ಕನ್ನಡಪ್ರಭ ವಾರ್ತೆ ಹೊನ್ನಾವರ
ತಾಲೂಕಿನ ಗೇರುಸೊಪ್ಪದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಿಂದ ನಡೆಯುತ್ತಿರುವ ಸಂಸ್ಕೃತಿ ಕುಂಭ - ಮಲೆನಾಡ ಉತ್ಸವ - 2026ರ ಮೂರನೇ ದಿನವಾದ ಭಾನುವಾರ ಪಶ್ಚಿಮ ಘಟ್ಟದ ರಕ್ಷಣೆಗಾಗಿ ಜನಾಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಡು, ನದಿ, ಭೂಮಿ, ಪರಿಸರ, ಪ್ರಕೃತಿಯ ರಕ್ಷಣೆಯ ಹೋರಾಟಕ್ಕೆ ಓರ್ವ ವ್ಯಕ್ತಿ ನೇತೃತ್ವ ನೀಡುತ್ತಿದ್ದಾರೆ ಎಂಬುದು ಸಣ್ಣ ವಿಚಾರವಲ್ಲ. ಶ್ರೀ ರಾಮಚಂದ್ರ ಪ್ರಕೃತಿಯ ರಕ್ಷಕನಾಗಿದ್ದು, ಪ್ರಕೃತಿಯ ರಕ್ಷಣೆ ಸನಾತನ ಧರ್ಮದ ಭಾಗವಾಗಿದೆ. ಶರಾವತಿ ನದಿಯ ರಕ್ಷಣೆಗೆ ಈ ನಾಡಿನ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಅವರು ಹೇಳಿದರು.ಸಾಧು-ಸಂತರು ಪ್ರಕೃತಿಯ ರಕ್ಷಕರಾಗಿದ್ದರು. ಇಂದು ಸಾಧು ಸಂತರು ಪ್ರಕೃತಿ ರಕ್ಷಣೆಯನ್ನು ಮರೆತು ಇನ್ಯಾವುದೋ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವಾಗ ಸಾಧು-ಸಂತರು ಪ್ರಕೃತಿ ಉಳಿಸುವ ಕಾರ್ಯದಿಂದ ದೂರ ಉಳಿದರೋ ಅಂದಿನಿಂದ ಕಲಿಯುವ ಆರಂಭವಾಯಿತು. ಸಾಧು ಸಂತರು ಪ್ರಕೃತಿಯ ಉಳಿವಿಗೆ ಮತ್ತೆ ಮುಂದಾದರೆ ಸನಾತನ ಯುಗ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಶೇ.84 ಅರಣ್ಯ ಇತ್ತು. ಪ್ರಸಕ್ತ ಕೇವಲ ಶೇ.44 ಇದೆ. ಶೇ.40 ಕಾಡು ಏನಾಯಿತು. ಯಾರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗೆ ಮುಂದಿವರಿದರೆ ಮುಂದಿನ ಪೀಳಿಗೆಯ ಪಾಡೇನು. ವಿನಾಶಕಾರಿ ಜನರಿಂದ ಪ್ರಕೃತಿ ನಾಶವಾಗುವುದನ್ನು ತಡೆಯುವವರನ್ನು ನಾನು ದೇವರ ದಾಸರೆಂದೇ ಗುರುತಿಸುತ್ತೇನೆ ಎಂದರು.
ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಅಧ್ಯಕ್ಷತೆ ಹಾಗೂ ಸಾನಿಧ್ಯ ವಹಿಸಿದ್ದರು. ಯಾದಗಿರಿ ಅದೋನಿ ಶಂಕರಾನಂದ ಸರಸ್ವತಿ ಮಹಾಸಂಸ್ಥಾನಮ್ ಶಾರದಾ ದತ್ತಪೀಠದ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತಿ ಮಹಾಸ್ವಾಮಿ, ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಉಪಸ್ಥಿತರಿದ್ದು ಉಪದೇಶ ನೀಡಿದರು.
ಕಪ್ಪೆ ಶಾಸ್ತ್ರಜ್ಞ ಪ್ರೊ. ಡಾ. ಗುರುರಾಜ್ ಕೆ.ವಿ., ಪರಿಸರವಾದಿ, ಕೃಷಿ ಪತ್ರಕರ್ತ, ಲೇಖಕ ಶಿವಾನಂದ ಕಳವೆ, ಪರಿಸರ ಹೋರಾಟಗಾರ ದಿನೇಶ್ ಹೊಳ್ಳ, ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ಉಪಸ್ಥಿತರಿದ್ದು ಸಂವಾದ ನಡೆಸಿದರು.ಸಭಾ ಕಾರ್ಯಕ್ರಮಕ್ಕೂ ಮೊದಲು ಗೇರುಸೊಪ್ಪ ಕ್ಷೇತ್ರದ ವನವಾಸಿ ಸೀತಾ ರಾಮ ಮಂದಿರದಿಂದ ಬಂಗಾರಮಕ್ಕಿ ಕ್ಷೇತ್ರದ ವರೆಗೆ ಶರಾವತಿ ಉಳಿಸಿ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು. ಬಳಿಕ ಪಶ್ಚಿಮ ಘಟ್ಟದ ಮಾಹಿತಿ ಫಲಕವನ್ನು ಡಾ. ರಾಜೇಂದ್ರ ಸಿಂಗ್ ಉದ್ಘಾಟಿಸಿದರು.