ಕಾರಟಗಿ: ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿ
ಕನ್ನಡಪ್ರಭ ವಾರ್ತೆ ಕಾರಟಗಿಬಕ್ರೀದ್ ಹಬ್ಬ ತ್ಯಾಗ, ಬಲಿದಾನಗಳ ಸಂಕೇತ. ಪ್ರತಿಯೊಬ್ಬರಿಗೂ ಒಳಿತಾಗಲಿ ಎಂಬ ಉದ್ದೇಶವನ್ನಿಟ್ಟುಕೊಂಡು ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಗುತ್ತದೆ ಬಕ್ರೀದ್ ಹಬ್ಬದ ಆಚರಣೆಯೊಂದಿಗೆ ಪ್ರತಿಯೊಬ್ಬರು ಸಹೋದರರಂತೆ ಜೀವನ ನಡೆಸುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದಲ್ಲಿನ ವಲಿಸಾಹೇಬ್ ದರ್ಗಾ ಆವರಣದಲ್ಲಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ನಡೆದ ಸಾಮೂಹಿಕ ಪ್ರಾರ್ಥನೆ ನಂತರ ಮುಸ್ಲಿಂ ಸಮುದಾಯದ ಮುಖಂಡರಿಗೆ ಶುಭಾಶಯ ವಿನಿಮಯ ಮಾಡಿದ ಸಚಿವರು, ಮುಸ್ಲಿಂರು ಸಾಮೂಹಿಕವಾಗಿ ಪ್ರಾರ್ಥನೆ ಮಾಡಿ ಸರ್ವರಿಗೂ ಒಳಿತಾಗಲಿ ಎಂದು ಬಯಸುತ್ತಾರೆ. ಹಾಗಾಗಿ ಹಿಂದೂ-ಮುಸ್ಲಿಂರೆಲ್ಲರೂ ಸಹೋದರರಂತೆ ಜೀವಿಸಬೇಕು ಎಂದು ಕರೆ ನೀಡಿದರು.ಪಟ್ಟಣ ವಿವಿಧ ವಾರ್ಡ್‌ಗಳಲ್ಲಿನ ಮುಸ್ಲಿಂ ಬಾಂಧವರು ಎಲ್ಲರೂ ಸೇರಿ ಈದ್ಗಾ ಮೈದಾನದಲ್ಲಿ ಜಮಾಯಿಸಿದರು. ನಂತರ ಸಾಮೂಹಿಕ ಪ್ರಾರ್ಥನೆ ಮಾಡಿದರು. ಮುಸ್ಲಿಂ ಬಾಂಧವರೊಂದಿಗೆ ಸಚಿವ ತಂಗಡಗಿ ಸಹ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸಮಾಜದ ಪ್ರಮುಖರಾದ ಎಸ್.ಎಂ. ಜಿಲಾನಿಸಾಬ್, ಡಾ. ಎಂ.ಐ. ಮುದುಗಲ್, ಖಾಜಾಹುಸೇನ್ ಮುಲ್ಲಾ, ಅಮ್ರುಲ್ ಹುಸೇನ್, ಅಮ್ಜದ್ ಕಬಾಲಿ, ಬಾಬುಸಾಬ್ ಬಳಿಗಾರ್, ಗನಿಸಾಬ್, ಸಿರಾಜ್‌ಹುಸೇನ್, ಯೂಸೂಫ್, ಶಾಕೀರ್ ಹುಸೇನ್, ಅಮನ್, ಇಬ್ರಾಹಿಂ ಅಮ್ದಹಾಳ್ ಸೇರಿದಂತೆ ಇತರರಿದ್ದರು.
ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ತಂಗಡಗಿ:ದೇಶದ ವಿವಿಧ ರಾಜ್ಯಗಳನ್ನು ನೋಡಿದಾಗ ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ ಇದೆ. ಬಿಜೆಪಿಗರು ಪೆಟ್ರೋಲ್ ದರ ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಬದಲು ನಮಗೆ ಸಲಹೆ ನೀಡಲು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿಗರ ಹೋರಾಟಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಬೆಲೆ ಏರಿಕೆ ಕ್ರಮವನ್ನು ಸಮರ್ಥಿಸಿಕೊಂಡರು.ನಗರದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಸಮುದಾಯದವರೊಂದಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವರ್ಷದಿಂದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿದ್ದೇವೆ, ಸರ್ಕಾರಕ್ಕೆ ಯಾವುದೇ ಆರ್ಥಿಕ ಸಮಸ್ಯೆಯಾಗಿಲ್ಲ. ಗ್ಯಾರಂಟಿ ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದರು.ಇವಿಎಂ ಯಂತ್ರಗಳ ಬಗ್ಗೆ ನಾವು ಮೊದಲಿನಿಂದಲೂ ಪ್ರಶ್ನಿಸುತ್ತಾ ಬರುತ್ತಿದ್ದೇವೆ. ವಿದೇಶಿ ಉದ್ಯಮಿ ಎಲಾನ್ ಮಸ್ಕ್ ಸಹಿತ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯ ಎಂಬ ಹೇಳಿಕೆ ನೀಡಿದ್ದಾರೆ, ಮುಂದುವರೆದ ಅಮೇರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಇವಿಎಂ ಬ್ಯಾನ್ ಮಾಡಲಾಗಿದೆ. ಅದರಂತೆ ಭಾರತದಲ್ಲೂ ಇವಿಎಂ ಬ್ಯಾನ್ ಮಾಡಿ ಮೊದಲು ಇದ್ದ ಪದ್ಧತಿ ಜಾರಿಗೊಳಿಸಲಿ ಎಂದು ಅಗ್ರಹಿಸುತ್ತೇವೆ ಎಂದರು.