ಹಳಿಯಾಳ ತಾಲೂಕಿನಾದ್ಯಂತ ವಿಶ್ವ ಪರಿಸರ ದಿನಾಚರಣೆ
ಪರಿಸರವು ನಮ್ಮಿಂದ ಏನನ್ನೂ ಅಪೇಕ್ಷೆ ಮಾಡದೇ ಉಚಿತವಾಗಿ ಶುದ್ಧ ವಾತಾವರಣ, ಮಳೆ, ಗಾಳಿಯನ್ನು, ಬೆಳಕು ನೆರಳನ್ನು ನೀಡುತ್ತಿದೆ. ಮಾನವನ ಬದುಕಿಗೆ ಪರಿಸರವು ನೀಡುವ ಉಚಿತ ಸೌಲಭ್ಯಗಳ ಎದುರು, ನಾವು ಪರಿಸರ ಸಂರಕ್ಷಣೆಗೆ ಮಾಡುವ ಕಾಳಜಿಯು ಏನೋ ಅಲ್ಲ ಎಂದು ಹಳಿಯಾಳ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶೆ ಸುಜಾತಾ ಪಾಟೀಲ ಹೇಳಿದರು.
ತಾಲೂಕಿನ ಮಾಗವಾಡ ಗ್ರಾಮದ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ತಾಲೂಕು ಮಟ್ಟದ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಪರಿಸರ ಸಂರಕ್ಷಣೆ ಒಂದೇ ದಿನಕ್ಕೆ ಸೀಮಿತವಾಗಿರಬಾರದು. ಬದಲಾಗಿ ನಮ್ಮ ಬದುಕಿನ ಅವಿಭಾಜ್ಯ ಕರ್ತವ್ಯವಾಗಬೇಕು. ನಮ್ಮ ಕೈಲಾದಷ್ಟು ನಮ್ಮ ಅಕ್ಕಪಕ್ಕದ ಪರಿಸರವನ್ನು ಸ್ವಚ್ಛ ಹಾಗೂ ಹಸಿರುವಾಗಿಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಅಳಿಲು ಸೇವೆ ಸಲ್ಲಿಸೋಣ ಎಂದರು.
ಹಳಿಯಾಳ ಅರಣ್ಯ ವಿಭಾಗ, ತಾಲೂಕು ಕಾನೂನು ಸೇವಾ ಸಮಿತಿ, ಪೋಲಿಸ್ ಇಲಾಖೆ, ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಳಿಯಾಳ ವಲಯ ಅರಣ್ಯಾಧಿಕಾರಿ ಬಸವರಾಜ ಎಂ. ಆಯೋಜಿಸಿದ್ದರು.
ಮಾಗವಾಡ ಗ್ರಾಮದಿಂದ ಹಿಡಿದು ಹಳಿಯಾಳ ಎಪಿಎಂಸಿವರೆಗೆ ರಸ್ತೆಯ ಎರಡೂ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಸಾಮಗ್ರಿಗಳು, ಘನತ್ಯಾಜ್ಯವನ್ನು ದೇಶಪಾಂಡೆ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ತೆರವು ಮಾಡಿದರು. ಪರಿಸರ ಸಂರಕ್ಷಣೆ ಮತ್ತು ಹಮಾಮಾನ ಬದಲಾವಣೆಯ ನಿಯಂತ್ರಣಕ್ಕೆ ಅನುಸರಿಸಬೇಕಾದ ಅಗತ್ಯ ಕ್ರಮಗಳ ಕುರಿತು ಜಾಗ್ರತೆ ಮೂಡಿಸಿದರು.