ಗದಗ: ಕಣ್ಣನ್ನು ಸಂರಕ್ಷಿಸಿಕೊಳ್ಳುವುದು ಅತಿ ಅವಶ್ಯವಾಗಿದೆ. ಈ ಕುರಿತು ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು ಎಂದು ಹಿರಿಯ ಹೋಮಿಯೋಪಥಿ ವೈದ್ಯ ಡಾ. ಸುಭಾಸ ವಿ. ಶಿವನಗೌಡರ ಹೇಳಿದರು.
ಅವರು ನಗರದ ಸರ್ಕಾರಿ ಉರ್ದು ಶಾಲೆ ನಂ. 2ರಲ್ಲಿ ಸುದರ್ಶನ ಚಕ್ರ ಯುವ ಮಂಡಳ, ಹುಬ್ಬಳ್ಳಿಯ ಜಯಪ್ರಿಯಾ ಆಸ್ಪತ್ರೆ ಮೆಡಿಕಲ್ ಫೌಂಡೇಶನ್ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ನಾವಿಂದು ನೋಡಬೇಕಾದದ್ದನ್ನು ಬಿಟ್ಟು ನೋಡಬಾರದ್ದನ್ನು ನೋಡುತ್ತ ಕಾಲಹರಣ ಮಾಡಿ ಕಣ್ಣಿನ ತೀಕ್ಷ್ಣತೆಯನ್ನು ಕಡಿಮೆ ಮಾಡಿಕೊಂಡು ಮಂದ-ಅಂಧರಾಗುತ್ತಿರುವುದು ವಿಷಾದನೀಯ ಎಂದರು.ಎಬಿವಿಪಿ ಪ್ರಮುಖ ಡಾ. ಪುನೀತ ಬೆನಕನವಾರಿ ಮಾತನಾಡಿ, ಶಿಬಿರದ ಪ್ರಯೋಜನವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸುದರ್ಶನ ಚಕ್ರ ಯುವ ಮಂಡಳ ಅಧ್ಯಕ್ಷ ರಾಘವೇಂದ್ರ ಹಬೀಬ ಮಾತನಾಡಿ, ಶಿಬಿರದಲ್ಲಿ ಒಟ್ಟು 105 ಜನರ ಕಣ್ಣು ತಪಾಸಣೆ ಮಾಡಿದ್ದು, ಅವರಲ್ಲಿ 55 ಜನರು ಉಚಿತ ಶಸ್ತ್ರಚಿಕಿತ್ಸೆಗೆ ಅರ್ಹತೆ ಪಡೆದಿದ್ದಾರೆ. ಶೀಘ್ರದಲ್ಲಿಯೇ ಗೃಹಿಣಿಯರಿಗೆ, ನಿರುದ್ಯೋಗಿ ಯುವತಿಯರಿಗಾಗಿ ಉಚಿತ ಹೊಲಿಗೆ ತರಬೇತಿ ಶಿಬಿರ ಏರ್ಪಡಿಸಿ, ಅವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯ ಕ್ರಮ ಜರುಗಿಸಿ, ಅವರು ಆರ್ಥಿಕವಾಗಿ ಸಬಲರಾಗುವಂತೆ ಮಾಡುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.ನಗರಸಭೆ ಸದಸ್ಯೆ ಹುಲಿಗೆಮ್ಮ ಹಬೀಬ ಉಪಸ್ಥಿತರಿದ್ದರು. ಶಂಕರ ದಹಿಂಡೆ ಪ್ರಾರ್ಥಿಸಿದರು. ನಾಗರಾಜ ಕುರ್ತಕೋಟಿ ಸ್ವಾಗತಿಸಿದರು. ಜಯಪ್ರಿಯಾ ಆಸ್ಪತ್ರೆ ಮೆಡಿಕಲ್ ಫೌಂಡೇಶನ್‌ದ ನೇತ್ರ ತಜ್ಞೆ ಡಾ. ಪಲ್ಲವಿ ನರಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ಸೋಳಂಕಿ ಪರಿಚಯಿಸಿದರು. ಡಾ. ಗಣೇಶ ಸುಲ್ತಾನಪುರ ಕಾರ್ಯಕ್ರಮ ನಿರೂಪಿಸಿದರು. ಗಣೇಶ ಲದವಾ ವಂದಿಸಿದರು.
ಯುವ ಮಂಡಳದ ವಿಜಯ ಬನಹಟ್ಟಿ, ನಾಗರಾಜ ಓದು, ವಸಂತ ಹಬೀಬ, ಶೇಖರ ಗುಜ್ಜರ, ನಾಗರಾಜ ಪವಾರ, ಹನುಮಂತ ಪವಾರ ಹಾಗೂ ಜಯಪ್ರಿಯಾ ಆಸ್ಪತ್ರೆ ಮೆಡಿಕಲ್ ಫೌಂಡೇಶನ್‌ದ ಸಿಬ್ಬಂದಿ ಬಸವರಾಜ ಹೂಗಾರ, ವಿನಾಯಕ ಚವಡಿ, ಶಿವರಾಜ, ರೂಪಾ, ಸ್ವಪ್ನಾ, ವೆಂಕಟೇಶ ಮುಂತಾದವರಿದ್ದರು.