ಪರಿಸರ ಶಿಕ್ಷಣ ಪ್ರಾಯೋಗಿಕವಾಗಿರಲಿ: ಪ್ರೊ. ಅರಸನಾಳ

KannadaprabhaNewsNetwork |  
Published : Oct 16, 2026, 02:15 AM IST
15ಜಿಡಿಜಿ13 | Kannada Prabha

ಸಾರಾಂಶ

ಶಿಕ್ಷಣದ ಜೊತೆಗೆ ಪರಿಸರ ಶಿಕ್ಷಣ ಅತ್ಯಂತ ಅಗತ್ಯವಾಗಿದ್ದು, ಇದು ಕೇವಲ ಅಂಕಗಳಿಕೆಗೆ ಸೀಮಿತವಾಗದೆ ವಿದ್ಯಾರ್ಥಿಗಳ ಮನಮುಟ್ಟುವಂತಿರಬೇಕು.

ಕನ್ನಡಪ್ರಭ ವಾರ್ತೆ ಮುಂಡರಗಿ

ಶಿಕ್ಷಣದ ಜೊತೆಗೆ ಪರಿಸರ ಶಿಕ್ಷಣ ಅತ್ಯಂತ ಅಗತ್ಯವಾಗಿದ್ದು, ಇದು ಕೇವಲ ಅಂಕಗಳಿಕೆಗೆ ಸೀಮಿತವಾಗದೆ ವಿದ್ಯಾರ್ಥಿಗಳ ಮನಮುಟ್ಟುವಂತಿರಬೇಕು. ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಮಕ್ಕಳಿಗೆ ಪ್ರಾಯೋಗಿಕ ಪರಿಸರ ಶಿಕ್ಷಣ ನೀಡಬೇಕಾಗಿದೆ ಎಂದು ಪರಿಸರ ತಜ್ಞ ಪ್ರೊ. ಸಿ.ಎಸ್. ಅರಸನಾಳ ಹೇಳಿದರು.

ಭಾರತ ಜ್ಞಾನ-ವಿಜ್ಞಾನ ಸಮಿತಿ (ಬಿಜಿವಿಎಸ್) ಕರ್ನಾಟಕ ಮತ್ತು ಗದಗ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ, ಕಪ್ಪತ್ತಗುಡ್ಡ ವ್ಯಾಪ್ತಿಯ ಕಡಕೋಳದ ಬಸವಯೋಗಾಶ್ರಮ ನಿಸರ್ಗ ಚಿಕಿತ್ಸಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ರಾಜ್ಯಮಟ್ಟದ ಪರಿಸರದ ಮಡಿಲಿನಲ್ಲಿ ಜೀವಯಾನ ಪರಿಸರ ಶಿಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಭೂಮಿಯ ತಾಪಮಾನ ಏರಿಕೆಯಾಗುತ್ತಿದ್ದು, ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆ ಶಿಕ್ಷಕರು ಮಕ್ಕಳಿಗೆ ಪರಿಣಾಮಕಾರಿಯಾಗಿ ಪರಿಸರ ಪಾಠಗಳನ್ನು ಬೋಧಿಸಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಶರಣೆ ಓಂಕಾರೇಶ್ವರಿ ಮಾತಾಜಿ ಮಾತನಾಡಿ, ಮನುಷ್ಯನಿಗೆ ಆರೋಗ್ಯ, ನೈಸರ್ಗಿಕ ಆಹಾರ ಮತ್ತು ಸಂಯಮ ಮುಖ್ಯ. ದುಶ್ಚಟಗಳಿಂದ ದೂರವಿದ್ದು ಯೋಗ ಮತ್ತು ಜ್ಞಾನದೊಂದಿಗೆ ಪರಿಸರ ಸಂರಕ್ಷಣೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗದಗ ಬಿಜಿವಿಎಸ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪಠ್ಯದಲ್ಲಿರುವ ಪರಿಸರ ಪಾಠಗಳು ಅಂಕಗಳಿಗಷ್ಟೇ ಸೀಮಿತವಾಗದೆ ಮಕ್ಕಳ ಜೀವನದಲ್ಲಿ ಅಳವಡಿಕೆಯಾಗಬೇಕು. ಶಾಲಾ ಇಕೋ ಕ್ಲಬ್‌ಗಳನ್ನು ಮತ್ತಷ್ಟು ಸಕ್ರಿಯಗೊಳಿಸಲು ಈ ಕಾರ್ಯಾಗಾರ ನೆರವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಹಾವೇರಿ ಜಿಲ್ಲಾ ಬಿಜಿವಿಎಸ್ ಅಧ್ಯಕ್ಷ ಜಗದೀಶ ಮಹಾಜನ್, ರಾಜ್ಯ ಕಾರ್ಯದರ್ಶಿ ಶುಭಂಕರ್, ರೇಣುಕಾ ಗುಡಿಮನಿ ಹಾಗೂ ಸೌಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಡಿ.ಎಸ್. ಬಾಪುರಿ ಸ್ವಾಗತಿಸಿದರು. ಕಾರ್ಯಾಗಾರದ ಸಂಯೋಜಕ ರವಿ ದೇವರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ ಮೆಡ್ಲೇರಿ ನಿರೂಪಿಸಿದರು.

ನಂತರ ನಡೆದ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಅರವಿಂದ ಕುಡ್ಲ, ರವಿ ದೇವರಡ್ಡಿ ಅವರಿಂದ ನೈಸರ್ಗಿಕ ಸಂಪನ್ಮೂಲಗಳ ಅಧ್ಯಯನ ಮತ್ತು ನಕ್ಷೆ ತಯಾರಿಕೆ, ಸಿದ್ದಯ್ಯ ಮಠಪತಿ ಅವರಿಂದ ಪ್ರಕೃತಿಗೆ ಪೂರಕ ಚಟುವಟಿಕೆಗಳು, ಪ್ರೇಮಾನಂದ ಕಲ್ಮಾಡಿ ಅವರಿಂದ ಆದಿವಾಸಿಗಳ ಬದುಕು ಮತ್ತು ಜೀವವೈವಿಧ್ಯತೆ ಅರಿವು ಹಾಗೂ ಪೂರ್ಣೇಶ ಅವರಿಂದ ಆಕಾಶ ವೀಕ್ಷಣೆ ಮತ್ತು ಚಿಟ್ಟೆಗಳ ವೀಕ್ಷಣೆ ಕಾರ್ಯಕ್ರಮ ಜರುಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಗಮಾಸ್ತಿ ಕ್ಷೇತ್ರದ ಮಹಿಳಾ ದಸರಾ ಜಿಲ್ಲೆಗೆ ಮಾದರಿ
ಅಗ್ನಿವೀರರಾಗಲು ಇಟಗಿಯಲ್ಲಿ ಉಚಿತ ತರಬೇತಿ ಶಿಬಿರ