ಸೊಳ್ಳೆಗಳ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಲಿ: ಸುಭಾಷ

KannadaprabhaNewsNetwork |  
Published : Jul 01, 2024, 01:47 AM IST
ಲಕ್ಷ್ಮೇಶ್ವರ ಉಮಾ ವಿದ್ಯಾಲಯದಲ್ಲಿ ತಾಲೂಕ ಮಟ್ಟದ ಶಾಲಾ ಶಿಕ್ಷಕರ ಮಾಹಿತಿ ಕಾರ್ಯಾಗಾರ ನಡೆಯಿತು. | Kannada Prabha

ಸಾರಾಂಶ

ಹಗಲು ಹೊತ್ತು ಕಚ್ಚುವ ಈಡೀಸ್ ಸೊಳ್ಳೆಗಳಿಂದ ಡೆಂಘೀ ಬರುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು.

ಲಕ್ಷ್ಮೇಶ್ವರ: ಹಗಲು ಹೊತ್ತು ಕಚ್ಚುವ ಈಡೀಸ್ ಜಾತಿಯ ಸೊಳ್ಳೆಗಳು ಡೆಂಘೀಯಂತಹ ಪ್ರಾಣಾಂತಿಕ ಕಾಯಿಲೆ ಉಂಟು ಮಾಡಬಲ್ಲವು. ಅದಕ್ಕಾಗಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಶಿರಹಟ್ಟಿ ತಾಲೂಕು ಆರೋಗ್ಯ ಅಧಿಕಾರಿ ಸುಭಾಷ ದಾಯಗೊಂಡ ಹೇಳಿದರು.

ಪಟ್ಟಣದ ಉಮಾ ವಿದ್ಯಾಲಯದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ ಗದಗ, ಲಕ್ಷ್ಮೇಶ್ವರ ತಾಲೂಕು ಆಡಳಿತ, ಶಿರಹಟ್ಟಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರ, ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಡೆಂಘೀ ವಿರೋಧಿ ಮಾಸಾಚರಣೆ ಅಂಗವಾಗಿ ಜರುಗಿದ ತಾಲೂಕು ಮಟ್ಟದ ಶಾಲಾ ಶಿಕ್ಷಕರ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಗಲು ಹೊತ್ತು ಕಚ್ಚುವ ಈಡೀಸ್ ಸೊಳ್ಳೆಗಳಿಂದ ಡೆಂಘೀ ಬರುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು. ಮನೆಯ ಸುತ್ತಮುತ್ತ ಕಸವನ್ನು ಎಲ್ಲಿ ಬೇಕೆಂದಲ್ಲಿ ಎಸೆಯಬಾರದು. ಇದರಿಂದ ಅಪಾಯಕಾರಿ ಸೊಳ್ಳೆ ಹಾಗೂ ಇನ್ನಿತರ ಕ್ರಿಮಿ-ಕೀಟಗಳು ಉತ್ಪತ್ತಿ ಆಗುವುದರಿಂದ ಸಾರ್ವಜನಿಕರಿಗೆ ರೋಗ-ರುಜಿನಗಳು ಹರಡಲು ಕಾರಣವಾಗುತ್ತದೆ ಎಂದರು.

ಜಿಲ್ಲಾ ಕೀಟಶಾಸ್ತ್ರಜ್ಞೆ ಅನ್ನಪೂರ್ಣೇಶ್ವರಿ ಶೆಟ್ಟರ ಮಾತನಾಡಿ, ಮನುಷ್ಯನ ದೇಹದಲ್ಲಿರುವ ಪ್ರೋಟೀನ್ ತಿಂದು ಬದುಕುವ ಈಡಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಮಾರಣಾಂತಿಕ ಡೆಂಘೀ ಬರುತ್ತದೆ. ಇವುಗಳು ಸ್ವಚ್ಛ ನೀರಿನಲ್ಲಿ ಸಂತಾನ ಅಭಿವೃದ್ಧಿ ಮಾಡುತ್ತವೆ. ಅದಕ್ಕಾಗಿ ನಮ್ಮ ಸುತ್ತಮುತ್ತಲು ಹಾಗೂ ಮನೆ, ಶಾಲೆಗಳಲ್ಲಿ ನೀರನ್ನು ತೆರೆದಿಡಬಾರದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಮುಖಾಂತರ ಸ್ವಚ್ಛತೆ, ಆರೋಗ್ಯ, ಮತ್ತು ನೈರ್ಮಲ್ಯದ ಕುರಿತಾಗಿ ಜಾಗೃತಿ ಮೂಡಿಸುವ ಸಂದೇಶವನ್ನು ಸಮಾಜಕ್ಕೆ ನೀಡಬೇಕಾಗಿದೆ. ನಮ್ಮ ಶಿಕ್ಷಕರು ಅದನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಎಸ್. ಹಿರೇಮಠ, ಆರೋಗ್ಯ ಶಿಕ್ಷಣಾಧಿಕಾರಿ ಜಗದೀಶ ಕೋಡಿಹಳ್ಳಿ, ಶಿಗ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಎಸ್. ಕರ್ಜಗಿ, ಸೂರಣಗಿಯ ಎಫ್.ಬಿ. ಹೂಗಾರ ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ನೀಡಿದರು.

ಉಮಾ ವಿದ್ಯಾಲಯ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ವಿ.ಡಿ. ಹುಲಬಜಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕಾಂಬಳೆ, ಶಿರಹಟ್ಟಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಚ್.ಟಿ. ಬಿಜ್ಜುರ, ಲಕ್ಷ್ಮೇಶ್ವರ ಘಟಕದ ಕಾರ್ಯದರ್ಶಿ ಗಿರೀಶ ಸುಗಜಾನರ, ಹಿರಿಯ ಶಿಕ್ಷಕ ಪಿ.ಎಸ್. ಪುರಾಣಕಮಠ, ಇಸಿಒ ಉಮೇಶ ಹುಚ್ಚಯ್ಯನಮಠ ಮಾತನಾಡಿದರು.

ಪ್ರೌಢ ವಿಭಾಗದ ಬಿಆರ್‌ಪಿ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕುಗಳ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರು ಭಾಗವಹಿಸಿದ್ದರು. ಸಿಆರ್‌ಪಿ ಸತೀಶ ಬೋಮಲೆ ಕಾರ್ಯಕ್ರಮ ನಿರೂಪಿಸಿದರು. ಉಮೇಶ ನೇಕಾರ ಸ್ವಾಗತಿಸಿದರು. ಎನ್.ಎ. ಮುಲ್ಲಾ ವಂದಿಸಿದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ