ದಲಿತ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜನಾನುರಾಗಿ ನಾಯಕ ಎನಿಸಿರುವ ಯೋಗೇಶ್ವರ್ ಅವರಿಗೆ ಎನ್‌ಡಿಎ ಟಿಕೆಟ್ ನೀಡಬೇಕೆಂಬುದು ಎಲ್ಲರ ಅಭಿಲಾಷೆಯಾಗಿದ್ದು, ಇದನ್ನು ಪಕ್ಷದ ವರಿಷ್ಠರು ಪುರಸ್ಕರಿಸಬೇಕು ಎಂದು ಮನವಿ ಮಾಡಿದರು.
ಚನ್ನಪಟ್ಟಣ : ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಬೇಕೆಂದು ಜಿಪಂ ಮಾಜಿ ಸದಸ್ಯ ಸದಾನಂದ ಅಗ್ರಹಿಸಿದರು.
ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಬೇಕು ಎಂಬುದು ಬಿಜೆಪಿ ನಗರ ಹಾಗೂ ಗ್ರಾಮೀಣ ಎಸ್‌ಸಿ-ಎಸ್‌ಟಿ ಮೋರ್ಚಾ ಒತ್ತಾಸೆಯಾಗಿದೆ ಎಂದು ತಿಳಿಸಿದರು.
ಸಿಪಿವೈ ಸೂಕ್ತ ಅಭ್ಯರ್ಥಿ: ಯೋಗೇಶ್ವರ್ ತಾಲೂಕಿನ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ದಲಿತ ಸಮುದಾಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜನಾನುರಾಗಿ ನಾಯಕ ಎನಿಸಿರುವ ಯೋಗೇಶ್ವರ್ ಅವರಿಗೆ ಎನ್‌ಡಿಎ ಟಿಕೆಟ್ ನೀಡಬೇಕೆಂಬುದು ಎಲ್ಲರ ಅಭಿಲಾಷೆಯಾಗಿದ್ದು, ಇದನ್ನು ಪಕ್ಷದ ವರಿಷ್ಠರು ಪುರಸ್ಕರಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಲು ಯೋಗೇಶ್ವರ್ ಅವರೇ ಸೂಕ್ತ ಅಭ್ಯರ್ಥಿ. ಈ ವಿಚಾರ ಸ್ವತಃ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರದ ಎನ್‌ಡಿಎ ವರಿಷ್ಠರಿಗೆ ಗೊತ್ತಿದೆ. ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿ ಚಿನ್ಹೆಯಡಿ ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸುತ್ತಾರೆ ಎಂಬ ವಿಶ್ವಾಸವಿದೆ.
ಎನ್‌ಡಿಎ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ. ಒಮ್ಮತದ ಅಭ್ಯರ್ಥಿಯಾಗಿ ಯೋಗೇಶ್ವರ್ ಅವರನ್ನು ಕಣಕ್ಕಿಳಿಸುವ ಕುರಿತು ವಿಶ್ವಾಸವಿದೆ. ಈ ವಿಚಾರದಲ್ಲಿ ಯೋಗೇಶ್ವರ್ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಮುಖಂಡ ಚಕ್ಕಲೂರು ಚೌಡಯ್ಯ ಮಾತನಾಡಿ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದ ವೇಳೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಯೋಗೇಶ್ವರ್ ಗೆಲುವು ಸಾಧಿಸಿದ್ದರು. ಎರಡು ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಸಹ ಪಕ್ಷವನ್ನು ಬಲಿಷ್ಟವಾಗಿ ಸಂಘಟಿಸಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಕ್ಷೇತ್ರದಲ್ಲಿ ಯೋಗೇಶ್ವರ್ ಪರ ಅಲೆ ಇದೆ. ಈ ವಿಚಾರ ಕೇಂದ್ರದ ವರಿಷ್ಠರಿಗೂ ಗೊತ್ತಿದೆ. ಚುನಾವಣೆಗೆ ತಯಾರಿ ನಡೆಸುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಆದಷ್ಟು ಬೇಗ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮೇಲ್ಮನೆ ವಿಪಕ್ಷ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಿದ ಪಕ್ಷದ ವರಿಷ್ಠರಿಗೆ ಬಿಜೆಪಿ ತಾಲೂಕು ಎಸ್‌ಸಿ-ಎಸ್‌ಟಿ ಘಟಕ ಅಭಿನಂದನೆ ಸಲ್ಲಿಸಿತು.
ಬಿಜೆಪಿ ಎಸ್‌ಸಿ ಘಟಕದ ಗ್ರಾಮಾಂತರ ಮೋರ್ಚಾ ಅಧ್ಯಕ್ಷ ಸಿದ್ದರಾಮಯ್ಯ, ನಗರ ಮಂಡಲದ ಅಧ್ಯಕ್ಷ ವೆಂಕಟೇಶ್ ಮೂರ್ತಿ, ನಗರಸಭೆ ಮಾಜಿ ಸದಸ್ಯ ಪುರುಷೋತ್ತಮ್, ಮುಖಂಡರಾದ ಕೃಷ್ಣ, ಬಸವರಾಜು ಶಿವಲಿಂಗಯ್ಯ, ಶಿವಶಂಕರ್, ಪಾರ್ಥ, ಸಂತೋಷ್, ಕಿರಣ್‌ಕುಮಾರ ಇತರರು ಇದ್ದರು.