ಕಂಪ್ಲಿ: ಆರೋಗ್ಯವೇ ಭಾಗ್ಯ ಎಂಬ ತತ್ವದಡಿಯಲ್ಲಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಚಿಕಿತ್ಸೆ ಒದಗಿಸುವುದು ಶಿಬಿರದ ಉದ್ದೇಶವಾಗಿದೆ ಎಂದು ಮುಸ್ಲಿಂ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ತಿಳಿಸಿದರು.
ಪಟ್ಟಣದ ಭಾರತಿ ಶಿಶು ವಿದ್ಯಾಲಯದ (ಬಿಎಸ್‌ಪಿ) ಆವರಣದಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಟ್ರಸ್ಟ್ ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣೆ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದರು.ಸಪ್ತಗಿರಿ ಆಸ್ಪತ್ರೆ ವೈದ್ಯ ವೃಂದವು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಬಡವರ, ಸಾಮಾನ್ಯರ ಪಾಲಿಗೆ ಇಂತಹ ವೈದ್ಯಕೀಯ ಶಿಬಿರವು ಉಪಯುಕ್ತವಾಗಿದೆ. ಕೋವಿಡ್ ನಂತರ ಆರೋಗ್ಯ ಸೇವೆಯಲ್ಲಿ ಬದಲಾವಣೆಗಳನ್ನು ಕಂಡಿದ್ದೇವೆ. ಆರೋಗ್ಯದಲ್ಲಿ ಮುಂದೆ ಬರಬಹುದಾದ ಸವಾಲುಗಳಿಗೆ ಇಂದೇ ಸೂಕ್ತ ಪರಿಹಾರ ಕಂಡುಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಿದೆ ಎಂದರು.
ವೀರಶೈವ ಸಮಾಜದ ಮುಖಂಡರಾದ ಕೆ.ಎಂ. ಹೇಮಯ್ಯಸ್ವಾಮಿ ಮಾತನಾಡಿ, ಬಡತನ ರೇಖೆಗಿಂತ ಕೆಳಗಿರುವ ಸಾಮಾನ್ಯ ಜನತೆಗೆ ಸೂಕ್ತ ತಪಾಸಣೆ ನಡೆಸಿ ಯಶಸ್ವಿನಿ ಹಾಗೂ ಬಿಪಿಎಲ್ ಕಾರ್ಡ್, ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೀಡುವಲ್ಲಿ ಸಪ್ತಗಿರಿ ಆಸ್ಪತ್ರೆಯ ವೈದ್ಯ ವೃಂದವು ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ ಎಂದರು.ಇದೇ ವೇಳೆ 300ಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಹಿಮೋಗ್ಲೋಬಿನ್, ರಕ್ತದ ಗುಂಪು, ಸಕ್ಕರೆ ಪ್ರಮಾಣ, ಥೈರಾಯ್ಡ್ ಪರೀಕ್ಷೆ, ಹೆಚ್ಚಿಎಂಸಿ (ಸಕ್ಕರೆ ಕಾಯಿಲೆ ಪರೀಕ್ಷೆ), ಅಲ್ಲಾಸೋನೋಗ್ರಫಿ, ಇಸಿಜಿ ಹೃದಯದ ಪರೀಕ್ಷೆ, ಎಲುಬು ಸಾಂದ್ರತೆ, ಸ್ತ್ರೀಯರಲ್ಲಿ ಬರುವ ಕ್ಯಾನ್ಸರ್ ಕಾಯಿಲೆಯ ಪರೀಕ್ಷೆ ಪತ್ತೆಗೆ ಪ್ಯಾಪ್ ಸ್ಮಿಯರ್ ಪರೀಕ್ಷೆ ಮಾಡಿಸಿಕೊಂಡರು. ಪ್ರಸೂತಿ ಹಾಗೂ ಸ್ತ್ರೀರೋಗ, ಚಿಕ್ಕ ಮಕ್ಕಳ, ಡಯಾಬಿಟಿಸ್ ಮತ್ತು ಹೃದಯರೋಗ, ಎಲುಬು ಮತ್ತು ಕೀಲು, ಶಸ್ತ್ರಚಿಕಿತ್ಸಾ, ನರರೋಗ ಮೂತ್ರಪಿಂಡ ಹಾಗೂ ನೇತ್ರ ಚಿಕಿತ್ಸಾ ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿ ಸೇವೆ ನೀಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರು ಸೈಯದ್ ಷಾ ಮೈನುದ್ದಿನ್ ಖಾದ್ರಿ, ಶಾಸಕ ಜೆ.ಎನ್. ಗಣೇಶ್, ಡಾ ಎ.ಪಿ.ಜೆ. ಅಬ್ದುಲ್ ಕಲಾಂ ಟ್ರಸ್ಟ್ ನ ಅಧ್ಯಕ್ಷ ಅಕ್ಕಿ ಜಿಲಾನ್, ಉಪಾಧ್ಯಕ್ಷ ಬಿ. ರಸೂಲ್, ಸಂಸ್ಥಾಪಕ ಸಂಚಾಲಕ ಬಡಿಗೇರ್ ಜಿಲಾನ್ ಸಾಬ್, ಹೃದಯ ತಜ್ಞರಾದ ಡಾ.ರಾಮ್ ದಾಸ್, ಡಾ.ವಲ್ಲಿ ರತ್ನಂ, ಕ್ಯಾನ್ಸರ್ ತಜ್ಞರಾದ ಡಾ.ವಿಶ್ವಾಸ್, ನರ ಮತ್ತು ಮೂಳೆ ತಜ್ಞರಾದ ಡಾ.ಮನೋಜ್ ಪ್ರಮುಖರಾದ ಕೆ.ಎಂ.ಹೇಮಯ್ಯ ಸ್ವಾಮಿ, ಜವೇರಿ ಲಾಲ್ ಬಾಗ್ರೆಚ, ಹೊನ್ನೂರ್ ಸಾಬ್, ಬೂದುಗುಂಪಿ ಹುಸೇನ್ ಸಾಬ್, ಶ್ಯಾಮಸುನಂದರ್ ರಾವ್, ಕೆ.ವಿರೂಪಾಕ್ಷಪ್ಪ, ಎಸ್.ಜಿ. ಚಿತ್ರಗಾರ್, ಮಹಮ್ಮದ್ ಹನೀಫ್, ಜಯಪ್ರಕಾಶ್ ಚೌದ್ರಿ, ಡಾ.ಅಬ್ದುಲ್ ಗೌಸ್, ಮಡಿವಾಳರ ಹುಲುಗಪ್ಪ, ಮೌಲ ಹುಸೇನ್, ಅಕ್ಕಮಹಾದೇವಿ, ಸುಧಾ, ಶಾಂತಿ, ಗಾಯತ್ರಿ, ರೋಹಿಣಿ, ಶಿವಕುಮಾರ್, ವಾಸಿಮ್ ಫಯಾಜ್ ಸೇರಿ ಅನೇಕರಿದ್ದರು.