ಮುಂಡಗೋಡ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನ
ಗಡಿ ರಾಜ್ಯ ಮಹಾರಾಷ್ಟ್ರ ಮತ್ತು ಕೇರಳದ ಕಿರಿಕಿರಿ ತಪ್ಪಿಲ್ಲ. ಇದಕ್ಕೆ ಕನ್ನಡಿಗರಾದ ನಾವು ಗಟ್ಟಿಯಾಗಿ ಉತ್ತರ ನೀಡುತ್ತ ಬಂದಿದ್ದೇವೆ. ಆದರೆ ನಾಡಿನ ಅನ್ನ ನೀರು ಉಂಡು ಪರಕೀಯರಿಗೆ ಸಹಾಯ ಮಾಡುತ್ತಿರುವುದು ವಿಷಾದನೀಯ ಸಂಗತಿ ಎಂದು ಮುಂಡಗೋಡ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಪಿ.ಪಿ. ಛಬ್ಬಿ ಹೇಳಿದರು.ಗುರುವಾರ ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮುಂಡಗೋಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ೮ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಭಾಷೆ, ನೆಲ, ಜಲದ ಬಗ್ಗೆ ಪ್ರತಿಯೊಬ್ಬರಿಗೂ ಗೌರವವಿರಬೇಕು. ವ್ಯವಹಾರ ಜ್ಞಾನಕ್ಕಾಗಿ ಬೇರೆ ಭಾಷೆ ಕಲಿಯಬೇಕು. ಜೊತೆಗೆ ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆ ಕಲಿಯುವುದು ಕಡ್ಡಾಯ ಮಾಡಬೇಕು. ೮ ಜನ ಜ್ಞಾನಪೀಠ ಪ್ರಶಸ್ಥಿ ಪಡೆದ ಹೆಮ್ಮೆ ನಮ್ಮ ಕರ್ನಾಟಕಕ್ಕಿದೆ. ಆದರೂ ಕೂಡ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಎನ್ನಡ, ಎಕ್ಕಡ ಭಾಷೆಯ ನಡುವೆ ಕನ್ನಡ ಮಾತನಾಡುವರನ್ನು ಹುಡುಕುವುದು ಕಷ್ಟವಾಗಿದೆ. ಇಂಗ್ಲಿಷ್ ವ್ಯಾಮೋಹದಿಂದಾಗಿ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪುತ್ತಿವೆ. ಇಂಗ್ಲಿಷ್ ಕಲಿತರೆ ಮಾತ್ರ ಭವಿಷ್ಯ ಎಂಬ ಭ್ರಮೆಯಲ್ಲಿ ಪಾಲಕರಿದ್ದಾರೆ. ನಮ್ಮ ಪಾಲಕರು ಅವ್ವ, ಅಪ್ಪ ಎಂಬ ಶಬ್ದ ಕೇಳಲು ಅಸಹ್ಯಪಡುತ್ತಿರುವುದು ಶೋಚನಿಯ ಸಂಗತಿ. ಬಾಲ್ಯದಿಂದಲೇ ನಮ್ಮ ಸಂಸ್ಕೃತಿ ಹಾಗೂ ಭಾಷೆಯ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಿಸಿ ಸನ್ಮಾರ್ಗವನ್ನು ತೋರಿಸಿಕೊಟ್ಟು ಉತ್ತಮ ಪ್ರಜೆಯನ್ನಾಗಿ ಮಾಡಬೇಕು ಎಂದರು.ಕನ್ನಡಕ್ಕೆ ಆದ್ಯತೆ ಬರಬೇಕಾದರೆ ವಿಧಾನಸೌಧದಲ್ಲಿ ಮೊದಲು ಕನ್ನಡ ಕಡ್ಡಾಯಗೊಳಿಸಬೇಕು. ಕನ್ನಡ ಕಥೆ, ಕವನ, ಕಾದಂಬರಿ, ಸಾಂಸ್ಕೃತಿಕ ಜನಪದ, ಯಕ್ಷಗಾನ, ದೊಡ್ಡಾಟದಂತಹ ಕಲೆಗಳಿಗೆ ಪ್ರೋತ್ಸಾಹಿಸಬೇಕು. ಹಳ್ಳಿ ಹಳ್ಳಿಗಳಲ್ಲಿ ಸಾಹಿತ್ಯ ಪಸರಿಸಬೇಕಿದೆ ಎಂದರು ಮಾಜಿ ಶಾಸಕ ವಿ.ಎಸ್. ಪಾಟೀಲ ಸಾಂಸ್ಕೃತಿಕ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಉದ್ಘಾಟಿಸಿ ಮಾತನಾಡಿ, ಕನ್ನಡ ಅಭಿಮಾನ ಕಾರ್ಯಕ್ರಮ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಕನ್ನಡವನ್ನು ಉಳಿಸಬೇಕಾದರೆ ವರ್ಷಕ್ಕೆ ಒಂದು ಕಾರ್ಯಕ್ರಮ ಮಾಡಿದರೆ ಸಾಲುವುದಿಲ್ಲ. ಬದಲಾಗಿ ವರ್ಷವಿಡೀ ಕನ್ನಡವನ್ನು ಬೆಳೆಸಿ ಉಳಿಸುವ ಕೆಲಸ ನಡೆಯಬೇಕು. ಸರ್ಕಾರ ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದರುಶಾಸಕ ಶಿವರಾಮ ಹೆಬ್ಬಾರ ಇಲ್ಲಿಯ ಪ್ರವಾಸಿ ಮಂದಿರದ ಆವರಣದಲ್ಲಿ ಸಮ್ಮೇಳನಾಧ್ಯಕ್ಷರಿಗೆ ಕಿರೀಟ ತೊಡಿಸಿ ಮೆರವಣಿಗೆ ರಥಕ್ಕೆ ಚಾಲನೆ ನೀಡಿದರು. ತಹಶೀಲ್ದಾರ್ ಶಂಕರ್ ಗೌಡಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಧ್ವಜಾರೋಹಣವನ್ನು ಮುಂಡಗೋಡ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಸಂತ ಕೊಣಸಾಲಿ ನೆರವೇರಿಸಿದರು. ಸಾಹಿತಿ ಪುಟ್ಟು ಕುಲಕರ್ಣಿ, ಡಾ. ಎಂ.ಸಿ. ವಾಲಿ ಗುರೂಜಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರೋಹಿದಾಸ ನಾಯ್ಕ, ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ ಸುಭಾಸ ಡೋರಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಸ್. ಫಕ್ಕೀರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ಶಾರದಾ ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ರಮೇಶ ಅಂಬಿಗೇರ, ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ, ತಾಲೂಕಾ ಕಸಾಪ ಗೌರವ ಕಾರ್ಯದರ್ಶಿಗಳಾದ ಎಸ್.ಡಿ. ಮುಡೆಣ್ಣವರ್ ಮತ್ತು ವಿನಾಯಕ ಶೇಟ ಹಾಗೂ ಗೌರವ ಕೋಶಾಧ್ಯಕ್ಷ ನಾಗರಾಜ ಅರ್ಕಸಾಲಿ ಮುಂತಾದವರಿದ್ದರು. ಬಾಲಚಂದ್ರ ಹೆಗಡೆ, ದಿನೇಶ ವೆರ್ಣೇಕರ ಹಾಗೂ ವೈಶಾಲಿ ಶ್ರೀನಿವಾಸ ನಿರೂಪಿಸಿದರು. ಸಂತೋಷ ತಳವಾರ ವಂದಿಸಿದರು.