗೆ ಭೂಷಣವಲ್ಲ: ಸಂಸದ ಬಿ.ವೈ.ರಾಘವೇಂದ್ರ

  ಶಿವಮೊಗ್ಗ:  ವಿಶ್ವದಲ್ಲೇ ಅತಿ ಹೆಚ್ಚು ಅಪ್ರೂವಲ್ ರೇಟಿಂಗ್ ಹೊಂದಿರುವ ಅತ್ಯಂತ ಪ್ರಬಲ ನಾಯಕ ಎಂದು ಜಾಗತಿಕ ಸಂಸ್ಥೆಗಳಿಂದ, ಮಾಧ್ಯಮಗಳಿಂದ ಗೌರವಿಸಲ್ಪಟ್ಟಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ, ಅವಹೇಳನಕಾರಿ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯನವರು ಕ್ಷಮೆಯಾಚಿಸಬೇಕು ಸಂಸದ ಬಿ.ವೈ.ರಾಘವೇಂದ್ರ ಆಗ್ರಹಿಸಿದರು.

ಪತ್ರಿಕೆ ಹೇಳಿಕೆ ನೀಡದ ಅವರು, ಪ್ರಧಾನಿ ಮೋದಿ ಅವರು ಇಂದು ವಿಶ್ವ ನಾಯಕರಾಗಿ ಬೆಳೆದು ನಿಂತಿದ್ದಾರೆ. ಇಡೀ ವಿಶ್ವವೇ ಅವರನ್ನು ಗೌರವಿಸುತ್ತಿದೆ. ವಿಶ್ವದ ಅತಿ ವೇಗವಾಗಿ ಬೆಳೆಯುವ ಆರ್ಥಿಕ ಶಕ್ತಿಯಾಗಿ ಭಾರತವನ್ನು ಬೆಳೆಸಿ ನಿಲ್ಲಿಸಿರುವ ಮೋದಿಯವರು ಕರ್ನಾಟಕ ಸರ್ಕಾರದ ಆರ್ಥಿಕ ದುಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಸಹಜವಾಗಿಯೇ ಇದೆ. ಅವರ ಹಿತವಚನವನ್ನು ಗೌರವಿಸುವ ಬದಲು, ಅವರ ಬಗ್ಗೆ ಅವಹೇಳನಕಾರಿ ಪದ ಪ್ರಯೋಗಿಸಿರುವುದು ಸಿದ್ದರಾಮಯ್ಯರಂತಹ ಹಿರಿಯ ನಾಯಕರಿಗೆ ಭೂಷಣವಲ್ಲ. ಪ್ರಧಾನಿ ಮೋದಿಯವರ ಕ್ಷಮೆಯಾಚಿಸಿ ಜನರ ಎದುರು ಗೌರವ ಉಳಿಸಿಕೊಳ್ಳಿ ಎಂದು ಸಿದ್ದರಾಮಯ್ಯನವರನ್ನು ಆಗ್ರಹಿಸಿದ್ದಾರೆ.

ಭ್ರಷ್ಟಾಚಾರ ಹಾಗೂ ಓಲೈಕೆ ರಾಜಕಾರಣದಲ್ಲಿ ಮುಳುಗಿಹೋಗಿದ್ದ ದೇಶವನ್ನು ಇಂದು ಜಗತ್ತಿನ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿರುವುದು ಸಣ್ಣ ಸಾಧನೆಯಲ್ಲ.

ಆಯುಷ್ಮಾನ್ ಭಾರತ, ಜನೌಷಧಿ, ಆವಾಸ್ ಯೋಜನೆ, ಉಜ್ವಲಾ ಯೋಜನೆ, ಮುಂತಾದ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನರ ಬದುಕಿನ ಮೇಲೆ ನೇರವಾದ ಧನಾತ್ಮಕ ಪರಿಣಾಮ ಬೀರಿರುವ ನಾಯಕರೆಂದರೆ ಪ್ರಧಾನಿ ಮೋದಿಯವರು.

ಕಾಂಗ್ರೆಸ್ಸಿನ ಯಾವುದೇ ಗ್ಯಾರಂಟಿಗಳು ಮಾಡದ ಜನಪರ ಕೆಲಸವನ್ನು ಪ್ರಧಾನಿ ಮೋದಿಯವರ ಕಾರ್ಯಕ್ರಮಗಳು ಮಾಡಿವೆ ಎಂದರು.

ಡಿಜಿಟಲ್ ಎಕಾನಮಿಯ ಮೂಲಕ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿವೆ. ಇವೆಲ್ಲ ಕ್ರಾಂತಿಕಾರಿ ಬೆಳವಣಿಗಗಳ ನಡುವೆಯೂ ದೇಶದ ಆರ್ಥಿಕತೆಯನ್ನು ಸದೃಢವಾಗಿ ಉಳಿಸಿಕೊಂಡಿರುವುದು ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಗ್ಗಳಿಕೆ ಎಂದು ವಿವರಿಸಿದರು.

ಸಿದ್ದರಾಮಯ್ಯನವರ ಸರ್ಕಾರ ತಾನು ನೀಡಿದ ಗ್ಯಾರಂಟಿ ಭರವಸೆಗಳನ್ನು ಸರಿಯಾಗಿ ನಿರ್ವಹಿಸಲಾಗದೆ ರಾಜ್ಯವನ್ನು ದೀವಾಳಿಯ ಅಂಚಿಗೆ ತಂದು ನಿಲ್ಲಿಸಿದೆ. ಅದರ ಬಿಸಿ ತಟ್ಟುತ್ತಿರುವುದರಿಂದಲೇ ಅವರದೇ ಪಕ್ಷದ ನಾಯಕರು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಮಾತಾಡುತ್ತಿದ್ದಾರೆ, ಅಭಿವೃದ್ಧಿ ಕೆಲಸಗಳಿಗೆ ಹಣವೇ ಇಲ್ಲ ಎಂದು ಶಾಸಕರು ರೇಗುತ್ತಿದ್ದಾರೆ, ಸಂಬಳವೇ ಬಂದಿಲ್ಲ ಎಂದು ಅನೇಕ ನೌಕರರು ಕೊರಗುತ್ತಿದ್ದಾರೆ ಎಂದು ಟೀಕಿಸಿದರು.

Share this article