ಧಾರವಾಡ:
ದೇಶದ ಅಭಿವೃದ್ಧಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಶಿಕ್ಷಣ, ಆರೋಗ್ಯ, ಉದ್ಯೋಗ ಖಾಸಗೀಕರಣವಾದರೆ, ದೇಶದ ಅಭಿವೃದ್ಧಿ ಹೇಗೆ ಸಾದ್ಯ ಎಂದು ಹಿರಿಯ ಸಾಹಿತಿ ರಂಜಾನ್ ದರ್ಗಾ ಸರ್ಕಾರವನ್ನು ಪ್ರಶ್ನಿಸಿದರು.ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಆಯೋಜಿಸಿದ್ದ ಶೈಕ್ಷಣಿಕ ಜಾಥಾ ನಂತರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಉಳಿವಿಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಎಸ್ಎಫ್ಐ ಗುರುತಿಸಿದ ಸಾವಿರಾರು ಸರ್ಕಾರಿ ಶಾಲೆಗಳು ಬಂದ್ ಆಗುತ್ತಿವೆ. ಇದು ಬಡವರ ಮಕ್ಕಳ ಶಿಕ್ಷಣಕ್ಕೆ ನೀಡುವ ಕೊಡಲಿ ಪೆಟ್ಟಾಗಿದೆ. 2010ರಲ್ಲಿ 2,45,337 ಇವತ್ತು ಬರೀ 1,45,326 ಶಿಕ್ಷಕರಿದ್ದಾರೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಇನ್ನು, ಖಾಸಗಿ ಶಾಲೆಗಳಲ್ಲಿ ಡೋನೆಷನ್ ಹಾವಳಿ ಹೆಚ್ಚಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳ ಪರಿಸ್ಥಿತಿ ಹದಗೆಟ್ಟಿದೆ. ಸಾಮಾನ್ಯ ಕುಟುಂಬದ ವಿದ್ಯಾರ್ಥಿಗಳಿಗೆ ಶಿಕ್ಷಣ ದುಬಾರಿಯಾಗುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಲ್ಲಬೇಕು. ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯು ಜಾತಿ, ಧರ್ಮ ವ್ಯಸನದಿಂದ ದೂರ ಬರಬೇಕು. ವಿಶ್ವಮಾನವ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಲಿಂಗ ಸಮಾನತೆಗಾಗಿ, ಜಾತಿ, ಧರ್ಮ ಸಮಾನತೆಗಾಗಿ ವರ್ಗಗಳಲ್ಲಿ ಸಮಾನತೆಗಾಗಿ ಹೋರಾಡಲು ಮುಂದಾಗೋಣ ಎಂದು ರಂಜಾನ್ ದರ್ಗಾ ಹೇಳಿದರು.ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ರವಿಕುಮಾರ್ ಮಾಳಿಗೇರ ಮಾತನಾಡಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಸಿಗುತ್ತಿಲ್ಲ. ಆ ವಾತಾವರಣಕ್ಕಾಗಿ ಹೋರಾಟ ಮಾಡಬೇಕು. ವಿದ್ಯಾರ್ಥಿಗಳಿಗೆ ರಾಜಕೀಯದಿಂದ ದೂರ ಇರಿ ಎನ್ನುತ್ತಾರೆ. ಆದರೆ, ನಿಜವಾಗಿಯೂ ವಿದ್ಯಾರ್ಥಿಗಳೇ ರಾಜಕೀಯಕ್ಕೆ ಬರಬೇಕು. ಆಗ ವಿದ್ಯಾರ್ಥಿ ಸಮುದಾಯಕ್ಕೆ ನ್ಯಾಯ ಸಿಗಲು ಸಾಧ್ಯವೆಂದರು.
ಹೋರಾಟಗಾರ ಬಿ.ವಿ. ಕೋರಿಮಠ ಮಾತನಾಡಿ, ಶೈಕ್ಷಣಿಕ ಜಾಥಾದ ಮೂಲಕ ಇಡೀ ರಾಜ್ಯಾದ್ಯಂತ ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಹೋರಾಟದ ಕೂಗನ್ನು ಎಸ್ಎಫ್ಐ ಕೊಂಡೊಯ್ಯುತ್ತಿದೆ ಎಂದರು.ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್, ಬಿ.ಐ. ಈಳೆಗೇರ, ಜಿಲ್ಲಾಧ್ಯಕ್ಷ ನಾಗರಾಜ ಚಲವಾದಿ, ಮಹೇಶ್ ಪತ್ತಾರ ಮತ್ತಿತರರು ಇದ್ದರು.