ಮೂಕ ಪ್ರಾಣಿಗಳಿಗೂ ಆರೋಗ್ಯ ಸೇವೆ ಸಿಗಲಿ: ಪ್ರಭು ಚವ್ಹಾಣ್‌

KannadaprabhaNewsNetwork | Published : Aug 1, 2024 12:17 AM

ಸಾರಾಂಶ

ಸಚಿವನಿದ್ದಾಗ ಔರಾದ್‌ನಲ್ಲಿ ಹೈಟೆಕ್ ಪಶು ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ನೀಡಿದ್ದೆ. ದೀಗ ಕೆಲಸ ಪೂರ್ಣಗೊಂಡು ಸುಂದರವಾದ ಪಶು ಆಸ್ಪತ್ರೆ ಸಿದ್ಧವಾಗಿದೆ ಎಂದು ಸುಸಜ್ಜಿತ ಪಶು ಚಿಕಿತ್ಸಾ ಕೇಂದ್ರ ಉದ್ಘಾಟಿಸಿ ಮಾಜಿ ಸಚಿವ ಹಾಗೂ ಶಾಸಕ ಪ್ರಭು ಚವ್ಹಾಣ್‌ ನುಡಿದರು.

ಕನ್ನಡಪ್ರಭ ವಾರ್ತೆ ಔರಾದ್‌

ಮೂಕ ಪ್ರಾಣಿಗಳಿಗೂ ಆರೋಗ್ಯ ಸೇವೆ ಸಿಗಬೇಕು. ಅವುಗಳ ರಕ್ಷಣೆಯಾಗಬೇಕು ಎಂಬ ಸದಾಶಯದೊಂದಿಗೆ ಹಿಂದೆ ಪಶು ಸಂಗೋಪನೆ ಸಚಿವನಾಗಿದ್ದಾಗ ಔರಾದ್‌ (ಬಿ) ಪಟ್ಟಣದಲ್ಲಿ ಹೈಟೆಕ್ ಪಶು ಆಸ್ಪತ್ರೆ ನಿರ್ಮಿಸಲು ಅನುದಾನ ಒದಗಿಸಿ, ಕೆಲಸಕ್ಕೆ ಚಾಲನೆ ನೀಡಿದ್ದೆ. ಇದೀಗ ಕೆಲಸ ಪೂರ್ಣಗೊಂಡು ಸುಂದರವಾದ ಪಶು ಆಸ್ಪತ್ರೆ ಸಿದ್ಧವಾಗಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕ ಪ್ರಭು ಚವ್ಹಾಣ್‌ ನುಡಿದರು.

ಔರಾದ್‌ (ಬಿ) ಪಟ್ಟಣದಲ್ಲಿ 3.5 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಸುಸಜ್ಜಿತ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರ ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಹೈಟೆಕ್ ಪಶು ಚಿಕಿತ್ಸಾ ಕೇಂದ್ರದಲ್ಲಿ ಪ್ರಾಣಿಗಳಿಗಾಗಿ ಉತ್ತಮ ಲ್ಯಾಬ್, ಆಪರೇಷನ್ ಥೇಟರ್, ಎಕ್ಸ್‌ರೇ ಸೇರಿದಂತೆ ಜಾನುವಾರುಗಳ ಚಿಕಿತ್ಸೆಗೆ ಬೇಕಿರುವ ಎಲ್ಲ ಸೌಕರ್ಯಗಳು ಇರಲಿವೆ. ಈ ಪಶು ಆಸ್ಪತ್ರೆಯಿಂದ ತಾಲೂಕಿನ ರೈತರಿಗೆ ಸಾಕಷ್ಟು ನೆರವಾಗಲಿದೆ ಎಂದು ತಿಳಿಸಿದರು.

ಗೋಮಾತೆಯ ಬಗ್ಗೆ ತಾಯಿಯ ರೀತಿಯಲ್ಲಿ ಪೂಜ್ಯ ಭಾವನೆಯಿದೆ. ಎಲ್ಲ ಕಾರ್ಯಕ್ರಮಗಳಿಗೂ ಮುನ್ನ ಗೋಮಾತೆಯನ್ನು ಪೂಜಿಸುತ್ತಾ ಬಂದಿದ್ದು, ಅದರಂತೆ ಗೋಮಾತೆಗೆ ಪೂಜೆ ನೆರವೇರಿಸಿ ಪಶು ಚಿಕಿತ್ಸಾ ಕೇಂದ್ರ ಉದ್ಘಾಟಿಸಲಾಗಿದೆ ಎಂದರು.

ಕ್ಷೇತ್ರದ ಜನತೆಯ ಆಶೀರ್ವಾದದಿಂದಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಅವರ ನಿರೀಕ್ಷೆಯಂತೆ ಔರಾದ್‌ (ಬಿ) ಮತಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದೇನೆ. ಹೆಡಗಾಪೂರ ಗ್ರಾಮದಲ್ಲಿ ಜಾನುವಾರು ತಳಿ ಸಂವರ್ಧನಾ ಮತ್ತು ರೈತರ ತರಬೇತಿ ಕೇಂದ್ರವೂ ಕೂಡ ಶೀಘ್ರ ನಿರ್ಮಾಣವಾಗಲಿದೆ ಎಂದರು.

ಸಿಪೆಟ್ ಕೇಂದ್ರದ ಕೆಲಸವನ್ನೂ ಕೂಡ ಆರಂಭಿಸಲಾಗುವುದು. ಅದರಂತೆ ಕ್ಷೇತ್ರದಲ್ಲಿ ಡಾ.ಅಂಬೇಡ್ಕರ್, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ರಸ್ತೆ, ಕುಡಿಯುವ ನೀರು ಪೂರೈಕೆ ಒಳಗೊಂಡು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಜನತೆಯ ಬೇಡಿಕೆಗೆ ಅನುಗುಣ ಎಲ್ಲ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಜಾನುವಾರುಗಳ ಸಂರಕ್ಷಣೆಯ ದೃಷ್ಡಿಯಿಂದ ಹಿಂದೆ ಆರಂಭಿಸಿದ ಪಶು ಸಂಜೀವಿನಿ ಆಂಬುಲೆನ್ಸ್‌, ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ, ಗೋಶಾಲೆಗಳ ನಿರ್ಮಾಣ ಸೇರಿದಂತೆ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು, ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಹಿಂದಿನ ಎಲ್ಲಾ ಯೋಜನೆಗಳನ್ನು ಆರಂಭಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಔರಾದ್‌ (ಬಿ) ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಫಾಹಿಮ್ ಖುರೇಶಿ, ಮುಖಂಡರಾದ ಸುರೇಶ ಭೋಸ್ಲೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವಾಜಿರಾವ ಕಾಳೆ, ರಂಗರಾವ ಜಾಧವ, ಶಿವಾನಂದ ವಡ್ಡೆ, ಬಸವರಾಜ ಪಾಟೀಲ, ಶಿವರಾಜ ಅಲ್ಮಾಜೆ, ಕೇರಬಾ ಪವಾರ, ಖಂಡೋಬಾ ಕಂಗಟೆ, ಸಂತೋಷ ಪೋಕಲವಾರ, ಸುಜಿತ ರಾಠೋಡ ಸೇರಿದಂತೆ ಪಶು ಸಂಗೋಪನೆ ಇಲಾಖೆಯ ವೈದ್ಯಾಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share this article