ರಟ್ಟೀಹಳ್ಳಿ: ಎಲ್ಲ ನ್ಯಾಯಾಲಯಗಳು ಇಂಗ್ಲಿಷ್ ಭಾಷೆ ಬಿಟ್ಟು ಕನ್ನಡದಲ್ಲಿ ಕೋರ್ಟ್ ಕಲಾಪಗಳು ನಡೆಸಿದರೆ ಕಕ್ಷಿದಾರಿಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರ ನಂಬಿಕೆ ಮತ್ತು ಗೌರವ ಭಾವನೆ ಉಂಟಾಗುತ್ತದೆ ಎಂಬುದು ನನ್ನ ನಂಬಿಕೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ನೂತನ ಸಂಚಾರಿ ದಿವಾಣಿ ಮತ್ತು ಜೆಎಂಎಫ್‌ಸಿ ಕೋರ್ಟ್ ಉದ್ಘಾಟನೆ ಹಾಗೂ ನ್ಯಾಯವಾದಿಗಳ ಸಂಘದ ನಾಮಫಲಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನೂರಾರು ವರ್ಷಗಳ ಕಾಲ ನಮ್ಮನ್ನು ಗುಲಾಮರಂತೆ ನೋಡಿದ ಬ್ರಿಟೀಷರು ಬಿಟ್ಟು ಹೋದ ಇಂಗ್ಲಿಷ್ ಭಾಷೆ ನಮಗೆ ಅನವಶ್ಯಕ. ಪ್ರಬಲ, ಸುಂದರ, ಹಾಗೂ ಸಂಸ್ಕೃತಿ ಪ್ರತಿನಿಧಿಸುವ ನಮ್ಮ ಮಾತೃಭಾಷೆಯನ್ನು ನಾವೇ ಕಡೆಗಣಿಸುವುದು ಸರಿಯಲ್ಲ. ಆದ್ದರಿಂದ ಇತ್ತೀಚೆಗೆ ನಾನು ಕನ್ನಡದಲ್ಲೇ ತೀರ್ಪು ಪ್ರಕಟಿಸಿದ್ದು ನನಗೆ ಧನ್ಯತಾಭಾವವಿದೆ ಎಂದರು.
ನ್ಯಾಯಾಲಯಗಳಿಂದ ಮನೆ ಬಾಗಿಲಿಗೆ ಮತ್ತು ತ್ವರಿತಗತಿಯಲ್ಲಿ ನ್ಯಾಯ ಸಿಗುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕುಸಿಯುತ್ತಿದ್ದು, ಪರ್ಯಾಯ ವ್ಯವಸ್ಥೆಗೆ ಸಾರ್ವಜನಿಕರು ಕಟ್ಟೆ ಪಂಚಾಯಿತಿ ಹಾಗೂ ಪರ್ಯಾಯ ನ್ಯಾಯಾಂಗಕ್ಕೆ ಮೋರೆ ಹೋಗುತ್ತಿರುವುದು ಮಾರಕ. ಕಾರಣ ನ್ಯಾಯಾಲಯಗಳು ಜನರ ಸಮಸ್ಯೆಗಳನ್ನು ಬೇಗ ಇತ್ಯರ್ಥ ಮಾಡುವ ಮೂಲಕ ನಂಬಿಕೆ ಉಳಿಸಿಕೊಳ್ಳಬೇಕು ಎಂದರು.ಸಮಾಜದಲ್ಲಿ ಅನೇಕ ವರ್ಷಗಳಿಂದ ತುಳಿತಕ್ಕೊಳಪಟ್ಟವರು, ಬಡವರು, ಅಬಲೆಯರು ಹಾಗೂ ರೈತ ಸಮುದಾಯಕ್ಕೆ ನ್ಯಾಯಾಲಯದ ಮೇಲೆ ನಂಬಿಕೆ ಬರುವಂತೆ ವಕೀಲರು ಮತ್ತು ನ್ಯಾಯಾಧೀಶರು ನಡೆದುಕೊಳ್ಳುವ ಮೂಲಕ ನಮ್ಮ ಜವಾಬ್ದಾರಿ ಮೆರೆಯುವುದು ತುಂಬ ಅವಶ್ಯವಿದೆ ಎಂದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಹಿರೇಕೆರೂರು ಕೋರ್ಟ್‌ನಲ್ಲಿ ರಟ್ಟೀಹಳ್ಳಿ ತಾಲೂಕಿಗೆ ಸಂಬಂಧಿಸಿದ ಶೇ. 60ರಷ್ಟು ಪ್ರಕರಣಗಳಿರುವುದರಿಂದ ಈ ಭಾಗದ ವಕೀಲರು ರಾಜಕೀಯ ನಾಯಕರು, ಸಂಘ-ಸಂಸ್ಥೆಗಳ ಪ್ರತ್ಯೇಕ ಕೋರ್ಟ್ ಬೇಕೆಂಬ ಹೋರಾಟದ ಫಲವಾಗಿ ಇಂದು ನೂತನ ಸಂಚಾರಿ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆಗೊಂಡಿರುವುದರಿಂದ ಹಳ್ಳೂರ, ಚಟ್ನಳ್ಳಿ, ಕಮಲಾಪುರ, ಪುರದಕೇರಿ, ಸೇರಿದಂತೆ ತಾಲೂಕಿನ ಅಂಚಿನ ಗ್ರಾಮಗಳಿಗೆ ಸಾಕಷ್ಟು ಅನಕೂಲವಾಗುತ್ತದೆ. ಅಲ್ಲದೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.ಸಂವಿಧಾನದಲ್ಲಿ ಪ್ರಮುಖವಾಗಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾರಂಗ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದ್ದು, ಒಂದೊಂದು ಅಂಗಗಳು ದೇಶದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ನ್ಯಾಯಾಂಗ ವ್ಯವಸ್ಥೆ ಸಾರ್ವಜನಿಕರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೆಚ್ಚಿನ ಚಿಂತನೆ ಹಾಗೂ ಪರಿಹಾರಗಳನ್ನು ನೀಡುತ್ತಿದೆ ಎಂದರು.
ನೂತನ ಸಂಚಾರಿ ಪೀಠ ವಾರದ ಪೂರ್ತಿ ದಿನಗಳು ನಡೆಯಲಿ ಎಂದು ಸಂಬಂಧ ಪಟ್ಟ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದು, ಅದಕ್ಕೆ ಪೂರಕ ಉತ್ತರವನ್ನು ನೀಡಿದ್ದು ನಮ್ಮೆಲ್ಲರ ಸೌಭಾಗ್ಯ. ಪಟ್ಟಣದ ಕೆಇಬಿ ಮುಂಭಾಗದಲ್ಲಿನ ಸರಕಾರಿ ಜಾಗದಲ್ಲಿ ಕೋರ್ಟ್ ಹಾಗೂ ನ್ಯಾಯಾಧೀಶರ ವಸತಿಗಾಗಿ 3 ಎಕರೆ 20 ಗುಂಟೆ ಜಾಗ ಮಂಜೂರಾಗಿದೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದು, ಮುಂಬರುವ ಬಜೆಟ್‌ನಲ್ಲಿ ಹೈಕೋರ್ಟ್ ಸಹಕಾರದೊಂದಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೂ ಮನವಿ ಸಲ್ಲಿಸಿದ್ದು ಆದಷ್ಟು ಬೇಗ ಹಣ ಮಂಜೂರಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಹೇಮಂತ ಚಂದನಗೌಡರ, ಮಾಜಿ ಶಾಸಕ ಹಾಗೂ ನೂತನ ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬನ್ನಿಕೋಡ ಮಾತನಾಡಿದರು.
ಹಾವೇರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ, ವಕೀಲರ ಸಂಘದ ಉಪಾಧ್ಯಕ್ಷ ಎಸ್.ವಿ. ತೊಗರ್ಸಿ, ಕಾರ್ಯದರ್ಶಿ ಎಂ.ಬಿ. ಜೋಕನಾಳ, ಲೋಕೋಪಯೋಗಿ ಎಂಜಿನಿಯರ್ ಎನ್.ಎನ್. ಪಾಟೀಲ್, ಸುನೀಲ ಹೊಸಮನಿ, ಪಿ.ಡಿ. ಬಸನಗೌಡ್ರ, ಬಿ.ಸಿ. ಪಾಟೀಲ, ಫಕ್ಕಿರೇಶ ತುಮ್ಮಿನಕಟ್ಟಿ, ಚಂದನಾ ಕಬ್ಬಿಣಕಂತಿ ಮಠ, ಬಿ.ಬಿ ಗುಬ್ಬಿ, ವಿಜಯ ಗೋಳಪ್ಪನವರ, ಸಂತೋಷ ಪಾಟೀಲ್, ಎನ್.ಆರ್. ಕೋಣನತಲಿ ಮತ್ತು ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಕೀಲರು, ಕಂದಾಯ ಇಲಾಖೆಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಹಾಗೂ ಮುಂತಾದವರು ಇದ್ದರು.