ದೊಡ್ಡಬಳ್ಳಾಪುರ: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಹಿರಿಮೆಯನ್ನು ವಿದ್ಯಾರ್ಥಿಗಳು ಅರಿಯುವಂತೆ ಮಾಡಬೇಕು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸಬೇಕು ಎಂದು ಮುಖ್ಯ ಶಿಕ್ಷಕಿ ಶಾಂತಮ್ಮ ನಾಗರಾಜ್ ತಿಳಿಸಿದರು.
ತಾಲೂಕಿನ ಹಣಬೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲಾ ಕನ್ನಡಿಗರ ಮೇಲಿದೆ. ಕನ್ನಡ ಅಭಿಮಾನ ನವೆಂಬರ್ ತಿಂಗಳಿಗಷ್ಟೆ ಸೀಮಿತ ಆಗಬಾರದು. ವರ್ಷದ ಎಲ್ಲಾ ದಿನಗಳು ಕನ್ನಡ ನಿತ್ಯೋತ್ಸವ ಆಗಬೇಕಾಗಿದೆ ಎಂದರು.ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಸಿ.ಅಣ್ಣಯ್ಯ ಮಾತನಾಡಿ, ಕರ್ನಾಟಕ ರಾಜ್ಯ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಹೆಸರಾಗಿದೆ. ಕನ್ನಡ ಭಾಷೆ, ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ- ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ದೊರೆಯಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಮಂಡ್ಯದಲ್ಲಿ ಡಿ. 20, 21 ಮತ್ತು 22 ರಂದು ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗುವ ಪ್ರತಿನಿಧಿಗಳಿಗೆ ಆನ್‌ಲೈನ್‌ನಲ್ಲಿ ನೋಂದಣಿಯಾಗುವ ಅವಕಾಶವಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿರುವವರು ಪರಿಷತ್ತಿನ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದರು.ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಪಿ.ಡಿ.ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಸಫೀರ್, ಕಲಾವಿದ ದರ್ಗಾ ಜೋಗಿಹಳ್ಳಿ ಮಲ್ಲೇಶ್, ರಾಮಾಂಜನೇಯ, ನವ್ಯಶ್ರೀ ಆ್ಯಂಡ್ ಸ್ಪೋರ್ಟ್ಸ್ ಅಕಾಡೆಮಿಯ ಭವ್ಯ, ಪುಷ್ಪಲತಾ, ಹಣಬೆ ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್, ವೆಂಕಟೇಶ್, ಕ್ರೀಡಾ ತರಬೇತುದಾರರಾದ ಶ್ರೀಕಾಂತ್, ಹೇಮಂತ್, ವಿದ್ಯಾರ್ಥಿನಿಲಯದ ಸಿಬ್ಬಂದಿ ಭಾಗವಹಿಸಿದ್ದರು.
ಅಭಿನಂದನೆ:ಇದೇ ವೇಳೆ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ ಅಗಿರುವ ನವ್ಯಶ್ರೀ ಆ್ಯಂಡ್ ಸ್ಪೋರ್ಟ್ಸ್ ಅಕಾಡೆಮಿಯ ಬಿ.ಎಂ.ಕೀರ್ತನ, ಎನ್.ಪುನೀತ್ ಕೊಂಗಾಡಿ, ಬಿ.ಎಸ್.ಕೀರ್ತನ, ಪ್ರೌಢಶಾಲೆಯ ವಿಭಾಗದಲ್ಲಿ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ಆಕಾಶ್ ಗಣಪತಿ ಕೋಳಿ, ಪರುಶರಾಮ್ ಗುರಿಕಾರ, ವಿನೋದ್ ಚಲವಾದಿ, ಜಾನು ರವಿ, ಎಸ್.ಪ್ರಜ್ವಲ್, ಶರಣಪ್ಪ ಮಾಲಿಕಾರ್, ಮಾರುತಿ ಮುದುಕಪ್ಪ ಚಲವಾದಿ, ಹಾಸ್ಟೆಲ್ ಸಿಬ್ಬಂದಿ ಸಿ.ಅಣ್ಣಯ್ಯ, ಮಹಾದೇವಸ್ವಾಮಿ, ಶಶಿಕಾಂತ್, ಶಾರದಮ್ಮ, ಯಮುನಾವ್ವ ಖನ್ನಾಳ ಅವರನ್ನು ಸನ್ಮಾನಿಸಲಾಯಿತು.
ಫೋಟೊ- 1ಕೆಡಿಬಿಪಿ2- ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಕ್ರಮ ನಡೆಯಿತು.