ಇಲ್ಲದಿದ್ದರೆ ಸಿಎಂ ಅವರೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು: ಒತ್ತಾಯ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಭೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್ ಈ ಮೂವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳೇ ಸಚಿವ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಏನೇನು ನಡೆಯಬಾರದೋ ಅದೆಲ್ಲಾ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆದಿದ್ದು, ಮೂರು ತಿಂಗಳೊಳಗೆ ವರದಿ ಕೊಡಲು ಕೋರ್ಟ್ ಆದೇಶ ಹೊರಡಿಸಿದೆ. ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗೋದು ಫಿಕ್ಸ್ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ಇವರ ಜೊತೆಗೆ ಸಚಿವ ಭೈರತಿ ಸುರೇಶ್ ಆಪ್ತರು ಎನ್ನಲಾದ ಮನೇಶ್, ರಾಘವೇಂದ್ರ ಮುಂತಾದವರು ನಕಲಿ ವೋಟರ್ ಐಡಿ, ಪಾನ್ ಕಾರ್ಡ್, ಆಧಾರ್ ಕಾರ್ಡ್‌ಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದು ಪ್ರಕರಣದಲ್ಲಿ ಶಿವಕುಮಾರ್ ಎಂಬ ಯುವಕ ನನ್ನ ಸಾವಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ಅವರೇ ಕಾರಣ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂರೂ ಪ್ರಕರಣಗಳು ತುಂಬಾ ಗಂಭೀರವಾದುವು. ಆದ್ದರಿಂದ ಈ ಮೂವರು ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಡಿ.ಕೆ.ಶಿವಕುಮಾರ್ ತಾನೊಬ್ಬ ಸತ್ಯಹರಿಶ್ಚಂದ್ರ ಎಂಬಂತೆ ಮಾತನಾಡುತ್ತಿದ್ದಾರೆ. ಅವರು ಮತ್ತೊಮ್ಮೆ ಜೈಲಿಗೆ ಹೋಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಹೀಗೆಂದು ಹೇಳಿದ್ದಕ್ಕೆ ಈಶ್ವರಪ್ಪ ಜಡ್ಜಾ ಎಂದು ಕೇಳಿದ್ದರು. ಆದರೆ, ಅವರದೇ ಪಕ್ಷದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಡಿ.ಕೆ.ಶಿವಕುಮಾರ್ ಆರೋಪಮುಕ್ತರಾಗಿ ಬರುತ್ತಾರೆ ಎಂದು ಹೇಳಿದ್ದಾರೆ. ಹಾಗಾದರೆ ಅವರು ಜಡ್ಜೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಏನೆಲ್ಲಾ ಅವಾಂತರಗಳು ನಡೆಯುತ್ತವೆ ಎಂಬುದಕ್ಕೆ ನಕಲಿ ವೋಟ್ ಐಡಿ ಸೃಷ್ಟಿಯೇ ಕಾರಣವಾಗಿದೆ. ಅದರಲ್ಲೂ ಈ ಸೃಷ್ಟಿಕರ್ತರು ಸಚಿವರ ಆಪ್ತರು ಎಂದು ತಿಳಿದುಬಂದಿದೆ. ನಕಲಿ ವೋಟರ್ ಐಡಿ ಮಾಡುವುದು ಸಾಮಾನ್ಯ ವಿಷಯವೇ ಅಲ್ಲ. ಇದು ಪ್ರಜಪ್ರಭುತ್ವದ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುತ್ತದೆ. ಎಷ್ಟು ವರ್ಷದಿಂದ ಮಾಡುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ಉದ್ದೇಶ ಇದಕ್ಕಿದೆಯೇ ಎಂಬುದು ತನಿಖೆಯಾಗಬೇಕು. ಈ ಘಟನೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಹಾಗೆಯೇ, ಯುವಕನೊಬ್ಬ ನನ್ನ ಸಾವಿಗೆ ಸಚಿವ ಶರಣ ಪ್ರಕಾಶ್ ಪಾಟೀಲ್ ಕಾರಣ ಎಂದು ಬರೆದಿರುವುದಲ್ಲದೆ ವೀಡಿಯೋ ಕೂಡ ಮಾಡಿದ್ದಾರೆ. ಈ ಹಿಂದೆ ಇಂತಹುದೇ ಘಟನೆಗೆ ಸಂಬಧಿಸಿದಂತೆ ನನ್ನ ಬಗ್ಗೆ ಆರೋಪ ಬಂದಾಗ ನಾನು ತಕ್ಷಣವೇ ರಾಜೀನಾಮೆ ಕೊಟ್ಟಿದ್ದೆ. ಹಾಗೆಯೇ ಶರಣಪ್ರಕಾಶ್ ಪಾಟೀಲ್ ಕೂಡ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಎಲ್ಲ ಭಾಗ್ಯಗಳು ವಿಫಲವಾಗಿವೆ. ಶಿವಮೊಗ್ಗ ದಸರಾಕ್ಕೆ ₹20 ಲಕ್ಷ ಕೊಡುತ್ತಾರೆ ಎಂದರೆ ಸರ್ಕಾರದ ಸ್ಥಿತಿ ಎಲ್ಲಿಗೆ ಬಂದಿದೆ ಎಂದು ತಿಳಿಯಬಹುದು. ಸರ್ಕಾರ ಹಣ ನಮಗೆ ಬೇಡ. ಶಿವಮೊಗ್ಗದ ಜನರು ನಾವೇ ಸೇರಿ ಹಬ್ಬ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಶಿವರಾಜ್, ಸುಧೀಂದ್ರ ಇದ್ದರು. - - - (-ಫೋಟೋ: ಕೆ.ಎಸ್.ಈಶ್ವರಪ್ಪ)
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.