- ಮಾಳಗೊಂಡನಹಳ್ಳಿಯಲ್ಲಿ ಶ್ರೀ ವೆಂಕಟೇಶ್ವರ, ಶ್ರೀ ಕೋಟೆ ಆಂಜನೇಯ ಪುನಃ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಉತ್ತರ ಕರ್ನಾಟಕದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ಗಳಲ್ಲಿ ರೈತರು ₹2ರಿಂದ ₹3 ಸಾವಿರ ಕೋಟಿ ಠೇವಣಿ ಇಟ್ಟಿದ್ದು, ಶೇ.8.5ರಿಂದ 9ರಷ್ಟು ಬಡ್ಡಿ ನೀಡುತ್ತಿದೆ. ಅದೇ ರೀತಿ ನಮ್ಮ ಜಿಲ್ಲೆಯಲ್ಲೂ ಡಿಸಿಸಿ ಬ್ಯಾಂಕ್‌ನಲ್ಲಿ ಬಡ್ಡಿ ನೀಡುವ ಜೊತೆಗೆ ರೈತ ಸ್ನೇಹಿಯಾಗಿ ಸಾಲ ಮಂಜೂರಾತಿ ನೀಡುವ ಕೆಲಸ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.ತಾಲೂಕಿನ ಮಾಳಗೊಂಡನಹಳ್ಳಿ (ಮಾಗಾನಹಳ್ಳಿ) ಗ್ರಾಮದ ಪುರಾತನ, ಐತಿಹಾಸಿಕ ಶ್ರೀ ವೆಂಕಟೇಶ್ವರ ಸ್ವಾಮಿ, ಶ್ರೀ ಕೋಟೆ ಆಂಜನೇಯ ಸ್ವಾಮಿ ಹಾಗೂ ಶ್ರೀ ಬೀರಲಿಂಗೇಶ್ವರ ದೇವರ ಪುನಃ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ಡಿಸಿಸಿ ಬ್ಯಾಂಕ್‌ಗಳಂತೆ ನಮ್ಮ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಹ ಪ್ರಗತಿ ಹೊಂದಬೇಕು ಎಂದರು.
ಠೇವಣಿ ಮೇಲೆ ₹5 ಲಕ್ಷವರೆಗೆ ರೈತರಿಗೆ ಸಾಲ ನೀಡಲು ಅವಕಾಶವಿದೆ. ₹15 ಲಕ್ಷವರೆಗೆ ಶೇ.3 ಬಡ್ಡಿ ದರದಲ್ಲಿ ಸಾಲ ನೀಡಬಹುದು. ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುತ್ತಿದೆ. ದಾವಣಗೆರೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆರಂಭಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಬ್ಯಾಂಕ್ ಆಡಳಿತ ಮಂಡಳಿ ಸಹ ರೈತರಿಗೆ ಪ್ರಥಮಾದ್ಯತೆ ಮೇಲೆ ಸ್ಪಂದಿಸಲಿ ಎಂದು ಸೂಚಿಸಿದರು.ಮಾಗಾನಹಳ್ಳಿ ಗ್ರಾಮದ ಶ್ರೀ ವೆಂಕಟೇಶ್ವರ ಸ್ವಾಮಿ, ಶ್ರೀ ಹನುಮಪ್ಪ ಮೂರ್ತಿಗಳು ಶತ ಶತಮಾನಗಳಿಂದಲೂ ಇವೆ. ಇದೀಗ ಮತ್ತೆ ದೇವಸ್ಥಾನ ನಿರ್ಮಿಸಿ, ಪುನಾ ಉಭಯ ದೇವರ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ಕಳಸಾರೋಹಣ ಸಹ ನೆರವೇರಿದೆ. ಗ್ರಾಮಸ್ಥರು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಎಲ್ಲ ಜಾತಿ ಜನರೂ ಸೇರಿ ಧಾರ್ಮಿಕ ಕಾರ್ಯಕ್ರಮ ನಡೆಸಿರುವುದು ಮಾದರಿಯಾಗಿದೆ ಎಂದರು.
ಗ್ರಾಮ ಮುಖಂಡ ಎ.ಎನ್. ಮಾಧ್ವ ಪ್ರಸಾದ ಮಾತನಾಡಿ, ಗ್ರಾಮದ ಶ್ರೀ ಕೋಟೆ ಆಂಜನೇಯ ಸ್ವಾಮಿ ವಿಗ್ರಹ ಅತ್ಯಂತ ಪುರಾತನವಾಗಿದೆ. ಸಾದ್ವಿ ಗಂಗಾಭಾರತಿ ಹರಪನಹಳ್ಳಿ ಭೀಮವ್ವನ ಗಂಡನ ಮನೆ ಈಗಿನ ಮಾಗಾನಹಳ್ಳಿ. ರತಿ ಕಲ್ಯಾಣ ಕೃತಿ ರಚಿಸಿದ್ದ ಭೀಮವ್ವನಿಂದಾಗಿಯೇ ಇದಕ್ಕೆ ಮಗಳ ಗಂಡನ ಹಳ್ಳಿ ಎಂಬ ಹೆಸರಿತ್ತು. ಕಾಲಾಂತರದಲ್ಲಿ ಮಾಳಗೊಂಡನಹಳ್ಳಿಯಾಗಿ, ಈಗ ಮಾಗಾನಹಳ್ಳಿ ಅಂತಾ ಹೆಸರಿನಿಂದ ಕರೆಯಲ್ಪಡುತ್ತಿರುವ ಐತಿಹಾಸಿಕ ಹಿನ್ನೆಲೆಯ ಊರು ಇದು ಎಂದು ವಿವರಿಸಿದರು.ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ, ಮುಖಂಡ ಮಾಗಾನಹಳ್ಳಿ ಬಿ.ಕೆ.ಪರಶುರಾಮ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಕೆ.ಚಮನ್ ಸಾಬ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕಪ್ಪ, ನಿರ್ದೇಶಕರಾದ ಮುದೇಗೌಡರ ಗಿರೀಶ, ಡಿ.ಕುಮಾರ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಸಂಪನ್ನ ಮುತಾಲಿಕ್, ಬೂದಾಳ್ ಬಾಬು, ಕಾಂಗ್ರೆಸ್ ಮುಖಂಡರಾದ ಅಯೂಬ್ ಪೈಲ್ವಾನ್, ವೈ.ರಂಗಪ್ಪ, ಪಾಲಿಕೆ ಸದಸ್ಯರಾದ ಎ.ನಾಗರಾಜ, ಪಾಮೇನಹಳ್ಳಿ ನಾಗರಾಜ, ರೇಣುಕಮ್ಮ ಕರಿಬಸಪ್ಪ, ರಾಘವೇಂದ್ರ ನಾಯ್ಕ ಗ್ರಾಮದ ಮುಖಂಡರು, ದೇವಸ್ಥಾನ ಸಮಿತಿ, ಗ್ರಾಮಸ್ಥರು ಇದ್ದರು.
- - - -19ಕೆಡಿವಿಜಿ6: ಸಮಾರಂಭದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಶ್ರೀ ವೆಂಕಟೇಶ್ವರ ಮೂರ್ತಿ ನೀಡಿ, ಸನ್ಮಾನಿಸಲಾಯಿತು.